ಇವರ ಅಕ್ರಮಕ್ಕೆ ಬ್ರೇಕ್ ಹಾಕಿತ್ತು ಲಾಕ್ ಡೌನ್.. ಗಂಡನಿಗೆ ಗುಂಡಿ ತೋಡಿದ್ಳು ಹೆಂಡ್ತಿ

344

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಕಳೆದ ಸುಮಾರು 7 ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬೇಧಿಸಿದ್ದಾರೆ. ಕುಣಿಗಲ್ ಮೂಲದ ಶಿವಲಿಂಗ(46)ನ ಹತ್ಯೆಯನ್ನ ಮಾಡಿದ್ದು ಮತ್ಯಾರೂ ಅಲ್ಲ ಸ್ವತಃ ಅವನ ಹೆಂಡ್ತಿ ಹಾಗೂ ಕೆಲಸದಾಳು.

ಆರೋಪಿಗಳಾದ ಶೋಭಾ(44) ಹಾಗೂ ರಾಮು(45) ಎಂಬುವರನ್ನ ಅರೆಸ್ಟ್ ಮಾಡಲಾಗಿದೆ. ಶಿವಲಿಂಗನನ್ನ ತಾವೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ. ಕುಣಿಗಲ್ ಮೂಲದ ಶಿವಲಿಂಗ, ಬೆಂಗಳೂರಿಗೆ ಬಂದು ತೋಟದಗುಡ್ಡದಹಳ್ಳಿಯಲ್ಲಿ ಸಣ್ಣದೊಂದು ಹೋಟೆಲ್ ಇಟ್ಟುಕೊಂಡಿದ್ದ. ಜೊತೆಗೆ ಬನ್ನೇರುಘಟ್ಟದಲ್ಲೊಂದು ಹೋಟೆಲ್ ಇತ್ತು. ಹೀಗಾಗಿ ಎರಡೂ ಕಡೆ ಹೋಗಿ ಬರುತ್ತಾ ನಿರ್ವಹಣೆ ಮಾಡುತ್ತಿದ್ದ.

16 ವರ್ಷಗಳ ಇವರ ಸಂಸಾರಕ್ಕೆ ಎರಡು ಮಕ್ಕಳಿವೆ. ಇದೆಲ್ಲದರ ನಡುವೆ ಶಿವಲಿಂಗ ಒಂದಿಷ್ಟು ಕುಡಿತದ ಚಟಕ್ಕೆ ಬಿದ್ದಿದ್ದ. ಗಂಡನ ಕುಡಿತ ಹಾಗೂ ಓಡಾಟದಿಂದಾಗಿ ಕೆಲಸದಾಳು ರಾಮು ಜೊತೆಗೆ ಶೋಭಾ ಸಲುಗೆ ಬೆಳೆದಿದೆ. ಅದು ಇಬ್ಬರಿಬ್ಬರ ನಡುವಿನ ಅಕ್ರಮ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿದೆ. ಸಂಬಂಧಕ್ಕೆ ಸಂಕಟ ಶುರುವಾಗಿದ್ದು ಲಾಕ್ ಡೌನ್ ಟೈಂನಲ್ಲಿ.

ಲಾಕ್ ಡೌನ್ ನಲ್ಲಿ ನಡೀತು ಮರ್ಡರ್

ಕೋವಿಡ್ ನಿಂದಾಗಿ ಯಾವಾಗ ಲಾಕ್ ಡೌನ್ ಘೋಷಿಸಲಾಯ್ತೋ ಆಗ ಹೋಟೆಲ್ ಬಂದ್ ಆಗಿ ಶಿವಲಿಂಗ ಮನೆಯಲ್ಲಿರುತ್ತಿದ್ದ. ಹೀಗಾಗಿ ಶೋಭಾ-ರಾಮು ಕಳ್ಳಾಟ ನಿಂತು ಹೋಗಿದೆ. ತಮ್ಮ ಕಳ್ಳಾಟ ಮುಂದುವರೆಸಲು ಶಿವಲಿಂಗನಿಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಜೂನ್ 7, 2020ರಂದು ಶವ ಪತ್ತೆಯಾಗುವ 7 ದಿನಗಳ ಮೊದ್ಲು ಶಿವಲಿಂಗನನ್ನ ಒಂದು ದಿನ ರಾತ್ರಿ ಇವರಿಬ್ಬರು ಸೇರಿ ಕೊಲೆ ಮಾಡಿದ್ದಾರೆ.

ಮೃತದೇಹವನ್ನ ಗೋಣಿಚೀಲದಲ್ಲಿ ತುಂಬಿ. ಅದರಲ್ಲಿ ಒಂದಿಷ್ಟು ಕಸ ಸಹ ತುಂಬಿದ್ದಾರೆ. ಬಳಿಕ ಅದನ್ನ ತೆಗೆದುಕೊಂಡು ಹೋಗಿ ಕಸದ ಗುಂಡಿಗೆ ಎಸೆದು ಅದರ ಮೇಲೆ ಮತ್ತಷ್ಟು ಕಸ ಹಾಕಿ ಹೋಗಿದ್ದಾರೆ. ಜೂನ್ 7, 2020ರಂದು ಚಿಂದಿ ಆಯುವವರಿಗೆ ಶವ ಪತ್ತೆಯಾಗಿದೆ. ಪೊಲೀಸರು ಬಂದು ನೋಡಿದ್ರೆ ಗುರುತು ಸಿಗದಷ್ಟು ಶವ ಕೊಳೆತು ಹೋಗಿದೆ. ಅಪರಿಚಿತ ಶವ ಪತ್ತೆ ಪ್ರಕರಣ ದಾಖಲಿಸಿಕೊಂಡು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಮೈದುನ ಕೊಟ್ಟ ದೂರಿನಲ್ಲಿ ಬಯಲಾಯ್ತು ಅತ್ತಿಗೆ ಅಸಲಿ ಮುಖ

ಒಮ್ಮೆ ಶಿವಲಿಂಗ ಸಹೋದರ ಪುಟ್ಟರಾಜು ಫೋನ್ ಮಾಡಿ ಅಣ್ಣನ ಬಗ್ಗೆ ವಿಚಾರಿಸಿದ್ದಾನೆ. ಆಗ ಕಥೆ ಕಟ್ಟಿದ ಶೋಭಾ, ಲಾಕ್ ಡೌನ್ ನಿಂದ ಬೇಸತ್ತು ಜಗಳ ಮಾಡಿ, 1.25 ಲಕ್ಷ ರೂಪಾಯಿ ತಗೊಂಡು ಮನೆ ಬಿಟ್ಟು ಹೋಗಿದ್ದಾರೆ ಎಂದಿದ್ದಾಳೆ. ಬಳಿಕ ಪುಟ್ಟರಾಜು ಮನೆಗೆ ಬಂದು ಕಂಪ್ಲೀಟ್ ಕೊಡೋಣ ಎಂದಿದ್ದಾನೆ. ಇದಕ್ಕೆ ಶೋಭಾ ಬೇಡ. ಅವರೆ ಬರ್ತಾರೆ ಅಂದಿದ್ದಾಳೆ.

ಶೋಭಾ-ರಾಮು ಅಕ್ರಮದ ವಾಸನೆ ನಿಧಾನವಾಗಿ ಬಂದಿದೆ. ಹೀಗಾಗಿ ಪುಟ್ಟರಾಜು ನವೆಂಬರ್ ನಲ್ಲಿ ದೂರು ದಾಖಲಿಸಿದ್ದಾರೆ. ಸಂಬಂಧಿಕರು ಸಹ ಇವರಿಬ್ಬರ ಬಗ್ಗೆ ಒಂದಿಷ್ಟು ಅನುಮಾನ ಮೂಡಿರುವುದಾಗಿ ಹೇಳಿದ್ದಾರೆ. ಆಗ ಪೊಲೀಸರು ಇವರಿಬ್ಬರ ಮೇಲೆ ಒಂದು ನಿಗಾ ಇಟ್ಟು ತನಿಖೆ ನಡೆಸಿದ್ದಾರೆ. ಎಲ್ಲರ ಅನುಮಾನ ಪಕ್ಕಾ ಆದ್ಮೇಲೆ ಠಾಣೆಗೆ ಕರೆದುಕೊಂಡು ಬಂದು ತಮ್ಮದೆ ಸ್ಟೈಲ್ ನಲ್ಲಿ ವಿಚಾರಣೆಗೆ ನಡೆಸಿದಾಗ ಕೊಲೆ ಮಾಡಿರುವ ಸತ್ಯ ಒಪ್ಪಿಕೊಂಡಿದ್ದಾರೆ. ಅಲ್ಲಿಗೆ 7 ತಿಂಗಳ ಹಿಂದೆ ಕೊಲೆ ಮಾಡಿದವರು ಅಂದರ್ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!