ಡಿಆರ್ ಎಫ್ಓ ವಿರುದ್ಧ ಅಟ್ರಾಸಿಟಿ ಕೇಸ್

260

ಪ್ರಜಾಸ್ತ್ರ ಸುದ್ದಿ

ಧಾರವಾಡ: ತಮ್ಮದೇ ಇಲಾಖೆಯ ದಲಿತ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿದ ವಿಷಯಕ್ಕೆ ಸಂಬಂಧಿಸಿದಂತೆ ಧಾರವಾಡ ಕಲಕೇರಿ ಅರಣ್ಯ ವೃತ್ತದ ಡಿಆರ್ ಎಫ್ ಓ ಪರಶುರಾಮ ಮಣಕೂರ ಮೇಲೆ ಅಟ್ರಾಸಿಟಿ, ಪ್ರಕರಣ ದಾಖಲಾಗಿದೆ. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ, ಮಣಕೂರ ತಲೆ ಮರೆಸಿಕೊಂಡಿದ್ದು, ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ ಎನ್ನಲಾಗಿದೆ.

ಪ್ರಕರಣದ ಹಿನ್ನಲೆ:

ಧಾರವಾಡ ಕಲಕೇರಿ ಅರಣ್ಯ ವಲಯದ ಉಪ ವಲಯ ಅರಣ್ಯ ಅಧಿಕಾರಿ ಪರಶುರಾಮ ಮಣಕೂರ ಎಂಬುವರು ತಮ್ಮದೇ ಇಲಾಖೆ ಸಹ ಸಿಬ್ಬಂದಿ (ಉಪ ವಲಯ ಅರಣ್ಯ ಅಧಿಕಾರಿ) ಅವಿನಾಶ ರಣಕಾಂಬೆ ಅವರ ಮೇಲೆ ಡಿಸೆಂಬರ್ 6ರ ಮಧ್ಯಾಹ್ನ 2.30ರ ಸಮಯದಲ್ಲಿ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ,  ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರು. ಅಷ್ಟೇ ಅಲ್ಲದೇ ಅವಿನಾಶಗೆ ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಧಾರವಾಡ ಉಪ ನಗರ ಪೋಲಿಸ್ ಠಾಣೆಯಲ್ಲಿ ಅವಿನಾಶ ನೀಡಿದ ದೂರಿನ ಮೇರೆಗೆ ಜ.6 ರಂದು ಡಿಆರ್ ಎಫ್ ಓ ಮಣಕೂರ ಮೇಲೆ ಎಫ್ಐಆರ್ ದಾಖಲಾಗಿದೆ.

ಡಿಆರ್ ಎಫ್ ಓ ಮೇಲೆ ಕ್ರಮಕ್ಕೆ ಆಗ್ರಹಿಸಿ ಧಾರವಾಡ ಜಿಲ್ಲಾ ವಿವಿಧ ದಲಿತ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಲಾಗಿದೆ. ಒಕ್ಕೂಟದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಪರಮೇಶ್ವರ ಕಾಳೆ ನೇತೃತ್ವದಲ್ಲಿ ಧಾರವಾಡ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಹಾಗೂ ಹು.ಧಾ ಪೊಲೀಸ್ ಆಯುಕ್ತರಿಗೆ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ಇದೇ ಮೊದಲ ಪ್ರಕರಣ..?

ಅರಣ್ಯ ಇಲಾಖೆಯಲ್ಲಿ ಕೆಳ ಹಂತದ ಸಿಬ್ಬಂದಿ ಮೇಲೆ ನಿತ್ಯ ಅನೇಕ ರೀತಿಯಲ್ಲಿ ದೌರ್ಜನ್ಯ ಹಾಗೂ ಹಲ್ಲೆಯಂತಹ ಘಟನೆಗಳು ಮೊದಲಿನಿಂದಲೂ ನಡೆಯುತ್ತಲೆ ಇವೆ. ಆದರೆ ಅವು ಮೇಲಧಿಕಾರಿಯ ಪ್ರಭಾವ ಹಾಗೂ ಹಿರಿಯ ಅಧಿಕಾರಿಗಳ ಅಭಯದಿಂದ ಅಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರಲಿಲ್ಲ. ಅದಕ್ಕೆ ಅಪವಾದ ಎಂಬಂತೆ ಧಾರವಾಡ ವಲಯದಲ್ಲಿ ನಡೆದ ತಮ್ಮದೆ ಸಿಬ್ಬಂದಿಯ ದೌರ್ಜನ್ಯ ಸಹಿಸದೇ, ಸಹ ಸಿಬ್ಬಂದಿ ಅವಿನಾಶ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ. ಇದು ಅರಣ್ಯ ಇಲಾಖೆಯ ಇತಿಹಾಸದಲ್ಲಿ ಒಂದೇ ಇಲಾಖೆಯ ಸಹ ಸಿಬ್ಬಂದಿ ಮೇಲೆ ದಾಖಲಾದ ಪ್ರಥಮ ಪ್ರಕರಣವಾಗಿದೆ. ತಲೆ ಮರೆಸಿಕೊಂಡ ಉಪ ಅರಣ್ಯ ವಲಯ ಅಧಿಕಾರಿ ಮಣಕೂರ ಅವರನ್ನು ಬಂಧಿಸಿ, ಸೂಕ್ತ ತನಿಖೆ ನಡೆಸುವ ಮೂಲಕ ಕಾನೂನು ರೀತಿ ಶಿಕ್ಷೆಗೆ ಗುರಿ ಪಡಿಸುವರೆ ಕಾಯ್ದು ನೋಡಬೇಕಿದೆ.




Leave a Reply

Your email address will not be published. Required fields are marked *

error: Content is protected !!