ವಿಶ್ವ ಚಿತ್ರ ಜಗತ್ತಿನಲ್ಲೇ ಹೊಸ ದಾಖಲೆ ಬರೆದ ಕನ್ನಡದ ಸಿನಿಮಾ

583

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಒಬ್ಬ ಕಲಾವಿದ ಇಪ್ಪತ್ತನಾಲ್ಕು ಪಾತ್ರಗಳನ್ನು ನಿರ್ವಹಿಸಿದ ಏಕವ್ಯಕ್ತಿ ಸಿನಿಮಾವಾದ ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ’ ಪೋಸ್ಟರ್, ಟ್ರೇಲರ್ ಶನಿವಾರ ಮಲ್ಲೇಶ್ವರಂನಲ್ಲಿರುವ ರೇಣುಕಾಂಬ ಸ್ಟುಡಿಯೋದಲ್ಲಿ ಬಿಡುಗಡೆಯಾಯಿತು.

ಸಂತೋಷ್ ಕೊಡಂಕೇರಿ ನಿರ್ದೇಶಿಸಿರುವ ಈ ಸಿನಿಮಾದ ಮೂಲ ಕತೆ ರವೀಂದ್ರನಾಥ್ ಠಾಗೋರ್ ಅವರದು. ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಮತ್ತು ಸಂಗೀತದ ಹೊಣೆ ಹೊತ್ತಿರುವ ಯೋಗೇ॑ಶ್ ಮಾಸ್ಟರ್ ತಾವೇ ಅಭಿನಯಿಸಿದ್ದಾರೆ. ಇಪ್ಪತ್ತು ವರ್ಷಗಳ ಹಿಂದಿನ ತಮ್ಮದೇ ಏಕವ್ಯಕ್ತಿ ರಂಗಪ್ರಯೋಗದ ಅನುಭವವನ್ನು ಸಿನಿಮಾದಲ್ಲಿನ ಅಭಿನಯಕ್ಕೆ ಬದಲಿಸಿಕೊಂಡಿದ್ದಾರೆ.

ಕಮಲ್ ಹಾಸನ್ ದಶವತಾರಂ ಚಿತ್ರದಲ್ಲಿ ಹತ್ತು ಪಾತ್ರಗಳನ್ನು ಒಬ್ಬರೇ ನಿರ್ವಹಿಸಿದಂತೆ ಒಬ್ಬನೇ ವ್ಯಕ್ತಿ ಹಲವು ಪಾತ್ರಗಳನ್ನು ನಿರ್ವಹಿಸಿರುವ ಹಲವಾರು ಉದಾಹರಣೆಗಳು ಇರುವುದಾದರೂ ಅವರಿಗೆ ಇತರ ಪಾತ್ರಧಾರಿಗಳ ಆಸರೆ ಇದ್ದವು. ಹಾಗೆಯೇ ಶಾಂತಿಯಂತಹ ಸಿನಿಮಾದಲ್ಲಿ ಭಾವನಾ ಅಭಿನಯಿಸಿದಂತೆ ಏಕವ್ಯಕ್ತಿ ಸಿನಿಮಾದಲ್ಲಿ ಒಂದೇ ಪಾತ್ರವು ಇಡೀ ಸಿನಿಮಾವನ್ನು ಆವರಿಸಿತ್ತು. ಆದರೆ ಈ ಸಿನಿಮಾದಲ್ಲಿ ಯೋಗೇಶ್ ಮಾಸ್ಟರ್ ಇಪ್ಪತ್ತನಾಲ್ಕು ಪಾತ್ರಗಳಲ್ಲಿ ಇತರ ಯಾವುದೇ ಸಹಕಲಾವಿದರ ನೆರವಿಲ್ಲದೇ ಇಡೀ ಚಿತ್ರದ ಪೂರ್ತಿ ಆವರಿಸಿಕೊಂಡಿರುವುದು ವಿಶೇಷ. ಪ್ರಾಯಶಃ ಇದು ದಾಖಲೆಯ ಪ್ರಯತ್ನ.

ದೃಷ್ಟಿ ಮೀಡಿಯಾ ನಿರ್ಮಾಣದ ಈ ಚಲನಚಿತ್ರದ ಹೆಗ್ಗಳಿಕೆಯೆಂದರೆ, ಕೋವಿಡ್ ಲಾಕ್ಡೌನ್ ಸಮಯದಲ್ಲಿ ಇದ್ದಂತಹ ಇತಿಮಿತಿಗಳಲ್ಲೇ ಅತ್ಯಂತ ಕಡಿಮೆ ಮಾನವ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಗುಹಾಂತರ ರೆಸಾರ್ಟಿನಲ್ಲಿ ಈ ಪೂರ್ಣ ಪ್ರಮಾಣದ ಚಲನಚಿತ್ರವನ್ನು ನಿರ್ಮಿಸಿತು. ಕಠಿಣಕರವಾದ ಸವಾಲೆಂದರೆ ಒಬ್ಬನೇ ವ್ಯಕ್ತಿ ವಿವಿಧ ಪಾತ್ರಗಳಲ್ಲಿ ಪರಸ್ಪರ ಸಂವಾದಿಸಿಕೊಂಡು ಕಟ್ಟಿಕೊಂಡು ಹೋಗುವ ಕತೆಯನ್ನು ಚಿತ್ರೀಕರಿಸುವುದು. ಈ ಸಾಹಸದ ಕುರಿತು ರೋಹಿತ್ ಮಂಜ್ರೇಕರ್ ಅಚ್ಚರಿ ವ್ಯಕ್ತಪಡಿಸಿದರು. ಒಬ್ಬ ಕಲಾವಿದ ಹೆಣ್ಣು, ಗಂಡು, ಮುದುಕ, ಮುದುಕಿ, ಹುಡುಗ, ಯುವತಿ; ಹೀಗೆ ನಾನಾ ಬಗೆಯ ಪಾತ್ರಗಳನ್ನು ಹೋಲಿಕೆಯೇ ಇಲ್ಲದಂತೆ ಅಭಿನಯಿಸುತ್ತಾ ಹೋಗುವುದನ್ನು ಅವರು ಪ್ರಶಂಸಿಸಿದರು.

ಸಂಗೀತ ನಿರ್ದೇಶಕ, ಸಿನಿಮಾ ನಿರ್ದೇಶಕ ಮತ್ತು ಜಾಹೀರಾತು ಸಿನಿಮಾ ಜಗತ್ತಿನ ದಿಗ್ಗಜರಾದ ರೋಹಿತ್ ಮಂಜ್ರೇಕರ್ ಕನ್ನಡದ ಪ್ರಯೋಗಾತ್ಮಕ ಮತ್ತು ಕಲಾತ್ಮಕ ಸಿನಿಮಾಗಳು ಬೇರೆ ಬೇರೆ ಭಾಷೆಯಲ್ಲಿ ಚರ್ಚೆಗಳಾಗುತ್ತಿರುವಾಗ ಮತ್ತು ಪ್ರಶಂಸೆಗೆ ಒಳಗಾಗುತ್ತಿರುವಾಗ ಕನ್ನಡದ ಮಾಧ್ಯಮಗಳು ಮತ್ತು ಸಿನಿಮಾ ವಲಯದವರು ಅದನ್ನು ಚರ್ಚೆಗೆ, ಪ್ರದರ್ಶನಕ್ಕೆ ಮತ್ತು ಅಧ್ಯಯನಕ್ಕೆ ಏಕೆತ್ತಿಕೊಳ್ಳಬಾರದು ಎಂದು ಕೆಲವು ಉದಾಹರಣೆಗಳ ಸಮೇತ ವಿವರಿಸಿದರು.

ನಿರ್ದೇಶಕರಾದ ಸಂತೋಷ್ ಕೊಡಂಕೇರಿಯವರು ಸಂಪೂರ್ಣ ಸಿನಿಮಾ ತಂತ್ರಜ್ಞಾನವನ್ನು ಬಳಸಿಕೊಂಡು ಮತ್ತು ಗುಣಮಟ್ಟದಲ್ಲಿ ಎಲ್ಲಿಯೂ ರಾಜಿಯಾಗದಂತೆ ರಂಗಪ್ರಯೋಗವನ್ನು ಸೆಲ್ಯುಲಾಯ್ಡ್  ಮಾಧ್ಯಮಕ್ಕೆ ತಂದ ಸಾಹಸದ ಕುರಿತು ಹೇಳಿದರು. ಸ್ಥಳೀಯ ಪ್ರತಿಭೆಗಳಿಗೆ, ಸ್ಥಳೀಯರ ಪ್ರಯೋಗಗಳಿಗೆ ಸ್ಥಳೀಯ ಚಲನಚಿತ್ರ್ತಉತ್ಸವಗಳು ಮಾನ್ಯತೆ ಕೊಡದಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಯೋಗೇಶ್ ಮಾಸ್ಟರ್ ಮಾತಾಡುತ್ತಾ ಮುಗ್ಧ ಮನಸುಗಳಿಂದ ಕತೆಗಳನ್ನು ಕೇಳುವ ಮಕ್ಕಳು ತಮ್ಮಿಷ್ಟದ ಪಾತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳುವುದರ ಬಗ್ಗೆ ಕತೆಗಳ ಪ್ರಭಾವಗಳನ್ನು ವಿಶ್ಲೇಷಿಸಿದರು. ಕೆ.ಹೆಚ್ ಕಲಾಸೌಧದ ಉದ್ಘಾಟನೆಯ ತರುವಾಯ ಮೊದಲ ’ಟಿಕೇಟೆಡ್ ಶೋ’ ಆಗಿದ್ದ ಈ ನಾಟಕ ಸಿನಿಮಾ ಆಗಿರುವುದರ ಬಗ್ಗ್ತೆಮತ್ತು ಅದಕ್ಕೆ ತಾವು ಮಾಡಿಕೊಂಡ ತಯಾರಿಗಳ ಬಗ್ಗೆ ವಿವರಿಸಿದರು. ಚಲನಚಿತ್ರೋತ್ಸವದಲ್ಲಿ ಆಯ್ಕೆ ಮಾಡದ ನಿಲುವಿನ ಬಗ್ಗೆ ನಿರ್ದೇಶಕರು ಎತ್ತಿದ ಬೇಸರವನ್ನು ಮುಂದುವರಿಸಿ, ಯಾವ ಮಾನದಂಡಗಳಲ್ಲಿ ಚಿತ್ರಗಳನ್ನು ಅಳೆಯುತ್ತಾರೆ ಎಂಬುದರ ಬಗ್ಗೆ ಒಂದು ಸ್ಪಷ್ಟತೆಯನ್ನು ಅವರು ಸಾರ್ವಜನಿಕಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದರು. ಅವರವರ ಇಷ್ಟ ಬಂದಂತೆ ಆಯ್ಕೆ ಮತ್ತು ತಿರಸ್ಕಾರ ಮಾಡುವುದನ್ನು ಖಂಡಿಸಿದ ಅವರು ಚಲನಚಿತ್ರಗಳ ಆಯ್ಕೆಯ ಮಾನದಂಡಗಳ ಬಗ್ಗೆ ಮತ್ತು ಆಯ್ಕೆ ಮಾಡುವವರ ಮಾನದಂಡಗಳ ಬಗ್ಗೆಯೂ ಸ್ಪಷ್ಟತೆಯನ್ನು ಪ್ರಕಟಿಸುವಂತೆ ಒತ್ತಾಯಿಸಿದರು.

ಬಿಡುಗಡೆಯ ಮುಂದಿನ ಕ್ರಮಗಳ ಬಗ್ಗೆ ಹಂತಹಂತವಾಗಿ ಪ್ರಕಟಣೆಗಳನ್ನು ನೀಡುವುದಾಗಿ ಸಂತೋಷ್ ಕೊಡಂಕೇರಿ ಹೇಳಿದರು. ಛಾಯಾಗ್ರಾಹಕ ಜೀವನ್ ಗೌಡ, ಸಂಕಲನಕಾರ ರಘು ಹಾಗೂ ಇತರ ತಂತ್ರಜ್ಞರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!