ಕುಂದಾನಗರಿಯಲ್ಲಿ ‘ಬುದ್ಧ ಬಸವ ಅಂಬೇಡ್ಕರ್’ ಸಮ್ಮೇಳನ

365

ಬೆಳಗಾವಿ,ಚಿಕ್ಕೋಡಿ: ಅಧ್ಯಾತ್ಮದ ಆಧಾರದಲ್ಲಿ, ದೇವ ಸನ್ನಿಧಿಯಲ್ಲಿ, ಮನುಕುಲಕ್ಕೆ ಒಳ್ಳೆಯದನ್ನ ಮಾಡಲೆಂದು ತಮ್ಮ ಇಡೀ ಬದುಕನ್ನ ಸಮರ್ಪಿಸಿಕೊಂಡ ಮುನಿಪುಂಗವರ, ಸಂತ ಶರಣರ, ರಾಷ್ಟ್ರಪಿತರ ಬದುಕು, ಅತ್ಯಂತ ಪವಿತ್ರ ಪಾವನವೆಂದು ಡಿಎಸ್ಎಸ್ ಜಿಲ್ಲಾ ಸಂಚಾಲಕ ಚಿದಾನಂದ ತಳಕೇರಿ ಹೇಳಿದರು.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅಡಹಳಟ್ಟಿಯ ಶ್ರೀ ದುರದುಂಡೇಶ್ವರ ಶಾಖಾಮಠದಲ್ಲಿ, ನಡೆದ ‘ಬುದ್ಧ ಬಸವ ಅಂಬೇಡ್ಕರ್’ ರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನದಲ್ಲಿ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಈ ಮಾತನ್ನ ಹೇಳಿದ್ದಾರೆ.

ತಮ್ಮ ಬದುಕಿನ ಬೆಳಕಲ್ಲೇ ಇತರರನ್ನ ಮಾನವೋತ್ತಮರನ್ನಾಗಿ ಮಾಡುವ ಧೀಮಂತರು ಈ ನೆಲದ ಸೌಭಾಗ್ಯ. ಅದು ಎಲ್ಲರಿಗೂ ಸುಲಭವಾಗಿ ಲಭಿಸುವುದಿಲ್ಲ. ಮಾನವ ಬದುಕಿನ ಸಾಧ್ಯತೆಗಳನ್ನ ಬದಿಗೊತ್ತಿ ಜಗತ್ತಿನ ರಸರುಚಿಗಳನ್ನ ತೊರೆದು ಪಾರಮಾರ್ಥಿಕ ರಸರುಚಿಗಳನ್ನ ಸವಿದು, ಪಕ್ವಗೊಂಡು ಲೋಕಕಲ್ಯಾಣ ಕಾರ್ಯದಲ್ಲಿ ತೊಡಗುವುದು ಅಷ್ಟು ಸರಳವಲ್ಲ. ಅಂತ  ಧೀಮಂತರ ಬದುಕು ಇಂದಿನ ಯುವ ಪೀಳಿಗೆಗೆ ಅತ್ಯವಶ್ಯಕ ಎಂದರು.

ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ದುರದುಂಡೇಶ್ವರ ಶಾಖಾ ಮಠಾದ್ಯಕ್ಷರಾದ ಶ್ರೀ ಶಿವಪಂಚಾಕ್ಷರ ಮಹಾಸ್ವಾಮಿಗಳವರು ಮಾತನಾಡಿ, ಭಾರತೀಯ ಸಂಸ್ಕೃತಿ ಎಂದಕೂಡಲೇ ಅಲ್ಲಿ ಪ್ರಮುಖವಾಗಿ ತೋರುವುದು ನಮ್ಮ ಋಷಿ ಸಂಸ್ಕೃತಿ. ಮಹಾತ್ಮರ ನಡೆ-ನುಡಿ ಒಂದಾದ ಬದುಕು ಅವರು ತೋರಿದ ದಾರಿ ಇಂದಿನವರು ಅಳವಡಿಸಿಕೊಂಡು ಹೋಗುವುದು ತುಂಬಾ ಅತಿ ಅವಶ್ಯಕ. ಆ ನಿಟ್ಟಿನಲ್ಲಿ ಟ್ರಸ್ಟ್ ಮತ್ತು ಶ್ರೀಮಠ ಆಯೋಜಿಸಿರುವ ಕಾರ್ಯಕ್ರಮವನ್ನು ನಾವೆಲ್ಲರೂ ಕೂಡಿ ಯಶಸ್ವಿಗೊಳಿಸೋಣ ಎಂದರು.

ಬಸವಚೇತನ ಪ್ರಶಸ್ತಿ ಪುರಸ್ಕೃತ ಕಲ್ಮೇಶ್ ಕಲಮಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಶೈಲ್ ಸಿಂಧೂರ್, ಬಸವಂತ್ ಕಲಮಡಿ, ಬಸಪ್ಪ ಗುಡದಿನ್ನಿ, ಸಿದ್ದರಾಯ ಸಾತಣ್ಣವರ್, ಚನ್ನಬಸು ಜಂಬಗಿ, ಅಂಬಣ್ಣ ಮೈನಟ್ಟಿ,  ಶ್ರೀಶೈಲ ಕಲಮಡಿ, ಗಂಗಪ್ಪ ಸಾತಣ್ಣವರ, ಮಹದೇವ್ ಕಲಮಡಿ, ಬಸವಂತ ಗುಡ್ಡಾಪುರ್, ಬಾಹುರಾಜ್ ಕಲಮಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಟ್ರಸ್ಟ್‌ ಅಧ್ಯಕ್ಷ ಮಹಾದೇವ ಬಿರಾದಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


TAG


Leave a Reply

Your email address will not be published. Required fields are marked *

error: Content is protected !!