75ನೇ ಸ್ವಾತಂತ್ರ್ಯೋತ್ಸವ: ಆರೂರು ಗೆಳೆಯರ ಬಳಗದ ಜಗ ಮೆಚ್ಚುವ ಕಾಯಕ

390

ಪ್ರಜಾಸ್ತ್ರ ವಿಶೇಷ, ನಾಗೇಶ ತಳವಾರ

ದೇವರಹಿಪ್ಪರಗಿ: ಸಾಮಾಜಿಕ ಬದ್ಧತೆ, ಸಮಾಜಮುಖಿ ಚಿಂತನೆ, ಸಮಸಮಾಜದ ತತ್ವಗಳು ಮೈಗೂಡಿಸಿಕೊಂಡಾಗ ಸದಾ ಒಳ್ಳೆಯ ಕೆಲಸಗಳು ಮಾಡಲು ಸಾಧ್ಯ ಅನ್ನೋದಕ್ಕೆ ಆರೂರು ಗೆಳೆಯರ ಬಳಗ ಸಾಕ್ಷಿಯಾಗಿದೆ. ಒಂದಿಷ್ಟು ಯುವ ಮನಸ್ಸುಗಳು ಕೂಡಿಕೊಂಡು ತನ್ನೂರಿಗೆ, ತಾಲೂಕಿಗೆ, ಜಿಲ್ಲೆಗೆ ಏನಾದರೂ ಕೊಡುಗೆ ನೀಡಬೇಕು ಅನ್ನೋ ನಿಟ್ಟಿನಲ್ಲಿ ಕ್ರಿಯಾಶೀಲವಾಗಿರುವ ತಂಡ ಗ್ರಂಥಾಲಯವೊಂದನ್ನು ನಿರ್ಮಿಸಿದೆ.

ಗ್ರಾಮ ಪಂಚಾಯ್ತಿ ಇವರ ಸಹಯೋಗದಲ್ಲಿ ಆರೂರು ಗೆಳೆಯರ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಬಸವ ಪಾಟೀಲ, ಚಂದ್ರಕಾಂತ ಸೊನ್ನದ ಹಾಗೂ ಅಧ್ಯಕ್ಷ ಮಡಿವಾಳಪ್ಪ ಕರದಾಳಿ ಅವರು, 75ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ಒಂದೊಳ್ಳೆ ಕೆಲಸ ಮಾಡಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಸೇರಿದಂತೆ ದಾರ್ಶನಿಕರು ಹೇಳಿರುವಂತೆ ಗ್ರಂಥಾಲಯ ಸ್ಥಾಪಿಸಿ, ಗ್ರಾಮೀಣ ಭಾಗದ ಮಕ್ಕಳಿಗೆ ಜ್ಞಾನ ಸಿಗುವಂತೆ ಮಾಡಿದ್ದಾರೆ.

ಗ್ರಾಮ ಪಂಚಾಯ್ತಿ ಅವರು ಕಟ್ಟಡದ ವ್ಯವಸ್ಥೆ ಮಾಡಿದ್ದಾರೆ. ಆರೂರು ಗೆಳೆಯರ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಬಸವ ಪಾಟೀಲ 25 ಸಾವಿರ ರೂಪಾಯಿ ಹಾಗೂ ಚಂದ್ರಕಾಂತ ಸೊನ್ನದ ಅವರು 10 ಸಾವಿರ ರೂಪಾಯಿ ಮೊತ್ತದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಮೊದಲ ಹಂತದಲ್ಲಿ ಸುಮಾರು 238ಕ್ಕೂ ಹೆಚ್ಚು ಪುಸ್ತಕಗಳು ಬಂದಿದ್ದು, 75ನೇ ಸ್ವಾತಂತ್ರ್ಯ ದಿನಾಚರಣೆಯಂದು ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಗ್ರಂಥಾಲಯ ಲೋಕಾರ್ಪಣೆಗೊಂಡಿದೆ.

ಕ್ರಿಯಾಶೀಲ ಆರೂರು ಗೆಳೆಯರ ಬಳಗ:

ಯುವಕರು ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಅನ್ನೋದನ್ನು ಆರೂರು ಗೆಳೆಯರ ಬಳಗ ಸಾಬೀತು ಮಾಡುತ್ತಲೇ ಇದೆ. ರಸ್ತೆ ನಿರ್ಮಾಣಕ್ಕಾಗಿ ಹೋರಾಟ, ಲಾಕ್ ಡೌನ್ ಸಂದರ್ಭದಲ್ಲಿ ಬಾಣಂತಿಯರಿಗೆ ಆರೋಗ್ಯದ ಕಿಟ್, ಶರಣರ ವಚನ ಗೋಷ್ಠಿ, ಸ್ಪರ್ಧೆ(ಇತ್ತೀಚೆಗೆ ಮಡಿವಾಳ ಮಾಚಿದೇವ ಜಿಲ್ಲಾ ಮಟ್ಟದ ವಚನ ಸ್ಪರ್ಧೆ ಆಯೋಜಿಸಿದ್ದರು.) ಸೇರಿದಂತೆ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಲಂಡನ್ ನಲ್ಲಿರುವ ಬಸವ ಪಾಟೀಲ, ಬೆಂಗಳೂರಿನಲ್ಲಿರುವ ಚಂದ್ರಕಾಂತ ಸೊನ್ನದ ಅವರು ಆರೂರು ಗೆಳೆಯರ ಬಳಗದ ರೂವಾರಿಗಳಾಗಿದ್ದು, ಅವರ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮಡಿವಾಳಪ್ಪ ಕರದಾಳಿ ತರಹದ ಯುವ ಪಡೆ ಇರುವುದು ಇತರರಿಗೆ ಮಾದರಿಯಾಗಿದೆ. ಇವರ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿಯೂ ವೈರಲ್ ಆಗುತ್ತಿದೆ. ಪುಸ್ತಕ ಕಳುಹಿಸುವವರು 9901195557 ನಂಬರ್ ಸಂಪರ್ಕಿಸಬಹುದಾಗಿದೆ.




Leave a Reply

Your email address will not be published. Required fields are marked *

error: Content is protected !!