ರಾಜ್ಯ ಸರ್ಕಾರಕ್ಕೆ ತಲೆನೋವಾದ ಘಟನೆ: ‘ಪ್ರಜಾಸ್ತ್ರ’ದಲ್ಲಿ ದಾಖಲೆ ಸಮೇತ ಸ್ಟೋರಿ…

447

ಮಂಡ್ಯ: ಕರೋನಾ ಸೋಂಕಿನಿಂದ ಮೃತಪಟ್ಟಿದ್ದ ವ್ಯಕ್ತಿಯ ಮೃತದೇಹವನ್ನ ಮುಂಬೈನಿಂದ ಜಿಲ್ಲೆಯ ಪಾಂಡವಪುರಕ್ಕೆ ತೆಗೆದುಕೊಂಡು ಬರಲಾಗಿದೆ. ಅಲ್ಲದೆ ಅಂತ್ಯಕ್ರಿಯೆ ಸಹ ಮಾಡಲಾಗಿದೆ. ಇದು ಇದೀಗ ಜಿಲ್ಲಾಡಳಿತ ಸೇರಿದಂತೆ ರಾಜ್ಯ ಸರ್ಕಾರದ ಮೇಲೆ ದೊಡ್ಡ ಗಂಡಾಂತರ ತಂದಿದೆ.

ಪಾಂಡವಪುರ ತಾಲೂಕು ಮೇಲುಕೋಟೆ ಸಮೀಪದ ಬಿ.ಕೊಡಗಹಳ್ಳಿ ಗ್ರಾಮದಲ್ಲಿ ನಾಲ್ವರಿಗೆ ಕೊರೊನಾ ಸೋಂಕು ತಗುಲಿದೆ. ದೃಢಪಟ್ಟಿದೆ. ಇದರ ಹಿಂದೆ ಇರೋದು ಕರೋನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯ ನಂಟು. ಮುಂಬೈನಲ್ಲಿ ಕೆಲಸ ನಿರ್ವಹಿಸ್ತಿದ್ದ ಬಿ.ಕೊಡಗಹಳ್ಳಿ ನಿವಾಸಿ 10 ದಿನಗಳ ಹಿಂದೆ ಮೃತಪಟ್ಟಿದ್ದ. ಆತನ ಹುಟ್ಟೂರಿಗೆ ಮೃತದೇಹ ತೆಗೆದುಕೊಂಡು ಬಂದು ಅಂತ್ಯಸಂಸ್ಕಾರ ನಡೆಸಲಾಗಿದೆ.

ಸಾವಿನ ಅನುಮಾನದ ಮೇಲೆ ಕೆರೆತೊಣ್ಣೂರು ಗ್ರಾಮದ ಹಾಸ್ಟೆಲ್ ಕ್ವಾರಂಟೈನ್ ಗೆ ನಾಲ್ವರನ್ನ ಒಳಪಡಿಸಲಾಗಿತ್ತು. ಅವರ ವೈದ್ಯಕೀಯ ಪರೀಕ್ಷೆ ವರದಿ ಬಂದಿದ್ದು, ನಾಲ್ಕು ಮಂದಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಪತ್ನಿ, ಇಬ್ಬರು ಪುತ್ರಿಯರು ಹಾಗೂ ಪುತ್ರನಿಗೆ ಸೋಂಕು ತಗಲಿದೆ ಎನ್ನಲಾಗಿದೆ.

ಏಪ್ರಿಲ್ 23ರಂದು ಮುಂಬೈನಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಮೃತದೇಹವನ್ನ ಮಹಾರಾಷ್ಟ್ರದ ನೋಂದಣಿ ಹೊಂದಿರುವ ಆಂಬ್ಯುಲೆನ್ಸ್ ನಲ್ಲಿ ತೆಗೆದುಕೊಂಡು ಬರಲಾಗಿದೆ. ಅದರಲ್ಲಿ ಓರ್ವ ವೃದ್ಧೆ, ನಾಲ್ವರು ಸಿಬ್ಬಂದಿ ಬಂದಿದ್ದಾರೆ. ಅವರನ್ನ ಯಾವುದೇ ರೀತಿ ಪರೀಕ್ಷೆ ಮಾಡದೆ ಗ್ರಾಮಕ್ಕೆ ಬಿಟ್ಟಿದ್ದಾರೆ. ಇನ್ನು ಗ್ರಾಮಸ್ಥರ ವಿರೋಧದ ನಡುವೆ ತಹಶೀಲ್ದಾರ್ ಅವರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿ ಬಂದಿವೆ. ಆದ್ರೆ, ಈ ಬಗ್ಗೆ ಅಧಿಕಾರಿಗಳು ತಮ್ಗೇನು ಗೊತ್ತಿಲ್ಲವೆಂದು ಹೇಳ್ತಿದ್ದು ಇಡೀ ಪ್ರಕರಣ ಸಾಕಷ್ಟು ಗೊಂದಲ ಮೂಡಿಸಿದೆ. ಇದರ ಸತ್ಯಾಸತ್ಯತೆ ಏನು ಅನ್ನೋದರ ತನಿಖೆಯಾಗಬೇಕಿದೆ. ಆಗಲಾದ್ರೂ ಇದರಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಅನ್ನೋದು ತಿಳಿಯಲಿದೆ.

ಕುಮಾರಸ್ವಾಮಿ ಗರಂ:

ಪೊಲೀಸ್ ಪೇದೆಗೆ ಹಣ ನೀಡಿ, ಖಾಸಗಿ ಆಸ್ಪತ್ರೆಯ ವೈದ್ಯನಿಂದ ದಾಖಲೆಗಳನ್ನ ರೆಡಿ ಮಾಡಲಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ. ಇದ್ರಿಂದಾಗಿ ರಾಜ್ಯ ಸರ್ಕಾರಕ್ಕೆ ಇದೀಗ ಮತ್ತೊಂದು ತಲೆ ನೋವು ಶುರುವಾಗಿದೆ. ಮಂಡ್ಯ ಜಿಲ್ಲಾಡಳಿತ ಜನರ ಜೀವದ ಜೊತೆ ಚೆಲ್ಲಾಟವಾಡ್ತಿದೆ. ಮಹಾರಾಷ್ಟ್ರದಲ್ಲಿ ಇಲ್ಲಿಗೆ ಬರಬೇಕಾದ್ರೆ 17 ಚೆಕ್ ಪೋಸ್ಟ್ ಗಳಿವೆ. ಇಲ್ಲಿಗೆ ಬರಲು ಹೇಗೆ ಅನುಮತಿ ನೀಡಲಾಯ್ತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಒಟ್ಟಿನಲ್ಲಿ ಇಡೀ ಘಟನೆಯಿಂದ ಇದೀಗ ಪಾಂಡವಪುರದಲ್ಲಿ ಕರೋನಾ ಭೀತಿ ಎದುರಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಜ್ಯಕ್ಕೆ ಕರೋನಾ ಕಂಟಕ ಮತ್ತಷ್ಟು ಆಗುವ ಸಾಧ್ಯತೆಯಿದೆ. ಯಾಕಂದ್ರೆ, ಇಂದು ಬಂದ ಹೆಲ್ತ್ ಬುಲೆಟಿನ್ ನಲ್ಲಿ 11 ಕೇಸ್ ಇದ್ದು, ಅದರಲ್ಲಿ 8 ಮಂಡ್ಯ ಜಿಲ್ಲೆಗೆ ಸಂಬಂಧಿಸಿದ್ದು ಈ ಮೂಲಕ ಜಿಲ್ಲೆಯಲ್ಲಿ 26 ಜನರು ಸೋಂಕಿತರ ಸಂಖ್ಯೆಯಾಗಿದೆ. ಹೀಗಾಗಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.




Leave a Reply

Your email address will not be published. Required fields are marked *

error: Content is protected !!