ಸಿಂದಗಿಗೆ ಜಿಲ್ಲಾಧಿಕಾರಿ ಭೇಟಿ: ಸಮಸ್ಯೆಗಳ ಸರಮಾಲೆ

300

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುವ ಸಂಬಂಧ ವಿಜಯಪುರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಮಂಗಳವಾರ ತಾಲೂಕಿಗೆ ಭೇಟಿ ನೀಡಿದರು. ಈ ವೇಳೆ ಪುರಸಭೆಗೆ ದಿಢೀರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಪುರಸಭೆ ಅವ್ಯವಸ್ಥೆಯ ವಿರುದ್ಧ ಸಾರ್ವಜನಿಕರು, ಪುರಸಭೆ ಸದಸ್ಯರು ಹಲವು ದೂರುಗಳನ್ನು ಜಿಲ್ಲಾಧಿಕಾರಿ ಎದುರು ಹೇಳಿದರು. ಸಿಬ್ಬಂದಿ ಸಮಸ್ಯೆ, ಆಸ್ತಿಯ ಮಾಲೀಕರಿಗೆ ಗೊತ್ತಿಲ್ಲದೆ ಬೇರೆಯವರ ಹೆಸರಿಗೆ ರಿಜಿಸ್ಟರ್ ಆಗುತ್ತಿರುವ ಕುರಿತು ಸಾರ್ವಜನಿಕರು ದಾಖಲೆ ಸಮೇತ ದೂರು ನೀಡಿದರು. ಕೂಡಲೇ ಅವುಗಳನ್ನು ಬಗೆಹರಿಸಬೇಕು. ಈ ಬಗ್ಗೆ ತಮಗೆ ತಿಳಿಸಬೇಕು ಎಂದು ಮುಖ್ಯಾಧಿಕಾರಿ ರಾಜಶ್ರೀ ತುಂಗಳ ಹಾಗೂ ಸಿಬ್ಬಂದಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಉಪಾಧ್ಯಕ್ಷ ಹಾಸೀಂಪೀರ ಆಳಂದ, ಸದಸ್ಯರಾದ ಬಸವರಾಜ ಯರನಾಳ, ನಾರಾಯಣಕರ, ಶರಣಗೌಡ, ಸಂದೀಪ ಚೌರ ಹಾಗೂ ಸ್ಥಳೀಯರಾದ ಸಾಯಬಣ್ಣ ಮಾದರ, ನಾಟೀಕರ ಸೇರಿದಂತೆ ಇತರರು ಹಾಜರಿದ್ದರು.

ನಂತರ ತಾಲೂಕು ಆಡಳಿತ ಕಚೇರಿಗೆ ಭೇಟಿ ಕೊಟ್ಟು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಗಣಿಹಾರ ಸರ್ಕಾರಿ ಶಾಲೆ ಕಟ್ಟಡದ ಕಳಪೆ ಕಾಮಗಾರಿ, ಬೆಳೆ ಸಾಲಮನ್ನಾ, ಪುರಸಭೆ ಕಾಮಗಾರಿ ಬಿಲ್ ವಿಚಾರ ಸೇರಿದಂತೆ ಲಿಖಿತವಾಗಿ 7 ಅರ್ಜಿಗಳು ಬಂದಿವೆ ಎಂದರು.

ಯರಗಲ್ ಗ್ರಾಮದ ರೈತ ಮಲಿಕ್ ಸಾಬ್, ತನ್ನ ಜಮೀನು ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಎದುರು ಅಳಲು ತೋಡಿಕೊಂಡರು. ಸರ್ವೇ, ಸಬ್ ರಜಿಸ್ಟರ್ ಕಚೇರಿ ಅಧಿಕಾರಿಗಳು, ಬಾಂಡ್ ಕೊಡುವವರ ಹತ್ತಿರ ವರ್ಷಗಳಿಂದ ಅಲೆಯುತ್ತಿದ್ದೇನೆ. ಎಲ್ಲ ಅಧಿಕಾರಿಗಳು ದುಡ್ಡು ಕೇಳುತ್ತಾರೆ. ಕೊಟ್ಟಿದ್ದೇನೆ. ಆದರೂ ಕೆಲಸ ಮಾಡಿಕೊಡುತ್ತಿಲ್ಲವೆಂದು ದೂರಿದರು. ಅವರ ಸಮಸ್ಯೆಯನ್ನು ಶೀಘ್ರ ಬಗೆಹರಿಸಿ ಎಂದು ತಹಶೀಲ್ದಾರ್ ಅವರಿಗೆ ಸೂಚಿಸಿದರು.

ಈ ವೇಳೆ ತಹಶೀಲ್ದಾರ್ ನಿಂಗಣ್ಣ ಬಿರಾದಾರ, ಗ್ರೇಡ್-2 ತಹಶೀಲ್ದಾರ್ ಪ್ರಕಾಶ ಸಿಂದಗಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!