ಸಿಂದಗಿ ಹರಿದ ಕೌದಿಯಂತೆ.. ಮಲೇರಿಯಾ, ಡೆಂಗ್ಯು ಬರೋ ಮೊದ್ಲೇ ಏದ್ದೇಳಿ ಸದಸ್ಯರೇ

526

ಪ್ರಜಾಸ್ತ್ರ ವಿಶೇಷ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ಜಿಲ್ಲಾ ಕೇಂದ್ರ ಸ್ಥಾನದಿಂದ ಕೇವಲ 60 ಕಿಲೋ ಮೀಟರ್ ಅಂತರದಲ್ಲಿದೆ. ಹೀಗಿದ್ರೂ ಇಲ್ಲಿನ ರಸ್ತೆಗಳು ಇಂದಿಗೂ ಓಬಿರಾಯನ ಕಾಲದಂತಿವೆ. ಹೀಗಾಗಿ ಮಳೆಗಾಲ ಬಂತು ಅಂದ್ರೆ ರಾಡಿಯಿಂದ ಕೂಡಿರುತ್ತೆ. ಉಳಿದ ಸಂದರ್ಭದಲ್ಲಿ ಧೂಳಿನಿಂದ ಮುಳುಗಿರುತ್ತೆ. ಒಟ್ಟಿನಲ್ಲಿ ಜನರು ಹೊಲಸಿನಲ್ಲಿ ಜೀವನ ಮಾಡಬೇಕು.

ಸಿಂದಗಿ ಪಟ್ಟಣ 23 ವಾರ್ಡ್ ಗಳನ್ನ ಹೊಂದಿದೆ. ಇವುಗಳಿಗೆ ನೂತನವಾಗಿ ಸದಸ್ಯರು ಸಹ ಆಯ್ಕೆಯಾಗಿದ್ದಾರೆ. ಇದರಲ್ಲಿ ಬಹುತೇಕರು ಗರಿಗರಿ ಬಟ್ಟೆ ಹಾಕಿಕೊಂಡು ಪುರಸಭೆ ಕಚೇರಿಯಲ್ಲಿಯೇ ರೌಂಡ್ ಹೊಡೆಯುತ್ತಾರೆ. ಆದ್ರೆ, ಅವರ ವಾರ್ಡ್ ನ ಮೂಲಭೂತ ಸಮಸ್ಯೆಗಳು ತ್ಯಾಪಿ ಹಚ್ಚಿದ ಅಂಗಿಯಂತಿವೆ. ಅವರಿವರ ಹುಟ್ಟು ಹಬ್ಬಗಳಿಗೆ, ಸಾಧಕರ ಜಯಂತಿಗಳಿಗೆ ಫೋಟೋ ಹಾಕಿ ಪುರಸಭೆ ಸದಸ್ಯರು ಎಂದು ಪೋಸ್ ಕೊಡ್ತಾರೆ. ತಮ್ಮನ್ನು ಗೆಲ್ಲಿಸಿದ ಜನರ ಕಷ್ಟಗಳಿಗೆ ಬೆನ್ನು ತಿರುಗಿಸ್ತಾರೆ.

ಶಾಸಕರು ಪಟ್ಟಣದ ಅಭಿವೃದ್ಧಿಗಾಗಿ ಕೋಟಿ ಕೋಟಿ ದುಡ್ಡು ಹರಿಸುತ್ತಿದ್ದೇನೆ. ಇಡೀ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎನ್ನುತ್ತಾರೆ. ವಾಸ್ತವದಲ್ಲಿ ಅವರು ಹೇಳಿದಂತೆ ಕೆಲಸವಾಗ್ತಿದ್ಯಾ ಅನ್ನೋ ಪ್ರಶ್ನೆ ಇದೆ. ಬರೀ ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್, ವಿವೇಕಾನಂದ ಸರ್ಕಲ್, ಗಾಂಧಿ ಸರ್ಕಲ್ ರಸ್ತೆ ನೋಡಿದ್ರೆ ಅಭಿವೃದ್ಧಿ ಆಗಿದೆ ಅನ್ನೋದಲ್ಲ. ಏರಿಯಾಗಳ ಒಳಗೆ ಹೋದ್ರೆ ರಸ್ತೆ, ಚರಂಡಿ, ವಿದ್ಯುತ್ ಕಂಬ, ಶೌಚಾಲಯದ ಪರಿಸ್ಥಿತಿ ಏನು ಅನ್ನೋದು ಗೊತ್ತಾಗುತ್ತೆ.

ಈ ಬಗ್ಗೆ ತಾಲೂಕು ಆಡಳಿತ ಸಹ ಗಮನ ಹರಿಸಬೇಕಿದೆ. ಇಲ್ಲದೆ ಹೋದ್ರೆ, ಸಿಂದಗಿ ಅಭಿವೃದ್ಧಿಯ ನೀಲನಕ್ಷೆ ಬರೀ ಪೇಪರ್ ನಲ್ಲಿ. ನಿಜ ಜೀವನದಲ್ಲಿ ಹರಿದ ಕೌದಿಯ ಬದುಕು. ಅದನ್ನ ಎಷ್ಟೇ ಹೊಚ್ಚಿಕೊಂಡರೂ ನಿದ್ದೆ ಹತ್ತುವುದಿಲ್ಲ. ಸೊಳ್ಳೆ ಕಡಿದು ಮಲೇರಿಯಾ, ಡೆಂಗ್ಯು ಬರುತ್ತೆ. ಹೀಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು, ನೂತನವಾಗಿ ಆಯ್ಕೆಯಾದ ಪುರಸಭೆ ಸದಸ್ಯರು ಜನರ ಸಮಸ್ಯೆಗಳಿಗೆ ಪರಿಹಾರ ಕೊಡಿಸಬೇಕಿದೆ.




Leave a Reply

Your email address will not be published. Required fields are marked *

error: Content is protected !!