Search

ತಳವಾರ ಸಮಾಜದಿಂದ ಉಪ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

388

ಪ್ರಜಾಸ್ತ್ರ ಸುದ್ದಿ

ದೇವರಹಿಪ್ಪರಗಿ: ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಎಸ್‌ಟಿ ಮಾನ್ಯತೆ ನೀಡಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಆದೇಶ ಪತ್ರ ಹೊರಡಿಸಿದ್ದರೂ ರಾಜ್ಯದಲ್ಲಿ ಈವರೆಗೂ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಹೀಗಾಗಿ ಈ ಉಪ ಚುನಾವಣೆಯ ಬಹಿಷ್ಕಾರಕ್ಕೆ ತಳವಾರ-ಪರಿವಾರ ಸಮಾಜ ಸಿದ್ಧವಾಗಿದೆ ಎಂದು ತಳವಾರ ಪರಿವಾರ ಹಿತರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಶಿವಾಜಿ ಮೆಟಗಾರ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ನಡೆಯಿಂದಾಗಿ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ರಾಜಕೀಯ ಸೇವಾಕಾಂಕ್ಷಿಗಳು ಅವಕಾಶಗಳಿಂದ ವಂಚಿತಗೊಳ್ಳುತ್ತಿದ್ದಾರೆ. ಸರ್ಕಾರದ ಸಹಾಯ ಸೌಲಭ್ಯಗಳಿಂದ ವಂಚಿತಗೊಂಡಿದ್ದಾರೆ. ಕೇಂದ್ರದ ರಾಜ್ಯ ಪತ್ರವನ್ನು ಯಥಾವತ್ತಾಗಿ ಅನುಷ್ಟಾನಗೊಳಿಸದೇ ಗೊಂದಲಕಾರಿಯಾದ ಸುತ್ತೋಲೆ ಹೊರಡಿಸಿ ಅಧಿಕಾರಿಗಳ ಮೂಲಕ ಸಮುದಾಯದ ಹಕ್ಕು ಕಸಿದುಕೊಳ್ಳಲಾಗಿದೆ ಎಂದಿದ್ದಾರೆ.

ಶಿವಾಜಿ ಮೆಟಗಾರ

ರಾಜ್ಯಾದ್ಯಂತ ಹಲವು ಹೋರಾಟ ಹಮ್ಮಿಕೊಂಡರೂ ಸರ್ಕಾರ ಕಿವಿಗೆ ಹಾಕಿಕೊಳ್ಳದೇ ಸಮುದಾಯದ ಕುರಿತ ನಿರ್ಲಕ್ಷೃ ಧೋರಣೆ ಮುಂದುವರಿಸಿದೆ. ಕೆಲ ರಾಜಕಾರಣಿಗಳು ತಮ್ಮ ಹಿತ ಸಾಧನೆಗಾಗಿ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಮೀಸಲಾತಿ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಅಂಥ ರಾಜಕಾರಣಿಗಳಿಗೆ ಬರುವ ದಿನಗಳಲ್ಲಿ ಸಮಾಜ ತಕ್ಕ ಪಾಠ ಕಲಿಸಬೇಕಿದೆ. ಹೀಗಾಗಿ ಉಪ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಸಾಂವಿಧಾನಿಕವಾಗಿ ಸಂಸತ್ತಿನಲ್ಲಿ ಅನುಮೋದನೆಗೊಂಡು ಜಾರಿಯಾದ ಮೀಸಲಾತಿಯನ್ನೇ ಒದಗಿಸಲಾಗದ ಸರ್ಕಾರದ ನಡೆಯಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆ ಸ್ಥಾನಗಳು ಅನ್ಯರ ಪಾಲಾಗಿವೆ. ಮುಂದೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಿದ್ದು ಅಷ್ಟರೊಳಗೆ ಜಾತಿ ಪ್ರಮಾಣ ಪತ್ರ ನೀಡಬೇಕು. ಇಲ್ಲದೆ ಹೋದ್ರೆ ಸಿಂದಗಿ, ಬಸವಕಲ್ಯಾಣ, ಮಸ್ಕಿ ವಿಧಾನ ಸಭೆ ಮತ್ತು ಬೆಳಗಾವಿ ಲೋಕಸಭೆ ಚುನಾವಣೆ ಬಹಿಷ್ಕರಿಸಲು ತಳವಾರ ಸಮುದಾಯ ನಿರ್ಧರಿಸಿದೆ. ಅದಾಗ್ಯೂ ಬೇಡಿಕೆ ಈಡೇರದೇ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ತಿಳಿಸಿದ್ದಾರೆ. ಈ ವೇಳೆ ಅಲೋಕ ರೋಡಗಿ, ಭಾಗಣ್ಣ ಕೆಂಬಾವಿ, ರಾವುತ್ ಕನ್ನೊಳ್ಳಿ ಸೇರಿ ಇತರರು ಇದ್ದರು.




Leave a Reply

Your email address will not be published. Required fields are marked *

error: Content is protected !!