ತನ್ನ ಒಡನಾಡಿಯ ನೋವಿಗೆ ಮಿಡಿಯದ ಮೀಡಿಯಾ ಹೃದಯ!

423

ಅಮೆರಿಕಾದ ಖ್ಯಾತ ಪತ್ರಕರ್ತ ಜೇಫರ್ಸನ್ ಹೇಳ್ತಾರೆ, ನನಗೆ ಪತ್ರಿಕೆಗಳಿಲ್ಲದ ಸರ್ಕಾರ ಅಥವ ಸರ್ಕಾರವಿಲ್ಲದ ಪತ್ರಿಕೆಗಳಲ್ಲಿ ಯಾವುದಾದರು ಒಂದನ್ನ ಆಯ್ಕೆ ಮಾಡಿಕೊಳ್ಳಲು ಹೇಳಿದ್ರೆ, ನಾನು ಎರಡನೆಯದ್ದನ್ನೇ ಆಯ್ದುಕೊಳ್ಳಲು ಬಯಸುತ್ತೇನೆ ಎಂದು. ಅಂದ್ರೆ, ಮಾಧ್ಯಮದ ಶಕ್ತಿ ಏನು ಅನ್ನೋದು ಗೊತ್ತಾಗುತ್ತೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡುತ್ತೆ. ಇಡೀ ಸಮಾಜದ ನೋವು, ಸಂಕಷ್ಟಕ್ಕೆ ಆಸರೆಯಾಗಿ ನಿಲ್ಲುತ್ತೆ. ರೋಗಗ್ರಸ್ತ ಆಡಳಿತ ಯಂತ್ರದ ವಿರುದ್ಧ ಚಾಟಿ ಬೀಸುತ್ತಾ, ಸಮಾಜದ ಕಣ್ಣು, ಕಿವಿ, ಬಾಯಿಯಾಗುವ ಮಾಧ್ಯಮ ತನ್ನ ಒಡಲೊಳಗಿನ ಜೀವದ ಮೇಲೆ ತಣ್ಣನೆಯ ಕ್ರೌರ್ಯ ಎಸಗ್ತಿದ್ರೂ ಅದ್ಹೇಗೆ ಮೌನಕ್ಕೆ ಜಾರಿಕೊಂಡಿದೆ ಅನ್ನೋದು ಗೊತ್ತಾಗ್ತಿಲ್ಲ.

ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ನಿರಂತರವಾಗಿ ಹಲ್ಲೆಗಳಾಗ್ತಿರುವುದನ್ನ ನೋಡಿ, ಹಿರಿಯ ಪತ್ರಕರ್ತರಿಂದ ಲೇಖನ ಬರೆಸಬೇಕು ಅಂತಾ ಬಹಳ ಪ್ರಯತ್ನ ಮಾಡಿದೆ. ಆದ್ರೆ, ಏನೇನೋ ಸಬೂಬು ಹೇಳಿದ್ರು. ನಾನು ಸರ್ಕಾರದ ಪರವಿದ್ದೇನೆ. ಅವರು ಇದೀಗ ಬೆಳೆದು ಬಿಟ್ಟಿದ್ದಾರೆ. ಬರೆಯಲ್ಲ ಅಂತಾರೆ. ನನ್ಗೆ ಜಾಹೀರಾತು ಸಿಗೋದಿಲ್ಲ ಅಂತಾ ಹೇಳಿ ನುಣುಚಿಕೊಂಡ್ರು. ತನ್ನ ಕ್ಷೇತ್ರದ ಸಂಗಾತಿಗಳ ಸಂಕಟಕ್ಕೆ ಮಿಡಿಯದಷ್ಟು ಇವರ ಹೃದಯ ಕಲ್ಲಾಯ್ತಾ ಅನ್ನೋ ಪ್ರಶ್ನೆ ಮೂಡಿದೆ.

ನನ್ನೆಲ್ಲ ಪ್ರಯತ್ನಗಳು ಕೈಗೂಡದಾಗ ನಾನೇ ಈ ಲೇಖನವನ್ನ ಕೈಗೆತ್ತಿಕೊಂಡೆ. ರಾಷ್ಟ್ರೀಯ, ರಾಜ್ಯ ಮಟ್ಟದ ಪತ್ರಿಕೆ, ಟಿವಿ ಚಾನೆಲ್ ಗಳು ಇದರ ಬಗ್ಗೆ ಗಟ್ಟಿಯಾದ ಧ್ವನಿ ಎತ್ತಲೇ ಇಲ್ಲವಲ್ಲ ಅನ್ನೋ ನೋವಿದೆ. ಮಾಧ್ಯಮದವರ ಮೇಲೆ ಮಾರಣಾಂತಿಕ ಹಲ್ಲೆ, ಕೊಲೆ ಬೆದರಿಕೆ, ಕೊಡಲಿಯಿಂದ ದಾಳಿ ಮಾಡಿದ್ರೂ ತನ್ನ ವೃತ್ತಿ ಬದುಕಿನ ಒಡನಾಡಿಯ ನೋವಿಗೆ ಸ್ಪಂದಿಸದೆ ಮೌನಕ್ಕೆ ಜಾರಿದ್ದು ನೋಡಿ ಹಿಂಸೆಯಾಯ್ತು.

ಜೂನ್ 12ರಂದು ಉತ್ತರ ಪ್ರದೇಶದ ದಿಮ್ನಾಪುರ ರೈಲು ಹಳಿ ತಪ್ಪಿದ ಸುದ್ದಿ ಮಾಡಲು ಹೋದ ಟಿವಿ ವರದಿಗಾರ ಅಮಿತ ಶರ್ಮಾ ಮೇಲೆ ರೈಲ್ವೆ ಪೊಲೀಸ್ ಅಧಿಕಾರಿ ರಾಕೇಶಕುಮಾರ, ಪೇದೆ ಸುನೀಲಕುಮಾರ ಎಂಬುವವರು ಹಲ್ಲೆ ಮಾಡಿ ಬಾಯಿಯಲ್ಲಿ ಉಚ್ಚೆ ಹೊಯ್ದ ಹೇಯ ಕೃತ್ಯ ನಡೆಯುತ್ತೆ. ಸಣ್ಣದೊಂದು ಸುದ್ದಿಯಾಗುತ್ತೆ. ಆತ ಬಾಯಿ ತೊಳೆದುಕೊಂಡು ಕೆಲಸಕ್ಕೆ ಹೋಗ್ತಾನೆ. ಅಲ್ಲಿಗೆ ಇದರ ಕಥೆ ಮುಗಿಯಿತು.

ಇದರ ಹಿಂದಿನ ದಿನ ಅದೇ ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ ಕುರಿತ ಮಾಹಿತಿಯನ್ನ ಸೋಷಿಯಲ್ ಮೀಡಿಯಾದಲ್ಲಿ ಬರೆದ ಕಾರಣಕ್ಕೆ ಪತ್ರಕರ್ತ ಪ್ರಶಾಂತ ಕನೋಜಿಯಾ ಬಂಧನವಾಗುತ್ತೆ. ಪ್ರಶಾಂತ ಪತ್ನಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದಾಗ, ವಿಚಾರಣೆ ನಡೆಸಿದ ಕೋರ್ಟ್ ಅವರೇನು ಕೊಲೆ ಮಾಡಿದ್ದಾರೆಯೇ ಅಂತಾ ಪ್ರಶ್ನಿಸಿ, ಅವರನ್ನ ಬಿಡುಗಡೆ ಮಾಡಲು ಆದೇಶ ನೀಡುತ್ತೆ.

ಜೂನ್ 13ರಂದು ಬೇಳೂರು ಬಾಯರ್ಸ್ ಕಂಪನಿಯಿಂದ ಸುತ್ತಮುತ್ತಲಿನ ಜನರಿಗೆ ಸಮಸ್ಯೆಯಾಗ್ತಿದೆ ಎಂದು ಸುದ್ದಿ ಮಾಡಲು ಹೋದ ತುಮಕೂರಿನ ವರದಿಗಾರರ ಮೇಲೆ ಹಲ್ಲೆಯಾಗುತ್ತೆ. ಜೂನ್ 19ರಂದು ಬೆಳಗಾವಿಯ ಎಂ.ಕೆ ಹುಬ್ಬಳಿಯ ಸಮೀಪದ ಮೀರಾಪುರದ ಬಳಿ ಪತ್ರಕರ್ತ ಬಸವರಾಜು ಎಂಬುವರ ಮೇಲೆ ಕೊಡಲಿಯಿಂದ ಹಲ್ಲೆ ಮಾಡಲಾಗುತ್ತೆ. ಮೇ 22ರಂದು ನೆಲಮಂಗಲದ ಪತ್ರಕರ್ತನ ಮೇಲೆ ಹಲ್ಲೆಯಾಗುತ್ತೆ. ಮಾರ್ಚ್ 12 ರಂದು ಮೂಡಲಗಿಯ ಪತ್ರಕರ್ತ ಪ್ರಕಾಶ ಕಂಬಾರ ಎಂಬುವರ ಮೇಲೆ 8 ಜನರಿಂದ ಹಲ್ಲೆಯಾಗುತ್ತೆ. ಇಷ್ಟಾದ್ರೂ ಸುದ್ದಿ ಮಾಡುವವರ ನೋವು ಚರ್ಚೆಯಾಗುವುದೇ ಇಲ್ಲ!

ಪತ್ರಕರ್ತನಿಗೂ ಹೆತ್ತವರು, ಕೈ ಹಿಡಿದು ಬಂದವರು, ರಕ್ತ ಹಂಚಿಕೊಂಡು ಹುಟ್ಟಿದವರೆಲ್ಲ ಇರ್ತಾರೆ. ಅವರಿಗೂ ಮನಸ್ಸಿದೆ. ಆ ಮನಸ್ಸಿಗೂ ನೋವಾಗುತ್ತೆ. ತನ್ನವರ ಸ್ಥಿತಿ ಕಂಡ ಕಣ್ಣುಗಳು ತೇವಗೊಳ್ಳುತ್ತವೆ. ಬೇರೆಯವರ ಸಮಸ್ಯೆಗೆ ಹೆಗಲು ಕೊಡುವ ಪತ್ರಕರ್ತನ ಮೇಲೆ ಕಳೆದೊಂದು ತಿಂಗಳಿನಿಂದ ಇಷ್ಟೊಂದು ಹಲ್ಲೆಗಳಾದ್ರೂ ಇದ್ಯಾವುದು ಪ್ರಮುಖ ವಿಷಯ ಅಂತಾ ಯಾವ ಮಾಧ್ಯಮಗಳು ಪರಿಗಣಿಸುವುದಿಲ್ಲ. ತನ್ನ ಸ್ವಂತ ಬದುಕನ್ನ ಲೆಕ್ಕಿಸದೆ ಕೆಲಸ ಮಾಡುವ ಮಾಧ್ಯಮದವರ ಮೇಲೆ ಹಲ್ಲೆಯಾದಾಗ, ದಬ್ಬಾಳಿಕೆಯಾದಾಗ, ಕೊಲೆಯಾದಾಗ(ಕೊಲೆ ನಡೆದ ಉದಾಹರಣೆ ಸಹ ಇವೆ) ಇದೊಂದು ಹೇಯ ಕೃತ್ಯ ಅಂತಾ ಸಂವಿಧಾನದ ನಾಲ್ಕನೇ ಅಂಗ ಗಟ್ಟಿಯಾದ ಧ್ವನಿ ಎತ್ತಿ ಸರ್ಕಾರದ ಕಿವಿ ಹಿಡಿದು ಕೇಳುವ ತಾಕತ್ತು ಪ್ರದರ್ಶನ ಮಾಡಿ ಯಾವ ಕಾಲವಾಯ್ತೋ..

ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು, ಮಂಡ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಮೇಲೆ ಹಲ್ಲೆಯಾದ್ರೆ ನಾನು ಹೊಣೆಯಲ್ಲ ಅಂದಾಗ್ಲೂ ಬಾಯಿಗೆ ಬೀಗ ಹಾಕಿಕೊಂಡು ಅದೇ ಲೋಕಸಭಾ ಕ್ಷೇತ್ರದ ಸುದ್ದಿಯನ್ನ ದಿನದ 24 ಗಂಟೆ ಮಾಡಲಾಯ್ತು. ಪತ್ರಿಕೆಗಳಲ್ಲಿ ಪುಟಗಟ್ಟಲೆ ಬರೆಯಲಾಯ್ತು. ಇದನ್ನ ಖಂಡಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಚರ್ಚೆ ಆಗ್ಲಿಲ್ಲ. ಅದಕ್ಕೂ ನಮ್ಗೂ ಸಂಬಂಧವೇ ಇಲ್ಲದಂತೆ ಉಳಿದಿದ್ದು ನೋಡಿದಾಗ ವಿಚಿತ್ರ ಅನಿಸುತ್ತೆ. ಇಲ್ಲಿ ಹಲ್ಲೆಗೊಳಗಾಗ್ತಿರೋದು, ಅಮಾನವೀಯ ಕೃತ್ಯಕ್ಕೆ ಬಲಿಯಾಗ್ತಿರೋದು ಜನರ ಮಧ್ಯ ಇರುವ ಪತ್ರಕರ್ತ. ಎಸಿ ರೂಮಿನಲ್ಲಿ ಕುಳಿತಿರುವ ಸಂಪಾದಕನಾಗ್ಲಿ, ಅದರ ಮಾಲೀಕನಾಗ್ಲಿ ಅಲ್ಲವಲ್ಲ!

ಆಟೋ ಚಾಲಕರಿಂದ ಹಿಡಿದು ವಕೀಲರ ತನಕ ಸಂಘ, ಸಂಘಟನೆಗಳಿವೆ. ಅವರ ಸಮಸ್ಯೆ ಅಂತಾ ಬಂದಾಗ ಪ್ರತಿಯೊಬ್ಬರು ಒಗ್ಗಟ್ಟಾಗ್ತಾರೆ. ಬೀದಿಗಿಳಿದು ಹೋರಾಡ್ತಾರೆ. ಪಶ್ಚಿಮ ಬಂಗಾಳದಲ್ಲಿ ಜ್ಯೂನಿಯರ್ ಡಾಕ್ಟರ್ಸ್ ಪ್ರತಿಭಟನೆ ಇಡೀ ದೇಶದಾದ್ಯಂತ ವ್ಯಾಪಿಸಿಕೊಂಡು ರೋಗಿಗಳು ಪರದಾಡಿದ್ರು. ಇದರ ಸುದ್ದಿಯನ್ನ ಸತತವಾಗಿ ಮಾಡಿದ ಇದೇ ಮಾಧ್ಯಮ ತನ್ನ ಸಹದ್ಯೋಗಿಗಳ ಪರ ನಿಲ್ಲದೇ ಹೋಯ್ತು. ‘ಮಾಧ್ಯಮ ಕ್ಲಬ್’ಗಳು ಮೂಕ ಪ್ರೇಕ್ಷಕವಾಗಿದ್ದು ದುರಂತ.

ಸರ್ಕಾರ ಯಾವಾಗ್ಲೂ ಮಾಧ್ಯಮವನ್ನ ಕಂಟ್ರೋಲ್ ಮಾಡಲು ನೋಡುತ್ತೆ. ಇದರ ಚಾಳಿಯನ್ನ ಅಧಿಕಾರಿಗಳು, ಪುಡಿರೌಡಿಗಳು ಕಲಿಯುತ್ತಿದ್ದಾರೆ. ಇಂಥವರ ಆಟಕ್ಕೆ ಬ್ರೇಕ್ ಹಾಕಿ, ನಮ್ಮವರ ಪರ ಒಗ್ಗಟ್ಟಾಗಿ ನಿಲ್ಲಬೇಕಿದೆ. ಇಲ್ಲಿ ಯಾವ ಪೇಪರ್, ಚಾನೆಲ್ ಮುಖ್ಯವಲ್ಲ. ಸುದ್ದಿ ವಿಚಾರದಲ್ಲಿ ನಾವೆಲ್ಲ ಸ್ಪರ್ಧಿಗಳಿರಬಹುದು. ಒಂದು ಜೀವದ ಪ್ರಶ್ನೆ ಬಂದಾಗ ನಾವೆಲ್ಲ ಮನುಷ್ಯರು…

(ಚಿತ್ರಗಳು ಇಂಟರ್ ನೆಟ್ ಕೃಪೆ)




Leave a Reply

Your email address will not be published. Required fields are marked *

error: Content is protected !!