ಗುಮ್ಮಟನಗರಿಯ ಗರ್ಲ್ಸ್ ಮಿಸ್ಸಿಂಗ್ ಮಿಸ್ಟ್ರಿ..!

328

ಪ್ರಜಾಸ್ತ್ರ ವಿಶೇಷ ವರದಿ

ವಿಜಯಪುರ: ಗುಮ್ಮಟನಗರಿಯಲ್ಲಿ ದಿನದಿಂದ ದಿನಕ್ಕೆ ಹುಡುಗಿಯರ ನಾಪತ್ತೆ ಪ್ರಕರಣಗಳು ಹೆಚ್ಚುತ್ತಿವೆ. ಒಂದೇ ದಿನದಲ್ಲಿ ಎರಡೆರಡು ಪ್ರಕರಣಗಳು ದಾಖಲಾಗುತ್ತಿವೆ. ಕೇವಲ ಒಂದು ವಾರದಲ್ಲಿ 7 ಜನ ಯುವತಿಯರು ಮಿಸ್ಸಿಂಗ್ ಆಗಿದ್ದಾರೆ. ಹೀಗಾಗಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಕಾಣೆಯಾದ ಯುವತಿಯರ ಹೆತ್ತವರು ಕಣ್ಣೀರು ಹಾಕ್ತಿದ್ದಾರೆ.

ಜೂನ್ ತಿಂಗಳ ಕೊನೆಯಲ್ಲಿ 26ರಂದು ಓರ್ವ ಯುವತಿ ಹಾಗೂ 30ರಂದು ಇಬ್ಬರು ಯುವತಿಯರು ಕಾಣೆಯಾಗಿದ್ದಾರೆ. ಹೀಗೆ ಹದಿಹರೆಯದ ಹುಡುಗಿಯರು ಮಿಸ್ಸಿಂಗ್ ಆಗ್ತಿರುವುದರ ಹಿಂದೆ ಏನಾದ್ರೂ ಕರಾಳ ಕೆಲಸ ನಡೆಯುತ್ತಿದೆಯಾ ಅನ್ನೋ ಅನುಮಾನ ಮೂಡಿದೆ.

ಕಾಣೆಯಾದವರ ವಿವರ ಹೀಗಿದೆ:

ಜುಲೈ 1, 2021ರಂದು ವಿಜಯಪುರದ ಆಸಾರಗಲ್ಲಿಯ ತನ್ವೀರಅಹ್ಮದ ಶಮದ್ದೀನ ಮನಗೂಳಿ ಎಂಬುವರ ಅಪ್ರಾಪ್ತ ಮಗಳನ್ನ ಯಾರೋ ಅಪಹರಿಸಿಕೊಂಡು ಹೋಗಿರಬಹುದು ಅನ್ನೋ ಶಂಕೆಯ ಮೇಲೆ, ಜುಲೈ 2ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಖಣಾಪೂರ ತಾಂಡ 1ರ ನಿವಾಸಿ 22 ವರ್ಷದ ಸುಪ್ರೀಯಾ ಸಂಜು ಚವ್ಹಾಣ ಅನ್ನೋ ಯುವತಿ ಜುಲೈ 1ರಂದು ಕಾಣೆಯಾಗಿದ್ದಾಳೆ. ಕಿರಾಣಿ ಅಂಗಡಿಗೆ ಹೋಗಿ ಬರ್ತಿನಿ ಎಂದು ಹೋದವಳು ಕಾಣೆಯಾಗಿದ್ದಾಳೆ ಎಂದು ಗಂಡ ಸಂಜು ಚವ್ಹಾಣ ಜುಲೈ 6ರಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜುಲೈ 2, 2021ರಂದು ವಿಜಯಪುರದ ರಹೀಮ ನಗರದ ಶಾಹಿನ ದಸ್ತಗೀರಸಾಬ ಮುದ್ದೇಬಿಹಾಳ ಅನ್ನೋ ಯುವತಿ ಕಾಣೆಯಾಗಿದ್ದಾಳೆ. ನಗರದ ಕನ್ನೂರ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡ್ತಿರುವ ಯುವತಿ ಕೆಲಸಕ್ಕೆ ಹೋದವಳು ವಾಪಸ್ ಬಂದಿಲ್ಲ. ಈ ಕುರಿತು ಯುವತಿ ತಂದೆ ದಸ್ತಗೀರಸಾಬ ಜುಲೈ 6ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜುಲೈ 4ರಂದು ವಿಜಯಪುರದ ನವಬಾಗ ಏರಿಯಾದ ಶಿರೀನ್ ಮಹಿಬೂಬ ನಗರಬಾವಡಿ ಅನ್ನೋ ಯುವತಿ, ಮನೆಯಿಂದ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಲಾಗಿದೆ. ಜುಲೈ 5ರಂದು ಸೈಯ್ಯದ ಐರಣಿ ಎಂಬುವರು ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜುಲೈ 6ರಂದು ಸೃಷ್ಟಿ ಕಾಲೋನಿಯ ನಿವಾಸಿ ಗೌಸಿಯಾಬೇಗಂ ಹಜರತಇಮಾಮ ಅತ್ತಾರ ಅನ್ನೋ ಮಹಿಳೆ, ಮಗಳ ಸ್ಕೂಲ್ ಅಡ್ಮಿಷನ್ ಮಾಡಿ ಬರುವುದಾಗಿ ಹೋದವರು ಕಾಣೆಯಾಗಿದ್ದಾರೆ. ಪತ್ನಿ ಹಾಗೂ ಮಗಳು ಇಬ್ಬರು ಕಾಣೆಯಾಗಿದ್ದು, ಈ ಬಗ್ಗೆ ಪತಿ ಹಜರತಇಮಾಮ ಅತ್ತಾರ ಅವರು ಜುಲೈ 7ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜೂನ್ 8, 2021ರಂದು ವಿಜಯಪುರದ ಎಪಿಎಂಸಿ ಹತ್ತಿರದ ನಾಗರಬಾವಡಿ ಸಮೀಪದ ತೋಟದ ಬಳಿಯ ಮನೆಯಿಂದ 20 ವರ್ಷದ ಯುವತಿ ರವೀನಾ ರಮೇಶ ಚವ್ಹಾಣ ನಾಪತ್ತೆಯಾಗಿದ್ದಾಳೆ. ಮೂಲತಃ ಮಖಣಾಪೂರ ತಾಂಡ 1ರ ನಿವಾಸಿಯಾಗಿದ್ದಾಳೆ. ಈ ಬಗ್ಗೆ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ರಾಜು ಸೀತಾರಾಮ ರಜಪೂತ ಎಂಬುವರು ಜುಲೈ 6ರಂದು ದೂರು ದಾಖಲಿಸಿದ್ದಾರೆ.

ಜೂನ್ 26, 2021ರಂದು ಜಮಖಂಡಿಯ ಕನ್ನೂರ ಗ್ರಾಮದ ತೋಟದ ಮನೆಯಿಂದ 21 ವರ್ಷದ ಸೀಮಾ ಶಿವಪ್ಪ ಹುನ್ನೂರ ಅನ್ನೋ ಯುವತಿ ಕಾಣೆಯಾಗಿದ್ದಾಳೆ ಎಂದು ಜುಲೈ 1, 2021ರಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ವಿಜಯಪುರದ ಗೋಪಾಲಪುರ ಗಲ್ಲಿಯ ನಿವಾಸಿ ಶಂಕರ ಶಿಂದೆ ಎಂಬುವರ ಮಗಳು ಅಶ್ವಿನಿ ಜೂನ್ 29ರಂದು ಕಾಣೆಯಾಗಿದ್ದಾಳೆ. ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ ಎಂದು ತಾಯಿ ರೂಪಾ, ಜೂನ್ 30ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜೂನ್ 30ರಂದು ಯೋಗಾಪುರ ಕಾಲೋನಿ ನಿವಾಸಿ ಗಿರಿಮಲ್ಲಪ್ಪ ಮೆಂಡೆಗಾರ ಎಂಬುವರ ಮಗಳು ಶ್ರುತಿ, ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಹೋಗಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಲಾಗಿದೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ತಾಯಿ ಮಹಾದೇವಿ ಗಿರಿಮಲ್ಲಪ್ಪ ಮೆಂಡೆಗಾರ ಅದೆ ದಿನ ಅಂದರೆ ಜೂನ್ 30ರಂದು ದೂರು ದಾಖಲಿಸಿದ್ದಾರೆ.

ಯುವತಿಯರ ಮಿಸ್ಸಿಂಗ್ ಹಿಂದೆ ಏನು ಕಾರಣ?

ಇಷ್ಟು ನಾಪತ್ತೆ ಪ್ರಕರಣದಲ್ಲಿ ಬಹುತೇಕತರು 18ರಿಂದ 23 ವರ್ಷದ ಒಳಗಿನವರು. ಜುಲೈ 1ರಿಂದ 8ರ ನಡುವೆ 7 ಜನ ಯುವತಿಯರು ಮಿಸ್ಸಿಂಗ್ ಆಗಿದ್ದಾರೆ. ಜೂನ್ 26ರಂದು ಓರ್ವ ಯುವತಿಯಾದ್ರೆ ಜೂನ್ 30ರಂದೇ ಇಬ್ಬರು ಯುವತಿಯರು ನಾಪತ್ತೆಯಾಗಿದ್ದಾರೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಹುಡುಗಿಯರು ಕಾಣೆಯಾಗ್ತಿರುವುದು ಹೆತ್ತವರಲ್ಲಿ ಭಯ ಮೂಡಿಸಿದೆ.

ಹೀಗೆ ಕಾಣೆಯಾದ ಯುವತಿಯರ ಪ್ರಕರಣ ಹಿಂದೆ ಪ್ರೀತಿ ಪ್ರೇಮವಿದೆಯೋ, ಅಪಹರಣ ಮಾಡಿದ್ದಾರೋ ಅಥವ ಯಾರಾದ್ರೂ ಯಾಮಾರಿಸಿ ನೆರೆಯ ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ನಡೆಯುವ ಮಾಂಸದಂಧೆಗೆ ಎಳೆದುಕೊಂಡು ಹೋಗಲಾಗಿದೆಯೋ ಅನ್ನೋ ಶಂಕೆ ಮೂಡಿದೆ. ಜಿಲ್ಲೆಯಲ್ಲಿ ಯುವತಿಯರ ನಾಪತ್ತೆ ಪ್ರಕರಣಗಳು ಇಷ್ಟೊಂದು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಅನ್ನೋ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.

ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡು ಯಾವ ಕಾರಣಕ್ಕೆ ಯುವತಿಯರು ಇಷ್ಟೊಂದು ಪ್ರಮಾಣದಲ್ಲಿ ಕಾಣೆಯಾಗ್ತಿದ್ದಾರೆ ಅನ್ನೋದರ ತನಿಖೆ ನಡೆಸಬೇಕಿದೆ. ಒಂದು ವೇಳೆ ಇದರಲ್ಲಿ ಮಾನವಕಳ್ಳ ಸಾಗಾಣಿಕೆ ಜಾಲ ಕೆಲಸ ಮಾಡ್ತಿದ್ರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಮೂಲಕ ಯುವತಿಯರನ್ನ, ಹೆತ್ತವರ ಕಣ್ಣೀರಿಗೆ ಮುಕ್ತಿ ನೀಡಬೇಕಿದೆ.




Leave a Reply

Your email address will not be published. Required fields are marked *

error: Content is protected !!