ಮತ್ತೆ ವಿಜಯಪುರ ವಿಂಗಡನೆ ಕೂಗು

281

ಪ್ರಜಾಸ್ತ್ರ ವಿಶೇಷ, ನಾಗೇಶ ತಳವಾರ

ವಿಜಯಪುರ ಗುಮ್ಮಟನಗರಿ ಎಂದೇ ಖ್ಯಾತಿಗಳಿಸಿರುವ ವಿಜಯಪುರ ಜಿಲ್ಲೆ ಹಿಂದೂಳಿದ ಜಿಲ್ಲೆಗಳಲ್ಲೊಂದು. ಇಲ್ಲಿ ಅಭಿವೃದ್ಧಿ ಎನ್ನುವುದು ಕನ್ನಡಿಯೊಳಗಿನ ಗಂಟಾಗಿದೆ. ರಾಜ್ಯದಲ್ಲಿ ಯಾವುದೇ ಪಕ್ಷ ಸರ್ಕಾರ ರಚನೆ ಮಾಡಿದರೂ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಕೊಡುಗೆಯೇ ಇರುವುದು. ಆದರೆ, ರಾಜಕೀಯ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸೇರಿ ಪ್ರತಿಯೊಂದರಲ್ಲೂ ಹಿಂದಕ್ಕೆ ತಳ್ಳಲಾಗುತ್ತಿದೆ. ಹೀಗಾಗಿ ಇದೀಗ ಜಿಲ್ಲೆಯಲ್ಲಿ ವಿಂಗಡನೆಯ ಚರ್ಚೆ ನಡೆದಿದೆ. 1997ರಲ್ಲಿ ಬಾಗಲಕೋಟೆ ಪ್ರತ್ಯೇಕ ಜಿಲ್ಲೆಯಾದ ಬಳಿಕ ಮತ್ತೊಮ್ಮೆ ವಿಂಗಡನೆಯ ಕೂಗು ಸದ್ದು ಮಾಡುತ್ತಿದೆ.

ಈ ಮೊದಲು ವಿಜಯಪುರ, ಸಿಂದಗಿ, ಇಂಡಿ, ಬಸವನ ಬಾಗೇವಾಡಿ, ಮುದ್ದೇಬಿಹಾಳ ತಾಲೂಕುಗಳಿದ್ದವು. 2013ರಲ್ಲಿ 7 ಹೊಸ ತಾಲೂಕುಗಳನ್ನು ರಚಿಸಲಾಯಿತು. ದೇವರ ಹಿಪ್ಪರಗಿ, ನಿಡಗುಂದಿ, ತಿಕೋಟಾ, ಚಡಚಣ, ಆಲಮೇಲ, ಬಬಲೇಶ್ವರ, ಕೊಲ್ಹಾರ ಹೊಸ ತಾಲೂಕುಗಳಾಗಿ ರಚನೆಯಾದವು. ಆದರೆ, ತಾಲೂಕಿಗೆ ಬೇಕಾದ ಆಡಳಿತ್ಮಕ ಕಚೇರಿಗಳು ಬರಲು ಇಂದಿಗೂ ಮೀನಾಮೇಷ ಎಣಿಸುತ್ತಿವೆ. ಹೀಗಿರುವಾಗ ಪ್ರತ್ಯೇಕ ಜಿಲ್ಲೆಯ ಕೂಗು ಎದ್ದಿದೆ. ಇಂಡಿ ಜಿಲ್ಲಾ ಕೇಂದ್ರದ ವಿಚಾರ ಇಟ್ಟುಕೊಂಡು ಉಪ ವಿಭಾಗೀಯ ಅಧಿಕಾರಿ ಅಬೀದ ಗದ್ಯಾಳ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಇದಕ್ಕೆ ವಿರೋಧದ ಜೊತೆಗೆ ಪ್ರತಿ ತಾಲೂಕಿನಲ್ಲೇ ತಮ್ಮದೆ ತಾಲೂಕು ಜಿಲ್ಲೆಯಾಗಬೇಕು ಎನ್ನುವ ಒಕ್ಕೂರಲಿನ ಧ್ವನಿ ಕೇಳಿ ಬರುತ್ತಿದೆ.

ಸಿಂದಗಿ ತಾ.ಪಂ ಶುಕ್ರವಾರ ನಡೆದ ಸಭೆ

ಸಿಂದಗಿಯಲ್ಲಿ ಮಾಜಿ ಶಾಸಕರಾದ ರಮೇಶ ಭೂಸನೂರ, ಶರಣಪ್ಪ ಸುಣಗಾರ, ಅರುಣ ಶಹಾಪೂರ ಸೇರಿ ಮುಖಂಡರು, ವಿವಿಧ ಕ್ಷೇತ್ರದ ಗಣ್ಯರು, ಸಂಘ, ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಸಭೆ ನಡೆಸಿ ಸಿಂದಗಿ ಜಿಲ್ಲೆಗೆ ಒತ್ತಾಯಿಸಿದ್ದಾರೆ. ಶುಕ್ರವಾರ ತಾಲೂಕು ಪಂಚಾಯ್ತಿ ಸಭಾ ಭವನದಲ್ಲಿ ಎಸಿ ಅವರ ನೇತೃತ್ವದಲ್ಲಿ ನಡೆದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿಯೂ ಸಹ ಸಿಂದಗಿ ಜಿಲ್ಲೆಯಾಗಬೇಕು ಎಂದೇ ಕೇಳಲಾಗಿದೆ. ನಿಯೋಗ ತೆಗೆದುಕೊಂಡು ಹೋಗಲು ಸಹ ರಾಜಕೀಯ ನಾಯಕರು ಸಿದ್ಧರಾಗಿದ್ದಾರೆ. ವಿಚಿತ್ರ ಅಂದರೆ ಅಧಿಕಾರಿಗಳು ನಡೆಸುತ್ತಿರುವ ಅಭಿಪ್ರಾಯದ ಕುರಿತು ಸ್ಥಳೀಯ ಶಾಸಕರಿಗೆ ಗೊತ್ತಿಲ್ಲ. ಸಭೆಯಲ್ಲಿಯೇ ಶಾಸಕ ಅಶೋಕ ಮನಗೂಳಿ ಈ ಬಗ್ಗೆ ಹೇಳಿದರು.

ಶನಿವಾರ ದೇವರ ಹಿಪ್ಪರಗಿಯಲ್ಲಿ ಎಸಿ ಅವರು ನಡೆಸಿದ ಸಭೆಯಲ್ಲಿ ಅಲ್ಲಿನ ರಾಜಕೀಯ ನಾಯಕರು, ಸಂಘ, ಸಂಸ್ಥೆಯರು, ಸಾರ್ವಜನಿಕರು ಪ್ರತ್ಯೇಕ ಜಿಲ್ಲೆಯಾಗುವುದಾದರೆ ದೇವರ ಹಿಪ್ಪರಗಿ ಆಗಲಿ ಎಂದು ಆಗ್ರಹಿಸಿದ್ದಾರೆ. ಮಾಜಿ ಶಾಸಕ ಶರಣಪ್ಪ ಸುಣಗಾರ ಸಿಂದಗಿ ಹೆಸರು ಪ್ರಸ್ತಾಪಿಸುತ್ತಿದ್ದಂತೆ ವಿರೋಧ ವ್ಯಕ್ತವಾಗಿದೆ. ಇನ್ನು ಶಾಸಕ ರಾಜುಗೌಡ ಪಾಟೀಲ ಸಭೆಗೆ ಗೈರಾಗಿದ್ದರು. ತಾಲೂಕು ರಚನೆಯಾಗಿ 10 ವರ್ಷವಾದರೂ ಸಿಗಬೇಕಾದ ಸೌಲಭ್ಯಗಳು ಇಲ್ಲ. ಸರ್ಕಾರಿ ಕಚೇರಿಗಳು ಇಲ್ಲ. ಜಿಲ್ಲೆಯಾಗಿಯೇ ಮಾಡಿ ಎಲ್ಲ ಸೌಲಭ್ಯ ಕಲ್ಪಿಸಿ ಎನ್ನುವ ಮಾತುಗಳು ಕೇಳಿ ಬಂದಿವೆ.

ದೇವರ ಹಿಪ್ಪರಗಿ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸಭೆ

ಇದೇ ರೀತಿ ಮುದ್ದೇಬಿಹಾಳ ಶಾಸಕ ಸಿ.ಎಸ್ ನಾಡಗೌಡ ಅವರು ಸಹ ಪ್ರತ್ಯೇಕ ಜಿಲ್ಲೆಯ ಕುರಿತು ಮಾತನಾಡಿದ್ದಾರೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಈ ಹಿಂದೆ ತಮ್ಮ ಕ್ಷೇತ್ರದ ಜನರಿಗೆ ನೀಡಿದ ಮಾತಿನಂತೆ ಪ್ರತ್ಯೇಕ ಜಿಲ್ಲೆ ಕುರಿತು ಮಾತನಾಡಿದ್ದಾರೆ. ಇಂಡಿ ಜಿಲ್ಲೆಗಾಗಿ ಅಲ್ಲಿ ನಿತ್ಯ ಪ್ರತಿಭಟನೆಗಳು, ಸಭೆಗಳು ನಡೆಯುತ್ತಿವೆ. ಇನ್ನೊಂದು ಕಡೆ ನಾವು ಇಂಡಿಯೊಂದಿಗೆ ಹೋಗುವುದಿಲ್ಲ. ಪ್ರತ್ಯೇಕ ಜಿಲ್ಲೆ ಮಾಡುವುದಾದರೆ ನಮ್ಮ ತಾಲೂಕು ಮಾಡಿ ಎಂದು ಸಿಂದಗಿ, ದೇವರ ಹಿಪ್ಪರಗಿ ಭಾಗದ ಕೂಗು ಎದ್ದಿದೆ. ಇದು ಜಿಲ್ಲೆಯ ರಾಜಕೀಯ ನಾಯಕರಿಗೆ ತಲೆನೋವು ತಂದಿದೆ. ಸರ್ಕಾರ ಮಟ್ಟದಲ್ಲಿ ಈ ಬಗ್ಗೆ ಏನು ಚರ್ಚೆಯಾಗಿದೆ? ಜಿಲ್ಲೆಯ ಶಾಸಕರು, ಸಂಸದರು ಆಂತರಿಕವಾಗಿ ಏನು ಅಭಿಪ್ರಾಯ ವ್ಯಕ್ತಪಡಿಸಿರಬಹುದು ಎನ್ನುವ ಪ್ರಶ್ನೆ ಸಹ ಎದ್ದಿದೆ. ಇಂಡಿ ಜಿಲ್ಲಾ ಕೇಂದ್ರ ಮಾಡುವ ಕುರಿತು ಸಿಂದಗಿ, ದೇವರ ಹಿಪ್ಪರಗಿಯಲ್ಲಿ ಅಭಿಪ್ರಾಯ ಕೇಳುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಜೊತೆಗೆ ನಾವು ಇಂಡಿಯೊಂದಿಗೆ ಹೋಗುವುದಿಲ್ಲ. ಇದಕ್ಕೆ ಹೋರಾಟಕ್ಕೂ ಸಿದ್ಧ ಎಂದಿದ್ದಾರೆ. ಇದು ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!