ತಮ್ಮ ಬದುಕಿನ ಸೇತುವೆ ತಾವೇ ನಿರ್ಮಿಸಿಕೊಂಡ ನೇಗಿಲಯೋಗಿ

352

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ಅಧಿಕಾರಿಗಳ ದಾಖಲೆಯ ಪುಸ್ತಕದಲ್ಲಿ, ಜನಪ್ರತಿನಿಧಿಗಳ ಭಾಷಣದಲ್ಲಿ ಮಾತ್ರ ರೈತ ಈ ದೇಶದ ಬೆನ್ನೆಲುಬು. ಹೀಗಾಗಿ ಆತನ ವಾಸ್ತವ ಸ್ಥಿತಿ ಅರಿಯಲು, ಅವರ ಸಮಸ್ಯೆ ಬಗೆಹರಿಸಲು ಹೆಚ್ಚು ಕಾಳಜಿ ತೋರಿಸುವುದಿಲ್ಲ. ಹೀಗಾಗಿ ಇಂದಿಗೂ ಅನ್ನದಾತ ತನ್ನನ್ನು ತಾನು ಮಾತ್ರ ನಂಬಿದ್ದಾನೆ. ಇಲ್ನೋಡಿ ಬರೋಬ್ಬರಿ 600 ಅಡಿ ಉದ್ದದ ಬ್ಯಾರೆಲ್ ಸೇತುವೆಯನ್ನು ರೈತರೇ ನಿರ್ಮಿಸಿಕೊಂಡಿದ್ದಾರೆ. ಕಾರಣ, ಇವರ ಮನವಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು, ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ.

ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮಸ್ಥರು ತಮ್ಮ ದಶಕಗಳ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಂಡಿದ್ದಾರೆ. ಅದಕ್ಕೆ ತಾವೇ ಹಣ ಹಾಕಿ ಶ್ರಮವಹಿಸಿದ್ದಾರೆ. ಮುಳುಗಡೆ ಗ್ರಾಮವೆನ್ನುವ ಕಾರಣಕ್ಕೆ ಎಲ್ಲರೂ ತಾತ್ಸರ ತೋರಿಸಿದರು. ಹೀಗಾಗಿ ಹೊಲ, ಮನೆಗಳಿಗೆ ಹೋಗಲು ಪಡಬಾರದ ಪಾಡು ಪಟ್ಟರು. ಕೊನೆಗೆ ರೈತರೇ ಕೂಡಿಕೊಂಡು 1 ಸಾವಿರ ರೂಪಾಯಿಯಂತೆ ದೇಣಿಗೆ ಸಂಗ್ರಹಿಸಿದರು. ಕೆಲವರು 10, 20 ಸಾವಿರ ನೀಡಿದರು.  ಇದರ ಪರಿಣಾಮ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಬ್ಯಾರೆಲ್ ಸೇತುವೆಯನ್ನು ಕೃಷ್ಣ ನದಿಗೆ ಅಡ್ಡಲಾಗಿ ನಿರ್ಮಿಸಿಕೊಂಡಿದ್ದಾರೆ.

ಆಲಮಟ್ಟಿ ಜಲಾಯಶದ ಹಿನ್ನೀರಿನಿಂದ ಕಂಕಣವಾಡಿ ಗ್ರಾಮ ಮುಳುಗಡೆಯಾಗಿ ಗ್ರಾಮಸ್ಥರು ಮನೆಗಳನ್ನು ಕಳೆದುಕೊಂಡರು. ಹೀಗಾಗಿ ಅಲ್ಲಿರುವ ಹೊಲಗಳಿಗೆ ಹೋಗಿ ಬರಲು ಶುರು ಮಾಡಿದರು. ಸುಮಾರು 700 ಎಕರೆಯಷ್ಟು ಜಮೀನು ಅಲ್ಲಿದೆ. ಕೃಷ್ಟನದಿ ತುಂಬಿ ಹರಿಯುವಾಗ ಬೋಟ್ ನಲ್ಲಿ ಏಳೆಂಟು ತಿಂಗಳ ಕಾಲ ಸಂಚರಿಸಬೇಕು. ನಂತರದ ದಿನಗಳಲ್ಲಿ ಬೋಟ್ ಸರಿಯಾದ ಸಮಯಕ್ಕೆ ಸಿಗಲ್ಲ. ಹೀಗಾಗಿ ಸೇತುವೆ ನಿರ್ಮಾಣಕ್ಕೆ ರೈತರು ಬೇಡಿಕೆ ಇಟ್ಟು, ಮನವಿ ಮಾಡಿ ಸಾಕಾಗಿ ಹೋಯಿತು. ಆಲಮಟ್ಟಿ  ಜಲಾಶಯ ಮುಂದಿನ ದಿನಗಳಲ್ಲಿ ಎತ್ತರಿಸಿದಾಗ ಹೊಲಗಳು ಸಹ ಮುಳುಗಡೆಯಾಗುತ್ತವೆ ಎಂದು ಸರ್ಕಾರದಿಂದಲೂ ಇಲ್ಲೊಂದು ಸೇತುವೆ ನಿರ್ಮಿಸಲು ಮುಂದಾಗಿಲ್ಲ.

ತಮ್ಮ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಲು ಯುಟ್ಯೂಬ್ ಸಹಾಯವಾಗಿದೆ. ಬಾಂಗ್ಲಾದೇಶದಲ್ಲಿ ಈ ರೀತಿ ಬ್ಯಾರೆಲ್ ಸೇತುವೆ ನಿರ್ಮಿಸಿಕೊಂಡಿರುವುದನ್ನು ನೋಡಿ, 600 ಅಡಿ ಉದ್ದ, 8 ಅಡಿ ಅಗಲದ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಇದರಿಂದಾಗಿ ಐದು ನಿಮಿಷದಲ್ಲಿ ಈ ದಡದಿಂದ ಆ ದಡಕ್ಕೆ ಹೋಗುತ್ತಾರೆ. ಬೈಕ್ ಗಳನ್ನು ಸಹ ತೆಗೆದುಕೊಂಡು ಹೋಗಬಹುದು ಎಂದು ರೈತರು ಹೇಳಿದ್ದಾರೆ. ಆಳುವ ಸರ್ಕಾರ ತನ್ನ ಪ್ರಜೆಗಳ ಯೋಗಕ್ಷೇಮ, ರಕ್ಷಣೆಗೆ ಮುಂದಾಗದೆ ಹೋದಾಗ ನಮ್ಮ ಬದುಕಿಗೆ ನಾವೇ ದಾರಿ ಮಾಡಿಕೊಳ್ಳಬೇಕು. ಆ ಕೆಲಸವನ್ನು ಇಲ್ಲಿನ ರೈತರು ಮಾಡಿಕೊಂಡು ಸರ್ಕಾರದ ಕಪಾಳಕ್ಕೆ ಹೊಡೆದಂತೆ ಹಾಗೂ ಇತರರಿಗೆ ಮಾದರಿಯಾಗುವಂತೆ ಬ್ಯಾರೆಲ್ ಸೇತುವೆ ನಿರ್ಮಿಸಿಕೊಂಡಿದ್ದಾರೆ.

ಮಾಹಿತಿ ಮತ್ತು ಫೋಟೋ: ವಿಜಯಕುಮಾರ್ ಪವಾರ್, ಹುನ್ನೂರು




Leave a Reply

Your email address will not be published. Required fields are marked *

error: Content is protected !!