ಚೆಲ್ಲಾಪಿಲ್ಲಿಯಾದ ವೋಟರ್ಸ್.. ಪ್ರಭಾವಿ ನಾಯಕರ ಸುತ್ತ ಅನುಮಾನದ ವಾಸನೆ!

523

ಪ್ರಜಾಸ್ತ್ರ ವಿಶೇಷ ವರದಿ:

ಸಿಂದಗಿ: ಪಟ್ಟಣದ ಪುರಸಭೆಯ 23 ವಾರ್ಡ್ ಗಳಿಗೆ ಫೆಬ್ರವರಿ 9ರಂದು ಮತದಾನ ನಡೆಯಲಿದೆ. ಈಗಾಗ್ಲೇ ಚುನಾವಣೆ ಕಾವು ಜೋರಾಗಿದ್ದು ಜನವರಿ 28 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಹಿಂದಿನ ಸದಸ್ಯರ ಅವಧಿ ಮುಗಿದು 11 ತಿಂಗಳ ಬಳಿಕ ಎಲೆಕ್ಷನ್ ನಡೆಯುತ್ತಿದೆ. ಆದ್ರೆ, ಮತದಾರ ಪ್ರಭುಗಳಲ್ಲಿ ಉತ್ಸವಿಲ್ಲ. ಇದಕ್ಕೆ ಕಾರಣವಾಗಿರೋದು ಹರಿದು ಹಂಚಿ ಹೋದ ವೋಟರ್ಸ್.

ಯೆಸ್, ಇದೀಗ ನೀವು ಯಾವುದೇ ವಾರ್ಡ್ ಗೆ ಹೋದರೂ ಅಲ್ಲಿನ ಜನರ ಬಾಯಿಯಲ್ಲಿ ಕೇಳಿ ಬರ್ತಿರುವ ಮಾತು ಅಂದ್ರೆ, ನಮ್ಮ ವೋಟ್ ಒಡೆದು ಹೋಗಿವೆ. ನಾವು ಇದ್ದ ವಾರ್ಡ್ ನಿಂದ ಮತ್ತೊಂದು ವಾರ್ಡ್ ಗೆ ನಮ್ಮನ್ನ ತೆಗೆದು ಹಾಕಲಾಗಿದೆ. ಇದು ಹೇಗಾಗಿದೆ ಅನ್ನೋದು ನಮ್ಗೆ ಗೊತ್ತಾಗ್ತಿಲ್ಲ ಅಂತಿದ್ದಾರೆ. ಒಂದೊಂದು ವಾರ್ಡ್ ನಲ್ಲಿ 40-50 ರಿಂದ 100-200 ತನಕ ಮತದಾರರನ್ನ ಅದಲು ಬದಲು ಮಾಡಲಾಗಿದೆ ಅನ್ನೋ ಗಂಭೀರ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಇದರ ಹಿಂದೆ ಪ್ರಭಾವಿ ನಾಯಕರು, ಕೆಲ ಮಾಜಿ ಸದಸ್ಯರು ಹಾಗೂ ಚುನಾವಣೆಗೆ ನಿಲ್ಲಬೇಕು ಎಂದು ನಿರ್ಧಾರ ಮಾಡಿದ್ದವರು ಮಾಡಿದ ಕೆಲಸ ಅನ್ನೋ ಅನುಮಾನ ವ್ಯಕ್ತವಾಗಿದೆ. ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನ ಬಳಸಿಕೊಳ್ಳಲಾಗಿದೆ ಅಂತಾ ಹೇಳಲಾಗ್ತಿದೆ.

ಕೆಲ ಮತದಾರರು ‘ಪ್ರಜಾಸ್ತ್ರ’ದೊಂದಿಗೆ ಮಾತ್ನಾಡಿದ್ದು ನಮ್ಮ ಮನೆಯಲ್ಲಿ ನನ್ನದು ಒಂದು ವಾರ್ಡ್, ನನ್ನ ಹೆಂಡ್ತಿದೊಂದು ವಾರ್ಡ್ ನಲ್ಲಿ ಹೆಸರು ಸೇರಿಸಲಾಗಿದೆ ಅಂತಾ ಹೇಳಿದ್ದಾರೆ. ಕೆಲವು ಕಡೆ ಕುಟುಂಬ ಕುಟುಂಬವನ್ನೇ ಎತ್ತಿ ಇನ್ನೊಂದು ವಾರ್ಡ್ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಬಗ್ಗೆ ನಾನು ತಹಶೀಲ್ದಾರ್ ಅವರಿಗೆ ಕಂಪ್ಲೇಟ್ ಮಾಡ್ತೀನಿ ಅಂತಾ ಕೆಲವರು ಹೇಳ್ತಿದ್ದಾರೆ. ಇಷ್ಟಕ್ಕೆಲ್ಲ ಕಾರಣವಾಗಿರುವುದು ಮೀಸಲಾತಿ ಆಧಾರದ ಮೇಲೆ ವಾರ್ಡ್ ಹಂಚಿಕೆ ವಿಚಾರದ ಪ್ರಕರಣ ಇನ್ನು ಕೋರ್ಟ್ ನಲ್ಲಿದೆಯಂತೆ. ಅದು ಕೈ ಕೊಟ್ಟ ಕಾರಣಕ್ಕೆ ಕೆಲ ಪ್ರಭಾವಿಗಳು ಈ ರೀತಿ ಮಾಡಿದ್ದಾರೆ ಎಂದು ಸಾರ್ವಜನಿಕರು ಹೇಳ್ತಿದ್ದಾರೆ.

ವೋಟರ್ ಐಡಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ರೂ ಬಿಎಲ್ಒ ಸಹಿ ಬೇಕು. ಆದ್ರೆ, ನಮ್ಮಲ್ಲಿ ಕೆಲವು ನೇರವಾಗಿ ಮಾಡಲಾಗಿದೆ. ಉಚಿತ ಪಡೆಯಬೇಕಾದ ವೋಟರ್ ಐಡಿಗೆ ಕೆಲವರು 500 ರೂಪಾಯಿ ಖರ್ಚು ಮಾಡಿದ್ದಾರೆ. ಈ ಬಾರಿ ಸುಮಾರು 2 ಸಾವಿರಕ್ಕೂ ಹೆಚ್ಚು ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ.

ಹೆಸರು ಹೇಳಲು ಇಚ್ಛಿಸದ ಬಿಎಲ್ಒ

ಮತದಾರರ ಪಟ್ಟಿಯಲ್ಲಿ ಹೊಸ ಹೆಸರು ಸೇರ್ಪಡೆ ಮಾಡುವುದು, ಇಲ್ಲದಿರುವ ಹೆಸರು ತೆಗೆದು ಹಾಕುವುದು, ಒಂದ್ಕಿಂತ ಹೆಚ್ಚು ಕಡೆಯಿರುವ ಹೆಸರನ್ನ ಕೈ ಬಿಡುವುದು ಸೇರಿದಂತೆ ಪ್ರಮುಖ ಕೆಲಸಗಳು ಬಿಎಲ್ಒ(ಬ್ಲಾಕ್ ಲೆವಲ್ ಆಫೀಸರ್) ಮುಖಾಂತರ ಮಾಡಲಾಗುತ್ತೆ. ಇವರ ಸಹಿ ಸಹ ಬೇಕಾಗುತ್ತೆ. ಕೆಲವರು ಇದ್ಯಾವುದನ್ನೂ ಮಾಡದೇ ನೇರವಾಗಿ ಮತದಾರರ ಪಟ್ಟಿಯಲ್ಲಿ ತಮ್ಗೆ ಬೇಕಾದವರು ಹೆಸರುಗಳನ್ನ ಸೇರಿಸಿದ್ದಾರೆ ಅಂತಾ ಹೆಸರು ಹೇಳಲು ಇಚ್ಛಿಸದ ಬಿಎಲ್ಒ ಒಬ್ಬರು ‘ಪ್ರಜಾಸ್ತ್ರ’ಕ್ಕೆ ತಿಳಿಸಿದ್ದಾರೆ.

ಪಟ್ಟಣದಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಸಿಂದಗಿ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಪಕ್ಕದ ತಾಲೂಕುಗಳಿಗೆ ಹೋಲಿಸದ್ರೆ ಇಲ್ಲಿನ ಅಭಿವೃದ್ಧಿ ಸಾಕಷ್ಟು ಹಿಂದೆ ಉಳಿದಿದೆ. ಇದೀಗ ಕೇವಲ ಗೆಲುವಿಗಾಗಿ ವಾರ್ಡ್ ಬಿಟ್ಟು ವಾರ್ಡ್ ನಲ್ಲಿ ಮತದಾರರ ಹೆಸರು ಸೇರಿಸಿದ್ರೆ ನಾವ್ಯಾಕೆ ಅಲ್ಲಿ ಹೋಗಿ ವೋಟ್ ಮಾಡ್ಬೇಕು. ನಮ್ಮ ವಾರ್ಡ್ ಅಭಿವೃದ್ಧಿ ಆಗಬೇಕು ಅಂದ್ರೆ ನಮ್ಮ ಸದಸ್ಯರನ್ನ ಕೇಳಬೇಕಾಗುತ್ತೆ. ನಮ್ಮ ವೋಟೇ ಇಲ್ಲಂದ್ರೆ ಅವರನ್ನ ಪ್ರಶ್ನೆ ಮಾಡೋದು ಹೇಗೆ ಅಂತಿರೋ ಜನ ಮತದಾನಕ್ಕೆ ನಿರಾಸಕ್ತಿ ತೋರುವ ರೀತಿಯಲ್ಲಿ ಮಾತ್ನಾಡ್ತಿದ್ದಾರೆ. ಇದೆಲ್ಲ ನೋಡಿದ್ರೆ ಈ ಬಾರಿ ಮತದಾನ ತುಂಬಾ ಕಡಿಮೆಯಾಗುವ ಲಕ್ಷಣಗಳಿವೆ. ಇದು ಹೀಗೆ ಆದ್ರೆ ಸಿಂದಗಿ ಪಟ್ಟಣ ಅಭಿವೃದ್ಧಿ ವಿಚಾರದಲ್ಲಿ ಜಿಲ್ಲೆಯಲ್ಲಿಯೇ ಮತ್ತಷ್ಟು ಹಿಂದೆ ಉಳಿಯಲಿದೆ.




Leave a Reply

Your email address will not be published. Required fields are marked *

error: Content is protected !!