ಇಂಪಾದ ‘ಜೀವ ಭಾವದ ಕೊಳಲು’

174

ಮಡಿಕೇರಿಯ ಸಂತ ಜೋಸೆಫ್ ಕಾಲೇಜಿನ ಉಪನ್ಯಾಸಕಿ ಹಾಗೂ ಲೇಖಕಿ ಜಯಲಕ್ಷ್ಮಿ.ಕೆ ಅವರು ಬರೆದ ಕವಿ ಈ.ರವೀಶ್ ಅವರ ‘ಜೀವ ಭಾವದ ಕೊಳಲು’ ಸಂಕಲನದ ಕುರಿತ ಲೇಖಕನ.

ಅನುಭವಗಳ ಸಾರವನ್ನು ಕಲ್ಪನೆಯ ಮೂಸೆಯಲ್ಲಿ ಎರಕ ಹೊಯ್ದಾಗ ಕವನಗಳ ಸೃಷ್ಟಿಯಾಗುತ್ತದೆ ಎನ್ನುವುದು ಕವಿವಾಣಿ. ಹಲವಾರು ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಂಡು ವೃತ್ತಿಯಲ್ಲಿ ಗುಮಾಸ್ಟನಾಗಿ ನಿರತರಾದರೂ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡ ಈ.ರವೀಶ್ ರವರು ಅಕ್ಕರ ಎಂಬ ಕಾವ್ಯನಾಮದಲ್ಲಿ ಕವನಗಳನ್ನು ರಚಿಸುತ್ತಿದ್ದು ‘ಜೀವ ಭಾವದ ಕೊಳಲು’ ಶ್ರೀಯುತರ  ಏಳನೇ ಕೃತಿ. ಬದುಕಿನ ವಿವಿಧ ಆಯಾಮಗಳಲ್ಲಿ ಅವರ ಜೀವನಾನುಭವದ ಅಭಿವ್ಯಕ್ತಿಯೇ ಇಲ್ಲಿನ ಕವನಗಳು ಎಂದೆಸುವುದು. ಯಾವಾಗ ಕವನಗಳಲ್ಲಿ ವ್ಯಕ್ತಗೊಳ್ಳುವ ಅನುಭವಗಳು ಸಾರ್ವತ್ರಿಕ ಅನುಭವಗಳೆಂದು ಭಾಸವಾಗುವುದೋ ಅಂಥ ಕವನಗಳ  ಓದುಗರ ಹೃದಯವನ್ನು ಗೆಲ್ಲುತ್ತವೆ. ಆ ಶಕ್ತಿ ಶ್ರೀಯುತ ರವೀಶ್ ರವರ ಕವನಗಳಲ್ಲಿದೆ.

ಹೊತ್ತು ಹೆತ್ತು ತುತ್ತನ್ನಿತ್ತು ಪೊರೆದ ತಾಯಿಯ ಬಗೆಗಿನ ಕವಿಯ ಭಾವುಕತೆ ಅಮ್ಮ ಕವನದಲ್ಲಿ ಹೃದಯಂಗಮವಾಗಿ ಮೂಡಿ ಬಂದಿದೆ. ಹೊಲಿಗೆ ಯಂತ್ರದಲ್ಲಿ ದುಡಿದು, ಮಕ್ಕಳು ಬದುಕು ಕಟ್ಟಿಕೊಳ್ಳುವವರೆಗೂ ಬಸವಳಿದ ಅಮ್ಮನ ಚಿತ್ರಣವನ್ನು ಮನ ಮುಟ್ಟುವಂತೆ ಚಿತ್ರಿಸಿದ ಕವಿಯ ಭಾವನೆಗಳು ಅನುಭವಗಳು ಬಹುತೇಕ ನಮ್ಮೆಲ್ಲರ ಅನುಭವಗಳೇ ಆಗಿವೆ. ಸಾಧನಕೇರಿಯ ಸಾಧಕ ನಾಕುತಂತೀಯ ಸರದಾರ ಬೇಂದ್ರೆಯವರನ್ನು ರವೀಶ್ ರವರು ಶ್ಲಾಘಿಸಿದ ರೀತಿ ಅವರಿಗೆ ಕವಿವರೇಣ್ಯರ ಬಗೆಗಿರುವ ಗೌರವಾಭಿಮಾನಕ್ಕೆ ಸಾಕ್ಷಿ. ಶ್ರಮದ ಜೊತೆಗೆ ದೈವ ಬಲವೂ ಸೇರಿದಾಗ ಸಾಧಿಸಬೇಕಾದದ್ದು ತಾನಾಗಿಯೇ ಸಾಧಿಸಲ್ಪಡುತ್ತದೆ ಎನ್ನುವುದಕ್ಕೆ ತಾಯಿ ಭುವನೇಶ್ವರಿ ಧ್ವಜಸ್ತಂಭವಿರುವ ಬೇಂದ್ರೆ ಪುಸ್ತಕ ಮನೆಯಿಂದ ಅಲಂಕ್ರತವಾದ ತನ್ನ ನಿವಾಸವೇ ನಿದರ್ಶನ ಎನ್ನುವುದನ್ನು’ ಕನಸಿನರಮನೆ’ ಯಲ್ಲಿ ಚೊಕ್ಕವಾಗಿ ಚಿತ್ರಿಸಿದ್ದಾರೆ.

ಕವಿ ತನಗೆ ಸಮಾಜಮುಖಿ ಸೇವೆಯಲ್ಲಿ ತೊಡಗಲು ಅಪ್ಪನೇ ಪ್ರೇರಣೆ ಎನ್ನುವಲ್ಲಿ ತಂದೆಯ ಬಗೆಗಿನ ಹೆಮ್ಮೆ ವ್ಯಕ್ತವಾಗಿದೆ. ಸರಳ ಸಜ್ಜನಿಕೆಯ ಅಪ್ಪನ ಆಶಯದಂತೆ ಸರಳ ಬದುಕಿನ ದಾರಿ ಹಿಡಿದಿರುವ ರವೀಶ್ ರವರು ಹಿರಿಯರು ಕಿರಿಯರಿಗೆ ದಾರಿಪೀಪ ಆಗಬೇಕು ಎನ್ನುವ ಕಿವಿಮಾತನ್ನು ಕೂಡಾ ಪರೋಕ್ಷವಾಗಿ ನೀಡಿದ್ದಾರೆ. ಹೆಣ್ಣುಮಕ್ಕಳ ಲಾಸ್ಯ ಲಾವಣ್ಯಗಳ ಆರಾಧಕನಾಗಿ, ಬಾಳ ಬಂಡಿಗೆ ಹೆಗಲುಗೊಟ್ಟು ಸಾಗುವ ಅರ್ದ್ಧಾಂಗಿಯ ಪ್ರೇರಕನಾಗಿ, ಒಡಹುಟ್ಟಿದ ಸೋದರಿಯರಿಗೆ ಪಿತೃವಾತ್ಸಲ್ಯ ತೋರುವ ಅಣ್ಣನಾಗಿ ಕವಿ ಬದುಕು ಸಾಗಿಸುತ್ತಿರುವುದು ಕವನಗಳಿಂದ ವೇದ್ಯವಾಗುತ್ತದೆ. ಸ್ನೇಹ ಚಿರನೂತನ. ಅಂಥ 25 ವರ್ಷಗಳ ಸ್ನೇಹ ಪಡೆದ ಕವಿಯ ಧನ್ಯತಾ ಭಾವ ಕೂಡಾ ಕವನದಲ್ಲಿ ವ್ಯಕ್ತವಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ನಿಲುವು ಹೇಗಿರಬೇಕು ಎಂದು ಹೇಳುವ ಕವಿ ಆತ್ಮೀಯರನ್ನು ಕುರಿತು ತನ್ನನ್ನು ಬ್ಲಾಕ್ ಮಾಡದಿರಿ ಕೊಚ್ಚಿ ಹೋಗದ ಹಾಗೆ  ಸ್ನೇಹವೆಂಬ ಪ್ರವಾಹ ಸದಾ ಇರುವ ಹಾಗೆ ಕಾಯಿರಿ ಎಂದು ವಿನಂತಿಮಾಡಿಕೊಳ್ಳುತ್ತಾರೆ. ಸ್ನೇಹ – ಸಮ್ಮಿಲನಕ್ಕಾಗಿಯೇ ತಮ್ಮ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಎನ್ನುವುದನ್ನು ಕೂಡಾ ತಮ್ಮ ಕವನದ ಮೂಲಕ ಬಿಂಬಿಸಿದ್ದಾರೆ. ಅಹಂಕಾರ ಬಿಟ್ಟು ಸಹಕಾರ ನೀಡುವ ಮನೋಭಾವನೆ ನಮ್ಮಲ್ಲಿ ಮೂಡಬೇಕು ಎನ್ನುವ ನೀತಿ’ ಅಹಂಕಾರ ಬಿಡಲಿಲ್ಲ’ ಕವನದ ನೀತಿಯಾದರೆ, ರೈತರನ್ನು ಪ್ರೋತ್ಸಾಹಿಸಿ ಎನ್ನುವ ಕರೆ’ ಎಳನೀರು’ ಕವನದಲ್ಲಿದೆ. ಆಡಂಬರದ ಅಕ್ಷಯ ತೃತೀಯದ ಹೊರತಾಗಿ ಮರ ನೆಡುವ ಪರಿಸರ ಸ್ನೇಹಿಯಾಗು ಎನ್ನುವ ಕವಿಯ ಕರೆ ಇಷ್ಟವಾಗುತ್ತದೆ. ಬಾಲ್ಯವಿಲ್ಲ, ಸುಖ ಕಂಡಿಲ್ಲ ಆದರೂ ಯಂತ್ರದಂತೆ ದುಡಿದು ಬದುಕು ಕಟ್ಟಿಕೊಳ್ಳುವ ಛಲ ಬಿಟ್ಟಿಲ್ಲ ಎನ್ನುವ ರವೀಶ್ ಸುಂದರ ಬದುಕು ನಾಳೆ ಸಿಕ್ಕೀತು ಎನ್ನುವ ಭರವಸೆಯೊಂದಿಗೆ ನಾವೆಲ್ಲರೂ ಬಾಳಬೇಕು ಎನ್ನುವ  ಸೂಕ್ಷ್ಮವನ್ನು ಕವನದ ಮೂಲಕ ಸಾರಿದ್ದಾರೆ.

ಬರಹ ವ್ಯಕ್ತಿತ್ವದ ಕೈಗನ್ನಡಿ ಎನ್ನುವ ಮಾತೊಂದಿದೆ. ಶ್ರೀಯುತ ರವೀಶ್ ರವರ ಬರಹಗಳಲ್ಲಿ ಅವರು ನಾರಿಯರಿಗೆ ಕೊಟ್ಟ ವಿಶಿಷ್ಟ ಸ್ಥಾನ ನಿಜಕ್ಕೂ ಹೆಮ್ಮೆ ಎನಿಸುವಂತೆ ಇದೆ. ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಃ ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ  ಅಲ್ಲಿ ದೇವತೆಗಳು ಸಂತುಷ್ಟರಾಗುತ್ತಾತೆ ಎನ್ನುವಂತೆ ಅಮ್ಮನ ಚಿತ್ರಣವಿರಲಿ, ಸೋದರಿಯರ, ಗೆಳತಿಯರ ಯಾರ  ಚಿತ್ರಣವೇ ಆಗಿರಲಿ ರವೀಶ್ ರವರ ಕವನಗಳಲ್ಲಿ ಅದೊಂದು ಅಪೂರ್ವ ಗೌರವ ಭಾವನೆ ವ್ಯಕ್ತವಾಗುತ್ತದೆ. ಇದು ಈ ಕವನ ಸಂಕಲನದ ಹಿರಿಮೆಯೂ ಹೌದು.

ಯಾವ ಕೃತಿಯೇ ಆಗಿರಲಿ ಓದಿ ಮುಗಿಸಿದಾಗ ಒಂದಷ್ಟು ಮೌಲ್ಯಗಳು  ಓದುಗರ ಮೋನೋಲೋಕದಲ್ಲಿ ಸ್ಥಿರವಾದರೆ ಆ ಕೃತಿಯ ಹುಟ್ಟು ಸಾರ್ಥಕವಾಗುತ್ತದೆ. ಎಲ್ಲರನ್ನೂ, ಎಲ್ಲವನ್ನೂ ವ್ಯಾಪಾರೀ ಮನೋಭಾವದಿಂದ ನೋಡುವ ಇಂದಿನ ದಿನಗಳಲ್ಲಿ ಕರ್ತವ್ಯ ಎಂದು ತಿಳಿದು ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗಬೇಕಾದ, ಪ್ರೀತಿ ಮಮತೆ, ಬಾಂಧವ್ಯಗಳ ಕೊಂಡಿ ಯಾವ ಸಂಧರ್ಭದಲ್ಲಿ ಕೂಡಾ ಕಳಚಿ ಹೋಗದಂತೆ ಕಾಯ್ದುಕೊಳ್ಳಬೇಕಾದ   ಅವಶ್ಯಕತೆಯನ್ನು “ಜೀವ ಭಾವದ ಕೊಳಲು” ಚೊಕ್ಕವಾಗಿ ಅರುಹುತ್ತದೆ.

ಒಟ್ಟಿನಲ್ಲಿ ತಾವು ಕಂಡ, ಅನುಭವಿಸಿದ ವಿಷಯ ವಿಶೇಷತೆಗಳ ಸಾರವನ್ನು ಕವನಗಳ ಮೂಲಕ ಪ್ರಸ್ತುತಪಡಿಸಿದ ಕವಿ ತನ್ನ ಜೀವ ಭಾವದ ಕೊಳಲು ಕೃತಿಯ ಮೂಲಕ ಹಲವಾರು ಜೀವನ ಮೌಲ್ಯಗಳನ್ನು ಸಾರಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಇವರಿಂದ ಇನ್ನಷ್ಟು ಕೊಡುಗೆಗಳು ಸಲ್ಲಲಿ, ಇವರ ಸಮಾಜಮುಖಿ ಸೇವೆಗಳು ನಿರಂತರವಾಗಿ ಸಾಗಲಿ ಎಂದು ಆಶೀಸೋಣ.




Leave a Reply

Your email address will not be published. Required fields are marked *

error: Content is protected !!