ಹಿಂದಿ ಮತ್ತು ತ್ರಿಬಾಶಾ ಸೂತ್ರ

656

ಹಿಂದಿ ಹೇರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕೇಂದ್ರೀಯ ವಿವಿಯ ಸಹಾಯಕ ಪ್ರಾಧ್ಯಾಪಕ ಹಾಗೂ ಭಾಷಾವಿಜ್ಞಾನ ವಿಭಾಗದ ಸಂಚಾಲಕರಾದ ಬಸವರಾಜ ಕೋಡಗುಂಟಿ ಅವರ ಬರೆದ ಲೇಖನ ಇಲ್ಲಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಶಿಕ್ಶಣ ಮತ್ತು ಬಾಶೆಗೆ ಸಂಬಂದಿಸಿದ 1968ರಲ್ಲಿ ಬಂದ ಒಂದು ಒಪ್ಪಂದವೆ ತ್ರಿಬಾಶಾ ಸೂತ್ರ. ದೇಶದ ಏಕತೆ ಆಶಯದ ಈ ಸೂತ್ರದ ಪ್ರಕಾರ ದೇಶದ ಎಲ್ಲ ಮಕ್ಕಳೂ ಶಿಕ್ಶಣದಲ್ಲಿ ಮೂರು ಬಾಶೆಗಳನ್ನು ಕಲಿಯಬೇಕು. ಹಿಂದಿ ರಾಜ್ಯಗಳು ಹಿಂದಿ, ಇಂಗ್ಲೀಶು ಮತ್ತು ಒಂದು ಆದುನಿಕ ಬಾರತೀಯ ಬಾಶೆ (ಪ್ರದಾನವಾಗಿ ದಕ್ಶಿಣದ ಬಾಶೆ)ಯನ್ನು ಮತ್ತು ಹಿಂದಿಯಲ್ಲದ ರಾಜ್ಯಗಳು ಸ್ತಳೀಯ ಬಾಶೆ, ಹಿಂದಿ ಮತ್ತು ಇಂಗ್ಲೀಶನ್ನು ಕಲಿಯಬೇಕು ಎಂಬುದು ಅದರ ಪ್ರದಾನ ಆಶಯ. ತಮಿಳುನಾಡು ಪ್ರಾತಮಿಕ ಶಿಕ್ಶಣ ರಾಜ್ಯ ಸರಕಾರಗಳ ಸುಪರ್ದಿಯಲ್ಲಿ ಇರುವುದನ್ನು ಬಳಸಿಕೊಂಡು ಈ ಸೂತ್ರವನ್ನು ಅಳವಡಿಸಿಕೊಳ್ಳದೆ ತಮಿಳು ಮತ್ತು ಇಂಗ್ಲೀಶುಗಳನ್ನು ಮಾತ್ರ ಕಲಿಸುತ್ತಿದೆ. ಉಳಿದ ರಾಜ್ಯಗಳು ಈ ಸೂತ್ರವನ್ನು ಒಪ್ಪಿಕೊಂಡಿವೆ ಎಂಬಂತೆ ಇದೆಯಾದರೂ ದಕ್ಶಿಣದ ಬಾಶೆಯನ್ನು ಕಲಿಸುವ ಅದರ ಆಶಯವನ್ನು ಬಹುತೇಕ ಹಿಂದಿ ರಾಜ್ಯಗಳು ಅಳವಡಿಸಿಕೊಂಡಿಲ್ಲ.

ಬಾರತ ಬಹುಬಾಶೆಗಳ ದೇಶವಾಗಿರುವುದರಿಂದ ಮಗುವೊಂದಕ್ಕೆ ಮನೆಮಾತು, ಪರಿಸರದ ಬಾಶೆ, ಸ್ತಳೀಯ ಬಾಶೆ, ರಾಜ್ಯಬಾಶೆ ಬೇರೆಬೇರೆಯಾಗಿರುವ ಸಾದ್ಯತೆ ಹಲವು ಕಡೆ ಇದೆ. ಕೊಡಗಿನಲ್ಲಿ ಇರುವ ಪಣಿಯರಿಗೆ ಪಣಿಯ ಮನೆಮಾತು, ಮಲಯಾಳಂ ಮತ್ತು ಕೊಡವ ಪರಿಸರದ ಬಾಶೆಗಳು, ಕೊಡವ ಸ್ತಳೀಯ ಬಾಶೆ ಮತ್ತು ಕನ್ನಡ ರಾಜ್ಯಬಾಶೆ. ಇಂತಾ ಪರಿಸರದಲ್ಲಿ ಮಗುವಿಗೆ ಯಾವ, ಎಶ್ಟು ಬಾಶೆಗಳನ್ನು ಕಲಿಸಬೇಕೆಂಬ ಗೊಂದಲ ಉಳಿಯಿತು. ಹಿಂದಿಯನ್ನು ಅನವಶ್ಯಕವಾಗಿ ಕಲಿಯುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ದೊರೆಯಲಿಲ್ಲ. ದೇಶದ ಏಕತೆಗೆ ಹಿಂದಿ ಸಹಾಯ ಮಾಡುತ್ತದೆ ಎಂಬ ಸಡಿಲ ವಾದವೊಂದನ್ನು ಮಾಡಲಾಯಿತು. ಒಂದು ಬಾಶೆಯ ಕಲಿಕೆಯಿಂದ ದೇಶದ ಏಕತೆ ಸಾದ್ಯವಿಲ್ಲ. ಇದು ಯುರೋಪಿನ ಒಂದು ದೇಶ, ಒಂದು ದರ್ಮ, ಒಂದು ಬಾಶೆ ತತ್ವ ಮಾದರಿಯ ಯೋಚನೆ. ಬಾರತ ಯಾವತ್ತೂ ಬಹುಬಾಶೆಗಳಿಂದ ಬದುಕಿರುವ ದೇಶ. ಈ ಪ್ರಯತ್ನಕ್ಕೆ ಉತ್ತರದವರ ಪ್ರಾಬಲ್ಯ, ಹಿಂದೂ ದರ್ಮದ ನಂಟು ಸೇರಿಕೊಂಡು ಸಮಸ್ಯೆಯನ್ನು ಇನ್ನಶ್ಟು ಬಿಗಡಾಯಿಸದವು.

ಬಾಶೆ ಬಹುಸೂಕ್ಶ್ಮವಾದ ವಿಚಾರವಾಗಿರುವುದರಿಂದ ಈ ವಿಚಾರದಲ್ಲಿ ಬಹು ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಯಾವಾಗಲೂ ತ್ರಿಬಾಶಾ ಸೂತ್ರದ ಸಮಸ್ಯೆ ಆಗುವುದು ಹಿಂದಿಯಲ್ಲದ ರಾಜ್ಯಗಳು ಹಿಂದಿಯನ್ನು ಕಡ್ಡಾಯ ಮಾಡುವುದಕ್ಕೆ ಮಾತ್ರ. ಹಾಗಾಗಿ ಸಹಜವಾಗಿಯೆ ಈ ಪ್ರಯತ್ನಗಳೆಲ್ಲ ಬಾರತವನ್ನು ಹಿಂದಿ ದೇಶ ಮಾಡುವ ಪ್ರಯತ್ನಗಳಂತೆಯೆ ಕಂಡುಬರುತ್ತವೆ ಮತ್ತು ಸಹಜವಾಗಿ ಪ್ರತಿ ಪ್ರಯತ್ನಕ್ಕೂ ತೀವ್ರ ವಿರೋದ ಬರುತ್ತದೆ.

ಹಿಂದಿಯನ್ನು ಕಡ್ಡಾಯ ಮಾಡುವುದರ ಮೂಲಕ ನಶ್ಟವೇನು ಎಂಬ ಪ್ರಶ್ನೆ ಬಹುಜನರಲ್ಲಿ ಇದೆ. ಅತ್ಯಂತ ಸಹಜವಾಗಿ ಇದರಿಂದ ಹಿಂದಿ ದೇಶದ ಆದ್ಯತೆಯ ಬಾಶೆಯಾಗುತ್ತದೆ. ಉಳಿದ ಬಾಶೆಗಳು ಎರಡನೆ ದರ್ಜೆಗೆ ಇಳಿಯುತ್ತವೆ. ಇದರಿಂದ ಸಮಾಜದ ಎಲ್ಲ ಆಯಾಮಗಳಲ್ಲಿ ಬಾಶೆ ಆದಾರಿತ ತರತಮ ಬೇರುಕಟ್ಟಿಕೊಳ್ಳುತ್ತದೆ. ಹಿಂದಿಯನ್ನು ಎಲ್ಲೆಡೆ ಕಲಿಸುವುದರಿಂದ ದೇಶದ ಎಲ್ಲ ಪರೀಕ್ಶೆಗಳು ಹಿಂದಿಯಲ್ಲೂ ನಡೆಯಬೇಕೆಂಬ ನಿಯಮಗಳು ಬರುತ್ತವೆ. ಆಗ ಹಿಂದಿ ಬಾಶಿಕರಿಗೆ ಅವರ ಮನೆಮಾತಿನಲ್ಲಿಯೆ ಪರೀಕ್ಶೆ ಬರೆಯುವ ಸುಲಬಾವಕಾಶ ಮತ್ತು ಹಿಂದಿಯಲ್ಲದವರಿಗೆ ತಮ್ಮ ಬಾಶೆಯಲ್ಲಿ ಬರೆಯುವ ಅವಕಾಶ ಇಲ್ಲವಾಗುತ್ತದೆ. ಅದರಿಂದ ಸರಕಾರಿ ಕೆಲಸಗಳಲ್ಲೆಲ್ಲ ಹಿಂದಿಯರಿಗೆ ಹೆಬ್ಬಾಗಿಲು ಮತ್ತು ಉಳಿದ ಬಾಶಿಕರಿಗೆ ಮುಳ್ಳಿನ ಕಿರುದಾರಿ ಆಗುತ್ತದೆ. ಬಾರತದ ಎಲ್ಲರೂ ಸಮಾನರು ಎಂಬ ಸಂವಿದಾನದ ಪ್ರದಾನ ಆಶಯವನ್ನು ಇದು ಮುರಿದುಹಾಕುತ್ತದೆ.

ಹಿಂದಿ ಕೇವಲ 6-8 ನೂರು ವರುಶಗಳ ಇತಿಹಾಸ ಹೊಂದಿರುವ ಬಾಶೆ. ಸಾವಿರಾರು ವರುಶಗಳ ಇತಿಹಾಸ ಇರುವ ಹಲವು ದ್ರಾವಿಡ ಬಾಶೆಗಳು, ಹಿಂದಿಗಿಂತ ಹಳೆಯದಾದ ಹಲವು ಇಂಡೊ-ಆರ್ಯನ್ ಬಾಶೆಗಳು ಇವೆ. ಹಿಂದಿಯನ್ನು ದೇಶದೆಲ್ಲೆಡೆ ಮಾತನಾಡುತ್ತಾರೆ, ಹೆಚ್ಚು ಮಂದಿ ಮಾತನಾಡುತ್ತಾರೆ ಎಂಬುದು ಒಂದು ಸುಳ್ಳು. ಹಿಂದಿ ಎಂಬ ಬಾಶೆಯ ಒಳಗೆ ಪರಸ್ಪರ ಅರ್ತವಾಗದ ಹಲವಾರು ಬಾಶೆಗಳನ್ನು ಸೇರಿಸಿ ಸಂಕೆಯನ್ನು ದೊಡ್ಡದು ಮಾಡಿದೆ. ಒಂದೊಮ್ಮೆ ಪಂಜಾಬಿ, ಬೋಜಪುರಿ, ಮಯ್ತಿಲಿ, ರಾಜಸ್ತಾನಿ ಈ ಎಲ್ಲವನ್ನೂ ಹಿಂದಿಯೊಳಗೆ ಸೇರಿಸಿತ್ತು. ಈಗಲೂ ಬ್ರಜ್, ಲಂಬಾಣಿ, ಹಿಮಾಚಲಿ, ಅರುಣಾಚಲಿ, ಜಾರ್ಕಂಡಿ, ಬಿಹಾರಿ, ಪಹಾರಿ ಮೊದಲಾದವು ಇವೆ. ಇದೆಲ್ಲವೂ ರಾಜಕಾರಣ ಎಂಬುದು ಸ್ಪಶ್ಟ. ಹಿಂದಿ ಆಡಳಿತ ಬಾಶೆ ಎನ್ನುವ ಕಾರಣಕ್ಕೆ ಹಿಂದಿ ಕಲಿಕೆ ಮತ್ತು ಬೋದನೆಗೆ ಈಗಾಗಲೆ ಪ್ರತಿವರುಶ ನೂರಾರು ಕೋಟಿ ರೂಗಳನ್ನು ವ್ಯಯಿಸಲಾಗುತ್ತಿದೆ. ಇನ್ನೊಂದೆಡೆ ಬಾರತದಲ್ಲಿ ನೂರಾರು ಬಾಶೆಗಳು ಸಾಯುತ್ತಿವೆ. ಅವುಗಳ ಅದ್ಯಯನಕ್ಕೆ ಹಣವನ್ನು ಕೊಡಬೇಕಾದ ಅನಿವಾರ್ಯತೆ ಇದೆ. ಇದು ದೇಶಬಾಶೆಗಳ ಸಾವಿನ ಮೇಲೆ ಹಿಂದಿಯ ಸಾಮ್ರಾಜ್ಯ ಕಟ್ಟುವ ಕೆಲಸದಂತೆ ತೋರುವಲ್ಲಿ ಏನೂ ಅಚ್ಚರಿ ಇಲ್ಲ.

ಲೇಖಕರು ಇಲ್ಲಿ ಮಹಾಪ್ರಾಣಗಳನ್ನ ಉದ್ದೇಶಪೂರ್ವಕವಾಗಿ ಬಳಿಸಿರುವುದಿಲ್ಲ. ಇದೊಂದು ಹೊಸ ಪ್ರಯೋಗವಾಗಿದೆ.

ಬಸವರಾಜ ಕೋಡಗುಂಟಿ

TAG


Leave a Reply

Your email address will not be published. Required fields are marked *

error: Content is protected !!