ಸೃಜನಶೀಲ ಚಿಂತನೆಗಳು ಸಿಗುವುದೇ ಹಳ್ಳಿಯಲ್ಲಿ: ಡಾ.ವೀರಣ್ಣ ದಂಡೆ

118

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಸಿಂದಗಿ: ನನ್ನ ಎಲ್ಲ ಮೌಲ್ಯಯುತ ಕೃತಿಗಳು ಹಾಗೂ ನನ್ನೊಳಗಿನ ತಿಳುವಳಿಕೆಗೆ ಮೂಲ ಕಾರಣ ನನ್ನೂರು. ಸೃಜನಶೀಲ ಚಿಂತನೆಗಳು ಸಿಗುವುದೇ ಹಳ್ಳಿಗಳಲ್ಲಿ ಎಂದು ಹಿರಿಯ ಜಾನಪದ ವಿದ್ವಾಂಸ ಡಾ.ವೀರಣ್ಣ ದಂಡೆ ಹೇಳಿದರು. ಪಟ್ಟಣದ ಮಾಂಗಲ್ಯ ಭವನದಲ್ಲಿ ಭಾನುವಾರ ನೆಲೆ ಪ್ರಕಾಶನ ಹಾಗೂ ಎಂ.ಎಂ ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನೀಡಿದ 2022ನೇ ಸಾಲಿನ ‘ದೇಸಿ ಸನ್ಮಾನ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಇದೊಂದು ಅಪರೂಪದ ಕಾರ್ಯಕ್ರಮ. ದೊಡ್ಡ ದೊಡ್ಡ ಪ್ರಶಸ್ತಿಗಳಿಗಿಂತ ಆತ್ಮೀಯರು, ಹಿರಿಯರು ಕೂಡಿಕೊಂಡು ಮಾಡುವ ವಿಶ್ವಾಸದ ಕಾರ್ಯಕ್ರಮ ಅಮೂಲ್ಯ. ಇದರಿಂದ ನಮಗೆ ಇನ್ನಷ್ಟು ಚೈತನ್ಯ ಬರುತ್ತದೆ ಎಂದರು. ನಮ್ಮ ಭಾಗದ ಜನರು ಸಂಗತಿಗಳನ್ನು ದಾಖಲೆ ಮಾಡುವುದಿಲ್ಲ. ಹೀಗಾಗಿ ಜಾನಪದ ಸಾಹಿತ್ಯದ ಮೂಲ ಅಂಶಗಳು ಮುಂದಿನ ಪೀಳಿಗೆಗೆ ಸಿಗದೆ ಹೋಗುತ್ತಿವೆ ಅಂತಾ ವಿಷಾದ ವ್ಯಕ್ತಪಡಿಸಿದರು.

ಹಿರಿಯ ಜಾನಪದ ವಿದ್ವಾಂಸ ಡಾ.ವೀರಣ ದಂಡೆ ಅವರಿಗೆ ‘ದೇಸಿ ಸನ್ಮಾನ’ ಪ್ರಶಸ್ತಿ ಪ್ರದಾನ.

ಇದೇ ವೇಳೆ ಡಾ.ಶಿವರಂಜನ ಸತ್ಯಂಪೇಟೆ ಅವರು, ಪ್ರಶಸ್ತಿ ಪುರಸ್ಕೃತರ ಕುರಿತು ಬರೆದ ಡಾ.ವೀರಣ್ಣ ದಂಡೆ ಬದುಕು ಬರಹ ಅನ್ನೋ ಕೃತಿಯನ್ನು ಪ್ರಗತಿಪರ ರೈತ ಎಸ್.ಎಸ್ ಪಾಟೀಲ ಬಿಡುಗಡೆಗೊಳಿಸಿದರು. ಲೇಖಕರು ಪುಸ್ತಕದ ಕುರಿತು ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಹಿರಿಯ ಕಥೆಗಾರ ಡಾ.ಚನ್ನಪ್ಪ ಕಟ್ಟಿ ಅವರ ಕಥೆ ಆಧಾರಿತ ಊರ್ಧ್ವರೇತ ಅನ್ನೋ ಕಿರುಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು.

ಫ.ಗು ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್ ಮದಭಾವಿ, ಅಭಿನಂದನ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾದ ಹಿರಿಯ ಚಿಂತಕ ಡಾ.ಆರ್.ಕೆ ಕುಲಕರ್ಣಿ, ಸಾಹಿತ್ಯದ ಎಲ್ಲ ಪ್ರಕಾರಗಳಿಗೆ ಜಾನಪದ ಹೇಗೆ ಮೂಲದ್ರವ್ಯ ಆಗಿದೆ ಅನ್ನೋದನ್ನು ತಿಳಿಸಿಕೊಟ್ಟರು. ಬಿ.ಎಲ್.ಡಿ.ಇ ನಿರ್ದೇಶಕ ಅಶೋಕ ವಾರದ, ಹಿರಿಯ ಜಾನಪದ ವಿದ್ವಾಂಸ ಡಾ.ಎಂ.ಎಂ ಪಡಶೆಟ್ಟಿ ಮಾತನಾಡಿದರು. ಸಾನಿಧ್ಯ ವಹಿಸಿದ್ದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ನೆಲೆ ಪ್ರಕಾಶನ ಮತ್ತು ಎಂ.ಎಂ ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದರು.

ಆರತಿ ಗುರುರಾಜ ಪ್ರಾರ್ಥನಾ ಗೀತೆ ಹಾಡಿದರು. ನಿವೃತ್ತ ಪ್ರಾಚಾರ್ಯರಾದ ಆರ್.ಎಸ್ ಭುಶೆಟ್ಟಿ ಸ್ವಾಗತಿಸಿದರು. ಡಾ.ಚನ್ನಪ್ಪ ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನು ಪತ್ತಾರ ನಿರೂಪಿಸಿದರು. ಚಲನಚಿತ್ರ ನಿರ್ದೇಶಕ ಸುನಿಲಕುಮಾರ ಸುಧಾಕರ, ಪ್ರೊ.ಎಂ.ಎಸ್ ಹೈಯಾಳಕರ, ರವಿ ಮಲ್ಲೇದ, ದೇವು ಮಾಕೊಂಡ, ಗುರುನಾಥ ಅರಳಗುಂಡಗಿ, ಚಂದ್ರಶೇಖರ ಚೌರ, ಮಹಾಂತೇಶ ನೂಲನವರ, ಸಿದ್ದರಾಮ ಬ್ಯಾಕೋಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Leave a Reply

Your email address will not be published. Required fields are marked *

error: Content is protected !!