ಪೂರಿಯಲ್ಲಿ ಹಲ್ಲಿ ಬಿದ್ದ ಪ್ರಕರಣ: ಗ್ರಾಹಕರಿಗೆ ಪರಿಹಾರಕ್ಕೆ ಆದೇಶ

374

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: 2018ರಲ್ಲಿ ನಡೆದ ಪ್ರಕರಣ ಸಂಬಂಧ ಇಬ್ಬರು ಗ್ರಾಹಕರಿಗೆ 90 ಸಾವಿರ ರೂಪಾಯಿಗಳ ಪರಿಹಾರ ನೀಡಬೇಕೆಂದು ಹೋಟೆಲ್ ಮಾಲೀಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಇಲ್ಲಿನ ವರೂರ ಹತ್ತಿರ ಕಾಮತ್ ಉಪಚಾರ ಹೋಟೆಲ್ ಮಾಲೀಕರಿಗೆ ವಿನಾಯಕ ಹಾಗೂ ಸಹನಾ ಅವರಿಗೆ 90 ಸಾವಿರ ರೂಪಾಯಿ ಪರಿಹಾರ ನೀಡಲು ಆದೇಶಿಸಲಾಗಿದೆ.

ಘಟನೆ ಹಿನ್ನೆಲೆ ಏನು?

ಕಳೆದ ಸೆಪ್ಟೆಂಬರ್ 26, 2018ರಂದು ಗ್ರಾಹಕರಾದ ವಿನಾಯಕ ಹಾಗೂ ಸಹನಾ ಕಾಮತ್ ಉಪಹಾರ ಹೋಟೆಲ್ ಗೆ ಬೆಳಗ್ಗೆ ಟಿಫಿನ್ ಮಾಡಲು ಹೋಗಿದ್ದರು. ಪೂರಿ ಭಾಜಿ ಆರ್ಡರ್ ಮಾಡಿದ್ದರು. ಪೂರಿ ತಿನ್ನುತ್ತಿರುವ ವೇಳೆ ಹಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಇದನ್ನು ಹೋಟೆಲ್ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಆದರೂ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ವಿಷಪೂರಿತ ಆಹಾರ ಸೇವಿಸಿದ್ದ ಗ್ರಾಹಕರಿಗೆ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ. ಶಿಗ್ಗಾಂವ ಹಾಗೂ ಹುಬ್ಬಳ್ಳಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರು. ನಂತರ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದರು.

ದೂರು ಕುರಿತು ಆಯೋಗವು ತನಿಖೆ ನಡೆಸಿ ಕಾಮತ್ ಉಪಚಾರ ಹೋಟೆಲ್ ‌ನವರಿಂದ ಗ್ರಾಹಕರಿಗೆ ಸೇವಾ ನ್ಯೂನ್ಯತೆಯಾಗಿದೆ ಎಂದು ತೀರ್ಮಾನಿಸಿ, ಹೊಟೇಲ್‌ನವರು ಇಬ್ಬರೂ ಗ್ರಾಹಕರಿಗೆ 90 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ಪಿ.ಸಿ.ಹಿರೇಮಠ, ವಿ.ಎ. ಬೋಳಶೆಟ್ಟಿ ರವರು ತೀರ್ಪು ನೀಡಿ ಆದೇಶಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!