ಶಾಸಕರೊಂದಿಗೆ ವಿದ್ಯಾರ್ಥಿಗಳ ಸಂವಾದ

515

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಆರ್.ಡಿ ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಮಧ್ಯಾಹ್ನ, ಶಾಸಕರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂವಾದದಲ್ಲಿ ಭಾಗವಹಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಗ್ಯಾರೆಂಟಿಗಳಿಂದ ನಮ್ಮ ಕಿಸೆ ಖಾಲಿಯಾಗಿದೆ. ಸ್ವಲ್ಪ ದಿನ ಸಮಯ ಕೊಡಿ ತಾಲೂಕಿನ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.

ತಾಲೂಕಿನ ಪ್ರಗತಿಗಾಗಿ ತಾವು ನಿರ್ವಹಿಸಿದ ಕಾರ್ಯಗಳು ಏನೆಂದು ವಿದ್ಯಾರ್ಥಿನಿ ಶಿಲ್ಪಾ ಬಡಗೇರ ಪ್ರಶ್ನಿಸಿದರು. ನಾನು ಶಾಸಕನಾಗಿ 4 ತಿಂಗಳು 24 ದಿನಗಳಾಗಿವೆ. ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳ ಪರಿಶೀಲನೆ ಮಾಡುವುದರ ಜೊತೆಗೆ ಜನರ ಬೇಡಿಕೆಗಳನ್ನು ಪೂರೈಸುವ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ನಾನು ಕೈಗೊಂಡ ಕಾರ್ಯಗಳ ಕುರಿತು ತಿಳಿಸುತ್ತೇನೆ ಎಂದರು.

ಪದವಿ ಕಾಲೇಜುಗಳನ್ನು ರಾಣಿಚನ್ನಮ್ಮ ವಿಶ್ವವಿದ್ಯಾಲಯ ಬದಲು ಜಮಖಂಡಿಗೆ ಬದಲಾಯಿಸಿರುವುದರ ಕುರಿತು ಸರ್ಕಾರದ ನಿಲುವೇನು ಎಂದು ವಿದ್ಯಾರ್ಥಿನಿ ಪೂಜಾ ಮಲಘಾಣ ಪ್ರಶ್ನಿಸಿದರು. ವಿಜಯಪುರ ಜಿಲ್ಲೆಯಲ್ಲಿ 130 ಪದವಿ ಕಾಲೇಜುಗಳಿವೆ. ಬೆಳಗಾವಿಯಲ್ಲಿ 100, ಬಾಗಲಕೋಟೆಯಲ್ಲಿ 70 ಕಾಲೇಜುಗಳಿವೆ. ಇದನ್ನು ನೋಡಿದರೆ ವಿಜಯಪುರಕ್ಕೆ ಕೇಂದ್ರ ಸ್ಥಾನ ಕೊಡಬೇಕಿತ್ತು. ಅನ್ಯಾಯವಾಗಿದೆ. ಶಿಕ್ಷಣ ಸಚಿವರು, ಸಿಎಂಗೆ ನಾನು ಮನವಿ ಮಾಡಿದ್ದು, ಹೊಸ ವಿಶ್ವವಿದ್ಯಾಲಯ ಸ್ಥಾಪಿಸುವ ತನಕ ಜಮಖಂಡಿಗಾದರೆ ಪ್ರಯಾಣ ಹಾಗೂ ಆಡಳಿತ ದೃಷ್ಟಿಯಿಂದ ಕೇಳಿದ್ದೇವೆ ಎಂದರು.

ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಯಿಂದ ಸಾಕಷ್ಟು ರಸ್ತೆ ಸಮಸ್ಯೆ, ಧೂಳು, ನೀರಿನ ಸಮಸ್ಯೆ, ಬಸ್ಸಿನ ಸಮಸ್ಯೆ, ವಸತಿ ನಿಲಯಗಳ ಗುಣಮಟ್ಟ, ಸಿಂಥೆಟಿಕ್ ಕ್ರಿಡಾಂಗಣ ಸೇರಿದಂತೆ ಹಲವು ವಿಚಾರಗಳ ಕುರಿತು ಸೌಮ್ಯ ಬಡಗೇರ, ರೋಹಿತ ಬಂಡಿವಡ್ಡರ, ಮಾರುತಿ ತಳವಾರ, ಪ್ರವೀಣ ಬಡಗೇರ, ಬೋರಮ್ಮ ಕಲಶೆಟ್ಟಿ, ಮಹಿಬೂಬ, ನಾಗಮ್ಮ ಗಡೇದ, ಸುವರ್ಣ ನಾಗಾಂವಿ, ಮುತ್ತು ಹೂಗಾರ ಶಾಸಕರಿಗೆ ಪ್ರಶ್ನೆಗಳನ್ನು ಕೇಳಿದರು.

ಸಿಂದಗಿಗೆ ಒಳಚರಂಡಿ ಮಾಡಿಸಬೇಕು ಅನ್ನೋದು ಜನರ ಬಹುದಿನಗಳ ಬೇಡಿಕೆ. 2018ರಲ್ಲಿ ನಮ್ಮ ತಂದೆಯವರು ಶಾಸಕರಾದ ಮೇಲೆ ಮೊದಲ ಆದ್ಯತೆ ಕೊಟ್ಟಿದ್ದು ಒಳಚರಂಡಿ ಹಾಗೂ ಬಳಗಾನೂರು ಕರೆಯಿಂದ ಸಿಂದಗಿ ಕೆರೆಗೆ ನೀರಿನ ವ್ಯವಸ್ಥೆ. ಸಿಂದಗಿ ಪಟ್ಟಣದ 92 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಒಳಚರಂಡಿಗಾಗಿ 90 ಕೋಟಿ ರೂಪಾಯಿ ಮಜೂರು ಮಾಡಿಸಿ, ಅದರಲ್ಲಿ 5 ಕೋಟಿ ರಸ್ತೆ ರಿಪೇರಿಗಾಗಿ ಮೀಸಲು ಇಡಲಾಯಿತು. ಈಗಾಗ್ಲೇ 79-80 ಕಿಲೋ ಮೀಟರ್ ಮುಗಿದಿದೆ. ಯೋಜನೆ ಕೆಲಸದಿಂದ ರಸ್ತೆಗಳು ಹಾಳಾಗಿದ್ದು ನಾನು ನೋಡಿದ್ದೇನೆ. ಅದೆಲ್ಲವನ್ನು ಆದಷ್ಟು ಬೇಗ ಬಗೆಹರಿಸುತ್ತೇನೆ. 40 ಕೋಟಿ ರೂಪಾಯಿ ವೆಚ್ಚದಲ್ಲಿ ಅಮೃತ-2 ಯೋಜನೆ ಮಂಜೂರು ಮಾಡಿಸಿದ್ದು, ಇದರಿಂದ ಮನೆ ಮನೆಗೆ ಕುಡಿಯುವ ನೀರು ಸಿಗಲಿದೆ. ಗ್ರಾಹಕರು ತಾವು ಬಳಸುವ ನೀರಿಗೆ ಬಿಲ್ ಕಟ್ಟಬೇಕು ಎಂದರು.

ವಸತಿ ನಿಲಯಗಳಿಗೆ ಭೇಟಿ ನೀಡಿದ್ದು, ಮೂಲಭೂತಸೌಲಭ್ಯಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಸಿಂಥೆಟಿಕ್ ಮೈದಾನ, ಒಳಾಂಗಣ ಕೀಡಾಂಗಣ, ಸುಸಜ್ಜಿತ ಈಜುಕೋಳ, ಲೋಕಲ್ ಬಸ್ ವ್ಯಸ್ಥೆ ಮಾಡಿಸಲಾಗುವುದು ಅಂತಾ ತಿಳಿಸಿದರು. ಈ ವೇಳೆ ಕಾಲೇಜಿನ ಪ್ರಚಾರ್ಯರಾದ ವಿಮಲಕಾಂತ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎನ್.ಬಿ ಪೂಜಾರಿ, ಉಪನ್ಯಾಸಕರಾದ ಬಿ.ಎಂ ಸಿಂಗನಹಳ್ಳಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಪಿ.ವಿ ಮಳಿಮಠ, ಬಸವರಾಜ ಜಮಾದಾರ, ಎಸ್.ಕೆ ಬೂದಿಹಾಳ, ಸುಭಾಷ ದೊಡಮನಿ, ಗ್ರಂಥ ಪಾಲಕ ನವೀನ ಚಳ್ಳಗಿ ಸೇರಿದಂತೆ ಅನೇಕರು ಹಾಜರಿದ್ದರು. ಶಿವಾನಂದ ಕುಂದಗೋಳ ನಿರೂಪಿಸಿದರು.




Leave a Reply

Your email address will not be published. Required fields are marked *

error: Content is protected !!