ಏಕಾಂಗಿ ಹೋರಾಟಗಾರನ 3 ದಶಕಗಳ ಶ್ರಮಕ್ಕೆ ಸಿಗದ ನ್ಯಾಯ!

524

ಪ್ರಜಾಸ್ತ್ರ ವಿಶೇಷ ಸ್ಟೋರಿ, ನಾಗೇಶ ತಳವಾರ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹಿಕ್ಕನಗುತ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹಳೆಯ ರಕುಮಾಪುರ ಗ್ರಾಮದಲ್ಲಿನ ಸರ್ಕಾರಿ ಜಾಗವನ್ನ ಕಡು ಬಡವರಿಗೆ ಹಂಚಿಕೆ ಮಾಡುವ ಕುರಿತು, ಚಾಂದಕವಟೆ ಗ್ರಾಮದ ಮಡಿವಾಳಪ್ಪ ಈರಪ್ಪ ಹಂದಿಗನೂರ ಎಂಬುವರು ಕಳೆದ 30 ವರ್ಷಗಳಿಂದ ಏಕಾಂಗಿಯಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ.

ಈ ಮೊದಲಿದ್ದ ಊರಿನಲ್ಲಿ ನೀರಿನ ಸಮಸ್ಯೆಯಿಂದ ಸುಮಾರು 80 ವರ್ಷಗಳ ಹಿಂದೆ ಗ್ರಾಮ ತೊರೆದ ಜನರು, ಸುತ್ತಮುತ್ತಲಿನ ಗ್ರಾಮಗಳಿಗೆ ಹೋಗಿ ವಾಸ ಮಾಡುತ್ತಿದ್ದಾರೆ. ಹೀಗಾಗಿ ಹಳೆಯ ರುಕುಮಾಪುರ ಗ್ರಾಮ ಪಾಳುಬಿದ್ದಿದೆ. ಹೀಗಾಗಿ ಸರ್ಕಾರ ನಿವೇಶನ ಮಾಡಿ ಕಡುಬಡವರ ಪಟ್ಟಿ ಮಾಡಿ, ಕಾನೂನು ಪ್ರಕಾರ ಹಂಚಿಕೆ ಮಾಡಿದ್ರೆ, ಜನರು ವಾಪಸ್ ಬಂದು ಇರುವುದಾಗಿ ಹೇಳ್ತಿದ್ದಾರೆ. ಈ ಸಂಬಂಧ ಮಡಿವಾಳಪ್ಪ ಹಂದಿಗನೂರ ಎಂಬುವರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ, ತಹಶ್ಲೀದಾರ್, ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗೆ ಸುಮಾರು ನೂರಕ್ಕೂ ಹೆಚ್ಚು ಅರ್ಜಿಗಳನ್ನ ಸಲ್ಲಿಸಿದ್ದಾರಂತೆ. ಆದ್ರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದು ಅವರು ಆರೋಪಿಸಿದ್ದಾರೆ.

ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರುಕುಮಾಪುರ ಗ್ರಾಮದ ಪಾಳುಬಿದ್ದ ಜಾಗವನ್ನ ಸರ್ವೇ ಮಾಡಿಸಿ, ಗ್ರಾಮಕ್ಕೆ ಬೇಕಾಗಿರುವ ಸೌಲಭ್ಯಗಳನ್ನ ನೀಡಿ, ಮನೆಯಿಲ್ಲದವರನ್ನ ಆಯ್ಕೆ ಮಾಡಿ ಅವರಿಗೆ ಒಂದು ಸೂರು ಮಾಡಿಕೊಂಡಬೇಕೆಂದು ಹೋರಾಟಗಾರ ಮಡಿವಾಳಪ್ಪ ಹಂದಿಗನೂರ ಒತ್ತಾಯಿಸಿದ್ದಾರೆ.

ಮಡಿವಾಳಪ್ಪರ ಸಾಮಾಜಿಕ ಕಾರ್ಯ:

ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದ ಸುಮಾರು 60 ವರ್ಷದ ಮಡಿವಾಳಪ್ಪ ಈರಪ್ಪ ಹಂದಿಗನೂರ ಎಂಬುವರು, ಸದಾ ಸಾಮಾಜಿಕ ಕೆಲಸಗಳನ್ನ ಮಾಡಿಕೊಂಡು ಬರುತ್ತಿದ್ದಾರೆ. ಕಳೆದ ಸುಮಾರು 30 ವರ್ಷಗಳಿಗಿಂತ ಹೆಚ್ಚು ಕಾಲ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಇವರು ಒಮ್ಮೆ ಗ್ರಾಮ ಪಂಚಾಯ್ತಿ ಸದಸ್ಯರು ಸಹ ಅಗಿದ್ದಾರೆ.

ಸರ್ಕಾರಿ ಪ್ರಥಾಮಿ ಶಾಲೆ, ಅಂಗನವಾಡಿ, ಆಸ್ಪತ್ರೆ, ರುಕುಮಾಪುರ ರಸ್ತೆ, ಕೆಇಬಿ, ಅಂಬಿಗರ ಚೌಡಯ್ಯನ ದೇವಸ್ಥಾನ, ಲಕ್ಷ್ಮೀ ದೇವಸ್ಥಾನ ಸೇರಿದಂತೆ ಹತ್ತಾರು ಸಾಮಾಜಿಕ ಕಾರ್ಯಗಳನ್ನು ಗ್ರಾಮದಲ್ಲಿ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಸಿಂದಗಿಗೆ ನಿತ್ಯ ಬಂದು ಸರ್ಕಾರಿ ಕಚೇರಿಗಳನ್ನ ಅಲೆಯುತ್ತಿರುವ ಇವರು, ಇದೀಗ ರುಕುಮಾಪುರ ಗ್ರಾಮ ನಿರ್ಮಾಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆ.

ಕಾನೂನು ಪ್ರಕಾರ ಇವರ ಬೇಡಿಕೆ ನ್ಯಾಯುತವಾಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಅದನ್ನ ಆದಷ್ಟು ಬೇಗ ಬಗೆಹರಿಸುವ ಮೂಲಕ ಮನೆಯಿಲ್ಲದವರಿಗೆ ಒಂದು ಮನೆ ನಿರ್ಮಿಸಿಕೊಟ್ಟರೆ ಇಷ್ಟು ವರ್ಷಗಳ ಇವರ ಹೋರಾಟಕ್ಕೆ ನ್ಯಾಯ ಸಿಕ್ಕಂತಾಗುತ್ತೆ.




Leave a Reply

Your email address will not be published. Required fields are marked *

error: Content is protected !!