ಸ್ಟಾರ್ ಹೋಟೆಲ್ ಸಭೆಗಳಿಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡೋದ್ಯಾರು?

342

ರಾಜ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ದೋಸ್ತಿ ಸರ್ಕಾರ ಯಾವಾಗ ಬೀಳುತ್ತೆ ಅನ್ನೋ ಟೆನ್ಷನ್ ರಾಜಕೀಯ ನಾಯಕರಲ್ಲಿದೆ. ಹೀಗಾಗಿ ಸಭೆಗಳ ಮೇಲೆ ಸಭೆಗಳನ್ನ ನಡೆಸ್ತಿದ್ದಾರೆ. ಆದ್ರೆ, ಇವರು ನಡೆಸುವ ಸಭೆಗಳು ಎಲ್ಲಿ? ತಮ್ಮ ಪಕ್ಷದ ಕಚೇರಿಯಲ್ಲಿ ಅಲ್ಲ. ಸರ್ಕಾರಿ ಬಂಗಲೆಗಳಲ್ಲಿ ಅಲ್ಲ. ವಿಧಾನಸೌಧದಲ್ಲಿ ಅಲ್ಲ. ಇವರು ನಡೆಸೋದು ಸ್ಟಾರ್ ಹೋಟೆಲ್ ಗಳಲ್ಲಿ. ಇದರ ಬಿಲ್ ಲಕ್ಷದಿಂದ ಕೋಟಿವರೆಗೂ ಆಗುತ್ತೆ. ಅದು ಪಾವತಿಯಾಗೋದು ಎಲ್ಲಿಂದ. ಇದಕ್ಕೆ ಹಣ ಕೊಡೋದು ಯಾರು. ಯಾರ ದುಡ್ಡು ಅನ್ನೋದರ ಬಗ್ಗೆ ಯಾರೂ ಮಾತ್ನಾಡ್ತಿಲ್ಲ.

ಲೀಲಾ ಪ್ಯಾಲೆಸ್ ಹೋಟೆಲ್

ತಾಜ್ ವೆಸ್ಟ್ ಎಂಡ್ ಹೋಟೆಲ್, ಲೀಲಾ ಪ್ಯಾಲೆಸ್ ಹೋಟೆಲ್, ಈಗಲ್ಟನ್ ರೆಸಾರ್ಟ್ ರೀತಿಯ ಐಷಾರಾಮಿ ಸ್ಟಾರ್ ಹೋಟೆಲ್ ಗಳಲ್ಲಿ ರಾಜಕೀಯ ಪಕ್ಷಗಳು ಸಭೆಗಳ ಮೇಲೆ ಸಭೆಗಳನ್ನ ಮಾಡ್ತವೆ. ಆದ್ರೆ, ಇದಕ್ಕೆ ಖರ್ಚಾಗುವ ಹಣದ ಬಗ್ಗೆ ಯಾರೂ ಯೋಚನೆ ಮಾಡ್ತಿಲ್ಲ. ಇಲ್ಲಿ ಒಂದು ರಾತ್ರಿ ಉಳಿದುಕೊಳ್ಳಲು ಒಂದು ರೂಮಿಗೆ 10 ಸಾವಿರದಿಂದ ಶುರುವಾಗಿ 20, 30 ಸಾವಿರಕ್ಕೂ ಹೆಚ್ಚು ರೂಪಾಯಿವರೆಗೆ ಇದೆ. ಈ ರೇಟ್ ಆಗಾಗ ಬದಲಾಗುತ್ತೆ. ಇನ್ನು ಸಭೆ, ಸಮಾರಂಭ ನಡೆಸಲು ಇರುವ ಹಾಲ್ ಗಳ ರೇಟ್ ಲಕ್ಷ ಮೀರುತ್ತೆ. ಇಷ್ಟೊಂದು ದುಬಾರಿ ಹೋಟೆಲ್ ನಲ್ಲಿ ನೂರಾರು ಜನ ರಾಜಕೀಯ ನಾಯಕರು ಸೇರಿ ಮಾಡುವ ಸಭೆಗಳಿಗೆ ಒಂದು ವರ್ಷದಲ್ಲಿ ಎಷ್ಟು ಕೋಟಿ ರೂಪಾಯಿ ಖರ್ಚಾಗಬಹುದು?

ತಾಜ್ ವೆಸ್ಟ್ ಎಂಡ್ ಹೋಟೆಲ್

1987ರಲ್ಲಿ 10 ರೂಮುಗಳೊಂದಿಗೆ ತಾಜ್ ವೆಸ್ಟ್ ಎಂಡ್ ಹೋಟೆಲ್ ಶುರುವಾಗಿ, ಇಂದು 20 ಎಕರೆಯಲ್ಲಿ 117 ಐಷಾರಾಮಿ ರೂಮುಗಳಿವೆ. ಈಗಲ್ಟನ್ ರೆಸಾರ್ಟ್ ಬರೋಬ್ಬರಿ 509 ಎಕರೆ ವಿಸ್ತೀರ್ಣವಿದೆ. ಇಲ್ಲಿ 132 ರೂಮುಗಳಿವೆ. ಮೈಸೂರು ಅರಮನೆ ಶೈಲಿಯನ್ನ ಹೋಲುವ ಲೀಲಾ ಪ್ಯಾಲೆಸ್ 9 ಎಕರೆಯಿದೆ. ಇಲ್ಲಿಗೆ ಬಂದ್ರೆ ಒಂದು ಜಗತ್ತಿನೊಳಗೆ ಬಂದ ಅನುಭವಾಗುತ್ತೆ. ಸ್ವರ್ಗ ಹೇಗಿರುತ್ತೆ ಅನ್ನೋದು ಈ ಹೋಟೆಲ್ ಗಳಲ್ಲಿ ನೋಡಬಹುದು. ಇಷ್ಟೆಲ್ಲ ಇರುವ ಹೋಟೆಲ್ ಗಳ ರೇಟ್ ಸಹ ಅಷ್ಟೇ ಇರುತ್ತೆ ಅಲ್ವಾ. ಹಾಗಾದ್ರೆ, ಇಂಥಾ ಪಂಚತಾರಾ ಹೋಟೆಲ್ ಗಳಲ್ಲಿ ಸಿಎಂ ಮತ್ತು ಇತರೆ ರಾಜಕೀಯ ಪಕ್ಷಗಳು ನಡೆಸೋ ಸಭೆಗಳ ಖರ್ಚನ್ನ ನೋಡಿಕೊಳ್ಳೋದ್ಯಾರು?

ಈಗಲ್ಟನ್ ರೆಸಾರ್ಟ್

ಇವರಿಗೆ ಸಭೆ, ಸಮಾರಂಭ ನಡೆಸಲು ಸರ್ಕಾರಿ ಕಚೇರಿಗಳು ಇಲ್ವೆ? ಸರ್ಕಾರ ನೀಡಿರುವ ಗೆಸ್ಟ್ ಹೌಸ್ ಗಳು ಇಲ್ವೆ? ಪ್ರತಿಯೊಂದು ಪಕ್ಷಗಳು ಕಟ್ಟಿಕೊಂಡಿರುವ ಪಕ್ಷದ ಕಚೇರಿಗಳು ಏನಾದ್ವು? ಇದೆಲ್ಲ ಬಿಟ್ಟು ಪಂಚತಾರಾ ಹೋಟೆಲ್ ನಲ್ಲಿ ಸಭೆ ನಡೆಸಲು ದುಡ್ಡು ಎಲ್ಲಿಂದ ಬರುತ್ತೆ. ಈ ಬಗ್ಗೆ ಯಾರೂ ಪ್ರಶ್ನೆ ಮಾಡ್ತಿಲ್ಲ. ಒಂದು ವೇಳೆ ಯಾರೋ ಮುಖಂಡನೊಬ್ಬ ನೋಡಿಕೊಳ್ತಾನೆ ಅನ್ನೋದಾದ್ರೆ, ಆತನಿಗೆ ಇಷ್ಟೊಂದು ಹಣ ಎಲ್ಲಿಂದ ಬರ್ತಿದೆ. ಇವರು ಹೀಗೆ ಖರ್ಚು ಮಾಡುವ ಹಣದ ಲೆಕ್ಕ ನೋಡೋದ್ಯಾರು ಅನ್ನೋದರ ಗಂಭೀರ ಚರ್ಚೆಯಾಗಬೇಕಿದೆ. ಇವುಗಳ ಸೂಕ್ಷ್ಮತೆ ಗೊತ್ತಾದ್ರೆ ಮಾತ್ರ ಜನಪ್ರತಿನಿಧಿಗಳನ್ನ ಪ್ರಶ್ನೆ ಮಾಡಲು ಸಾಧ್ಯ. ಇಲ್ದೇ ಹೋದ್ರೆ, ಸಭೆಗಳ ನೆಪದಲ್ಲಿ, ಸರ್ಕಾರ ಉಳಿಸುವ, ಉರುಳಿಸುವ ನೆಪದಲ್ಲಿ ನಡೆಸುವ ಸಭೆಗಳಿಗೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತೆ. ಇಲ್ಲೊಬ್ಬ ಬಡವ ಹೊಟ್ಟೆ ತುಂಬ ಊಟ ಮಾಡಲು ಆಗ್ತಿಲ್ಲ.




Leave a Reply

Your email address will not be published. Required fields are marked *

error: Content is protected !!