ಇಡೀ ಗ್ರಾಮದ ಜೀವಸೆಲೆಯಾದ ಅನ್ನದಾತ

590

6 ಸಾವಿರ ಜನಸಂಖ್ಯೆ ಇರುವ ಗ್ರಾಮದ ನೀರಿನ ಬವಣೆಯನ್ನ ಅನ್ನದಾತ ನೀಗಿಸ್ತಿದ್ದಾನೆ. ತನ್ನ ಹೊಲದಲ್ಲಿರುವ ಬೋರ್ ವೆಲ್ ಮೂಲಕ ಇಡೀ ಗ್ರಾಮಕ್ಕೆ ಉಚಿತವಾಗಿ ನೀರು ನೀಡುವ ಮೂಲಕ, ಮಾನವೀಯತೆ ಏನು ಅನ್ನೋದಕ್ಕೆ ಸಾಕ್ಷಿಯಾಗಿದ್ದಾನೆ.

ಸಿಂದಗಿ ತಾಲೂಕಿನ ತಿಳಗುಳ ಗ್ರಾಮದಲ್ಲಿ ನೀರನ ಸಮಸ್ಯೆ ಎಷ್ಟಿದೆ ಅನ್ನೋದಕ್ಕೆ ಸಾಕ್ಷಿ ಇದು. ಹೀಗೆ ಜನರು ನೀರಿಗಾಗಿ ಕಾಯ್ತಿರೋದು ಖಾಸಗಿ ಜಮೀನಿನಲ್ಲಿ. ಇದು ಗ್ರಾಮದಿಂದ 2 ಕಿಲೋ ಮೀಟರ್ ದೂರವಿದೆ. ಅಲ್ಲಿಂದ ಇಲ್ಲಿಯ ತನಕ ನೀರು ತರಲು ಬರಬೇಕು.

ಒಂದ್ಕಡೆ ನೀರಿಗೆ ಬರ. ಇನ್ನೊಂದ್ಕಡೆ ವಿದ್ಯುತ್ ಬರ. ಕರೆಂಟ್ ಇದ್ದಾಗ ಮಾತ್ರ ನೀರು ಸಿಗುತ್ತೆ. ಇಲ್ದೇ ಹೋದ್ರೆ, ಕರೆಂಟ್ ಬರುವವರೆಗೂ ಜನರು ಹೀಗೆ ಕಾಯುತ್ತಾ ಕುಳಿತುಕೊಳ್ಳಬೇಕು. ಹೆಣ್ಮಕ್ಕಳು, ಗಂಡ್ಮಕ್ಕಳು, ಶಾಲೆಗೆ ಹೋಗುವ ಮಕ್ಕಳು ಸಹ ನೀರಿಗಾಗಿ ಬಂದು ಗಂಟೆಗಟ್ಟಲೆ ನಿಲ್ಲಬೇಕು.

ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪ್ರತಿನಿತ್ಯ ಪಡುತ್ತಿರುವ ಕಷ್ಟಕ್ಕೆ ಯಾವ ಜನಪ್ರತಿನಿಧಿಗಳು ಸಹಾಯಕ್ಕೆ ಬರ್ತಿಲ್ಲ ಅಂತಾ ಆಕ್ರೋಶ ವ್ಯಪಡಿಸ್ತಾರೆ ಗ್ರಾಮಸ್ಥರಾದ ಸಂಗಪ್ಪ ಮಾದರ, ಅಭಿಷೇಕ ಕೇಸರಿ ಹಾಗೂ ಮನಹೋರ ತಳವಾರ ಅವರು.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಬೇಸತ್ತು ಹೋಗಿರುವ ಗ್ರಾಮದ ಹಿರಿಯರು, ನೀವು ಪೇಪರ್ ನಲ್ಲಿ ಬರೆದು ಏನ್ ಮಾಡ್ತೀರಿ. ಇದ್ರಿಂದ ನಮ್ಗೇನು ಅನುಕೂಲವಾಗುತ್ತೆ ಅಂತಾ ತಮ್ಮ ನೋವನ್ನ, ಹತಾಶೆಯನ್ನ ಈ ರೀತಿ ಹೊರ ಹಾಕ್ತಿದ್ದಾರೆ. ಇದರ ನಡುವೆ ಇಲ್ಲೊಂದು ಸಣ್ಣ ಜೀವಸೆಲೆ ತುಂಬಿದ ಮನಸ್ಸು ಇದೆ.

ಇಲ್ಲಿ ಖುಷಿಯ ವಿಚಾರ ಅಂದ್ರೆ, ಗ್ರಾಮಸ್ಥರ ಸ್ಥಿತಿ ಕಂಡು ಮಾನವೀಯ ಹಿನ್ನೆಲೆಯಲ್ಲಿ ಗ್ರಾಮದ ರೈತ ಸಿದ್ದನಗೌಡ ಗಬಸಾವಳಗಿ ಅವರು ಉಚಿತವಾಗಿ ನೀರು ನೀಡ್ತಿದ್ದಾರೆ. ಜಮೀನಿಗೆ ಹಾಕಿಸಿರುವ ಬೋರ್ ವೆಲ್ ನಿಂದ ಗ್ರಾಮಸ್ಥರಿಗೆ ಉಚಿತವಾಗಿ ನೀರು ನೀಡ್ತಿದ್ದಾರೆ. ಇದಕ್ಕೆ ಬರುವ ಕರೆಂಟ್ ಬಿಲ್ ಸಹ ಅವರೆ ಕಟ್ಟಿಕೊಳ್ಳುವ ಮೂಲಕ, ಜನರ ಜಲದಾಹ ನೀಗಿಸುವಲ್ಲಿ ಸಹಕಾರಿಯಾಗಿದ್ದು, ನಿಜಕ್ಕೂ ಮೆಚ್ಚುವ ಕೆಲಸ.

ಊರಿನ ಜನಕ್ಕ ನನ್ನ ಕೈಲಾದ ಸಹಾಯ ಮಾಡ್ತಿದೀನ್ರಿ. ನೀರಿಗೆ ಯಾರಿಂದಲೂ ರೊಕ್ಕಾ ತಗೋಳೋದಿಲ್ಲರ್ರಿ. ಯಾಕಂದ್ರ ಹೊಟ್ಟಿಗಿ ಊಟ ಇಲ್ಲಂದ್ರ ಬದುಕಬಹುದು. ಕುಡಿಯಕ್ಕ ನೀರಲ್ಲಂದ್ರ ಭಾಳ್ ತ್ರಾಸಾಗ್ತದ್ರಿ. ಅದ್ಕೆ ಜನಕ್ಕ ಒಂದಿಷ್ಟು ನೀರು ಕೊಡ್ತೀನ್ರಿ.

ಸಿದ್ದನಗೌಡ ಗಬಸಾವಳಿ, ಉಚಿತ ನೀರು ನೀಡ್ತಿರುವ ರೈತ

ಸಂಬಂಧಪಟ್ಟ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಮಾಡಬೇಕಾದ ಕೆಲಸವನ್ನ ಸಿದ್ದನಗೌಡ ಗಬಸಾವಳಿಗಿ ಅವರು ಮಾಡ್ತಿದ್ದಾರೆ. ದಿನಕ್ಕೆ ಕನಿಷ್ಟ 6 ರಿಂದ 7 ಟ್ಯಾಂಕರ್ ನೀರು ನೀಡ್ತಿದ್ದಾರಂತೆ. ಹೀಗಾಗಿ 6 ಸಾವಿರ ಜನಸಂಖ್ಯೆ ಇರುವ ತಿಳಗುಳ ಗ್ರಾಮಸ್ಥರು, ಇವರ ಉಪಕಾರವನ್ನ ನೆನೆಯುತ್ತಾರೆ. ಕ್ಯಾಮೆರಾಗೆ ಮುಖ ತೋರಿಸದೆ ತಮ್ಮ ನಿಸ್ವಾರ್ಥ ಸೇವೆಗೆ ಸಾಕು ಎಂದ ರೈತ ಸಿದ್ದನಗೌಡ ಗಬಸಾವಳಗಿ ನಿಜಕ್ಕೂ ಗ್ರೇಟ್.

ಇದು ಬರೀ ಒಂದು ಗ್ರಾಮದ ಸ್ಥಿತಿಯಲ್ಲ. ವಿಜಯಪುರ ಜಿಲ್ಲೆಯ ಬಹುತೇಕ ಗ್ರಾಮದ ಸ್ಥಿತಿ ಇದೇ ರೀತಿ ಇದೆ. ರೈತ ಸಿದ್ದನಗೌಡ ಬಗಸಾವಳಿ ಅವರ ರೀತಿಯಲ್ಲಿ ಜನರ ನೋವಿಗೆ ಸ್ಪಂದಿಸುವ ಮನಸ್ಸುಗಳು ಇರುವ ತನಕ ಮಾನವೀಯತೆಗೆ ನಿಜವಾದ ಅರ್ಥ ಬರುತ್ತೆ. ಜನಪರ ಕೆಲಸ ಮಾಡ್ತೀವಿ ಅಂತಾ ಇರೋ ಬರೋ ಬಿರುದು ಪಡೆದು ಅಧಿಕಾರ ಮಾಡ್ತಿರುವ ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಿದೆ.


TAG


Leave a Reply

Your email address will not be published. Required fields are marked *

error: Content is protected !!