ಹೆಸರಿಗಷ್ಟೇ ಇದೆ ಸಿಂದಗಿಯ ರೈತ ಭವನ!

407

ಸಿಂದಗಿ: ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರೈತ ಭವನ ನೋಡಿದ್ರೆ, ಇದು ನಿಜಕ್ಕೂ ರೈತರಿಗಾಗಿ ನಿರ್ಮಾಣ ಮಾಡಿದ ಭವನವೇ ಅನ್ನೋ ಪ್ರಶ್ನೆ ಮೂಡುತ್ತೆ. ಒಂದು ಕೊಠಡಿ ಬಿಟ್ಟರೆ ಉಳಿದೆಲ್ಲ ಕೊಠಡಿಗಳಿಗೆ ಬೀಗ ಹಾಕಲಾಗಿದೆ. ಅದರಲ್ಲಿ ಬಹುತೇಕ ರೂಮುಗಳು ಸಂಪೂರ್ಣವಾಗಿ ಗುಜರಿ ಅಂಗಡಿಯ ರೀತಿ ಇವೆ.

ಮುರಿದು ಬಿದ್ದಿರುವ ಕಿಟಕಿ, ಹಾಳಾದ ವಿದ್ಯುತ್ ಬಲ್ಬ್ ಗಳು, ಸದಾ ಬೀಗ ಹಾಕಿರುವ ಮುಂಭಾಗದ ಗೇಟ್, ಆವರಣದ ತುಂಬಾ ಗಲೀಜು. ಇನ್ನು ಓಪನ್ ಇರುವ ರೂಮಿನಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಿಬ್ಬಂದಿ ಕೆಲಸ ನಿರ್ವಹಿಸ್ತಿದೆ. ಅವರನ್ನ ಕೇಳಿದ್ರೆ, ನಮ್ಗೆ ನಿರ್ದಿಷ್ಟವಾದ ಯಾವುದೆ ಜಾಗ ಇರುವುದಿಲ್ಲ. ತಾತ್ಕಾಲಿಕವಾಗಿ ನಾವು ಬರುವುದ್ರಿಂದ ಎಲ್ಲಿ ಜಾಗದ ವ್ಯವಸ್ಥೆಯಾಗುತ್ತೋ ಅಲ್ಲಿ ಕೆಲಸ ನಿರ್ವಹಿಸುತ್ತೇವೆ ಅಂತಾರೆ ರೇಣುಕಾ ಎಸ್ ಪಟ್ಟಣಶೆಟ್ಟಿ.

ತಾಲೂಕು ಅಂತಾ ಕರೆಸಿಕೊಂಡಿರುವ ಸಿಂದಗಿಯಲ್ಲಿರುವ ರೈತ ಭವನ ಅಂದ್ರೆ ಹೇಗಿರಬೇಕು. ರೈತರಿಗೆ ಸಂಬಂಧಿಸಿದ ಏನಾದ್ರೂ ಒಂದಿಷ್ಟು ಕಾರ್ಯಗಳು ಆಗಾಗ ಇಲ್ಲಿ ನಡೆಯುತ್ತವೆ ಅಂತಾ ನೋಡಿದ್ರೆ, ಅದೂ ಇಲ್ಲ. ಈ ಬಗ್ಗೆ ಭವನಕ್ಕೆ ಸಂಬಂಧಿಸಿದಂತೆ ಯಾರನ್ನ ಕೇಳಬೇಕು ಅಂದ್ರೂ ಸರಿಯಾದ ಮಾಹಿತಿ ಕೊಡುವವರು ಇಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇರುವುದ್ರಿಂದ ದಿನನಿತ್ಯ ಇಲ್ಲಿ ರೈತರ ಓಡಾಟ ಇರುತ್ತೆ. ಕೃಷಿಕರಿಗೆ ಒಂದಿಷ್ಟು ಮಾಹಿತಿ ನೀಡುವ ವ್ಯವಸ್ಥೆಯಿಲ್ಲ. ಕೃಷಿಗೆ, ರೈತ ಹೋರಾಟಗಳಿಗೆ ಸಂಬಂಧಿಸಿದ ಫಲಕಗಳು, ಚಿತ್ರಗಳು ಹುಡುಕಿದ್ರೂ ಸಿಗೋದಿಲ್ಲ.

ಅಕ್ಷರಗಳು ಸಂಪೂರ್ಣವಾಗಿ ಅಳಿಸಿ ಹೋಗುವ ಸ್ಥಿತಿಯಲ್ಲಿರುವ ಕಟ್ಟಡ ಉದ್ಘಾಟನೆಯ ದಿನಾಂಕ ನೋಡಿದ್ರೆ 1977 ಅಂತಾ ಇದೆ. ಅಂದ್ರೆ, ಸುಮಾರು 42 ವರ್ಷಗಳ ಹಿಂದೆ ಕಟ್ಟಡವನ್ನ ಉತ್ತಮವಾಗಿ ನಿರ್ಮಿಸಲಾಗಿದೆಯಾದ್ರೂ ಅದರ ನಿರ್ವಹಣೆ ಮಾತ್ರ ಸಂಪೂರ್ಣವಾಗಿ ಹಾಳಾಗಿದೆ. ಇನ್ಮುಂದೆ ಹೀಗಾಗದೆ, ರೈತರಿಗಾಗಿ ನಿರ್ಮಾಣವಾದ ಭವನ, ಕೃಷಿ ಕೇಂದ್ರಿತ ಚಟುವಟಿಕೆಗಳಿಗೆ ಸದಾ ಸಿದ್ಧವಾಗಿರ್ಲಿ. ಇದಕ್ಕೆ ಸಂಬಂಧಿಸಿದವರು ಇತ್ತ ಗಮನ ಕೊಡಬೇಕಾಗಿದೆ.




Leave a Reply

Your email address will not be published. Required fields are marked *

error: Content is protected !!