ಡಾ.ಕಾಪಸೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ

241

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ನವದೆಹಲಿ: ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಅವರ ಅನುವಾದ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಿಕ್ಕಿದೆ. ವಿ.ಸ ಖಾಂಡೇಕರ್ ಅವರ ಮರಾಠಿಯ ‘ಏಕಾ ಪಾನಾಚಿ ಗೋಷ್ಠ’ ಅನ್ನೋ ಆತ್ಮಕಥೆಯನ್ನು ಕನ್ನಡಕ್ಕೆ ‘ಒಂದು ಪುಟದ ಕಥೆ’ ಹೆಸರಿನ ಮೂಲಕ ಅನುವಾದಿಸಿದ್ದಾರೆ.

ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ‘ಒಂದು ಪುಟದ ಕಥೆ’ ಆಯ್ಕೆಯಾಗಿದೆ. ಖಾಂಡೇಕರ್ ಅವರು ಮರಾಠಿಯ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಲೇಖಕರು. ಅವರ ‘ಯಯಾತಿ ‘ ಎಂಬ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ.

ಡಾ.ಕಾಪಸೆಯವರು ಅನುವಾದಿಸಿದ ಖಾಂಡೇಕರ್ ಅವರ ಆತ್ಮಕಥೆಯು ಕಳೆದ ಶತಮಾನದ ಭಾರತದ ಅದರಲ್ಲಿಯೂ ಮಹಾರಾಷ್ಟದ ಕೊಂಕಣ ಭಾಗದ ಸಾಮಾಜಿಕ, ಆರ್ಥಿಕ, ರಾಜಕೀಯ, ಜಾತೀಯ ಸ್ಥಿತಿಗತಿಗಳ ಸಮಗ್ರವಾದ ವಿವರಣೆ ನೀಡುತ್ತದೆ. ವಿಶೇಷವೆಂದರೆ ಖಾಂಡೇಕರ್ ಅವರು ಕರ್ನಾಟಕದ ಅದರಲ್ಲೂ ಬೆಳಗಾವಿ ಜಿಲ್ಲೆಯ ಅಳಿಯ. ಖಾನಾಪುರ ತಾಲೂಕಿನ ಅಸೋಗಾ ಗ್ರಾಮದ ಮಣೇರಿಕರ್ ಕುಟುಂಬದ ಉಷಾ ಅವರು ಖಾಂಡೇಕರ್ ರ ಹೆಂಡತಿ. ಮದುವೆಗಾಗಿ ಅವರು ಮಹಾರಾಷ್ಟ್ರದ ರತ್ನಾಗಿರಿಯಿಂದ ಅಸೋಗಾ ಗ್ರಾಮದವರೆಗೆ ಚಕ್ಕಡಿ ಕಟ್ಟಿಕೊಂಡು ಬಂದ ವಿವರಗಳನ್ನು ಕೃತಿಯಲ್ಲಿ ನೀಡಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ವಿಭಾಗದ ಸಂಚಾಲಕರಾಗಿರುವ ಡಾ.ಸರಜೂ ಕಾಟ್ಕರ್ ಅವರ ಉಸ್ತುವಾರಿಯಲ್ಲಿ ನಡೆದ ಅನುವಾದ ಸಾಹಿತ್ಯ ಪ್ರಶಸ್ತಿ ಆಯ್ಕೆ ಸಮಿತಿಯು ಡಾ.ಕಾಪಸೆ ಅವರು ಅನುವಾದಿಸಿದ ಈ ಕೃತಿಯನ್ನು ಪ್ರಶಸ್ತಿಗೆ ಆಯ್ಕೆಮಾಡಿತು.

ಆಯ್ಕೆ ಸಮಿತಿಯ ಜ್ಯೂರಿಗಳಾಗಿ ಹಿರಿಯ ಲೇಖಕ ಡಾ.ಬಸವರಾಜ ಕಲ್ಗುಡಿ, ಕವಿಗಳಾದ ಬಿ.ಆರ್ ಲಕ್ಷ್ಮಣರಾವ್ ಹಾಗೂ ಡಾ ಸುಬ್ಬು ಹೊಲಿಯಾರ್ ಅವರಿದ್ದರು. ಪ್ರಶಸ್ತಿ ಪ್ರದಾನ  ಸಮಾರಂಭವು ಆಗಸ್ಟ್‌ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆಯಲಿದೆ. ಪ್ರಶಸ್ತಿಯು 50 ಸಾವಿರ ರುಪಾಯಿ , ಸ್ಮತಿ ಫಲಕ, ಶಾಲು ಸನ್ಮಾನ ಒಳಗೊಂಡಿರುತ್ತದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ಭಾಜನರಾದ ಡಾ.ಕಾಪಸೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಚಂದ್ರಶೇಖರ ಕಂಬಾರ ಅವರು ಅಭಿನಂದಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!