ಅಘೋಷಿತ ‘ಲಾಕ್ ಡೌನ್’ ಹಿಂದಿನ ಕಾರಣವೇನು?

306

ಪ್ರಜಾಸ್ತ್ರ ಡೆಸ್ಕ್

ಬೆಂಗಳೂರು: ಕೋವಿಡ್ 2ನೇ ಅಲೆ ಎದ್ದಿದೆ. ಇದರಿಂದಾಗಿ ದಿನೆದಿನೆ ಜನರ ಸಾವು ನೋವು ಹೆಚ್ಚಾಗುತ್ತಲೇ ಇದೆ. ಆಸ್ಪತ್ರೆಯಲ್ಲಿ ಬೆಡ್ ಇಲ್ಲ, ಆಕ್ಸಿಜನ್ ಇಲ್ಲ, ಲಸಿಕೆ ಕೊರತೆ, ಆಂಬ್ಯುಲೆನ್ಸ್ ಸಮಸ್ಯೆ ಸೇರಿದಂತೆ ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿಗೆ ತುರ್ತಾಗಿ ಸಿಗಬೇಕಾದ ಯಾವ ಸೌಲಭ್ಯವೂ ಸಿಗುತ್ತಿಲ್ಲ. ಕಳೆದ ಒಂದೂವರೆ ವರ್ಷದಿಂದ ಜನರ ಕರೋನಾ ಹಾವಳಿ ಅನುಭವಿಸುತ್ತಿದ್ದರೂ ಸರ್ಕಾರ ತನ್ನ ಜವಾಬ್ದಾರಿಯನ್ನ ಸರಿಯಾಗಿ ಪಾಲಿಸುತ್ತಿಲ್ಲ ಅನ್ನೋದೆ ಇದಕ್ಕೆ ಕಾರಣವೆಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜನರು ತಮ್ಮವರನ್ನ ಕಳೆದುಕೊಂಡು ಅಳಬೇಕೋ, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರ ಹಾಕಬೇಕೋ ಯಾವುದು ತಿಳಿಯುತ್ತಿಲ್ಲ. ಒಟ್ಟಿನಲ್ಲಿ ಹಿಂಸೆ ಅನುಭವಿಸುತ್ತಿದ್ದಾರೆ. ಗಂಟೆಗೊಂದು ಮಾರ್ಗಸೂಚಿ, ಕ್ರಮವೆಂದು ಹೇಳುತ್ತಾ ಜನರನ್ನ ಮತ್ತಷ್ಟು ಸಾಯಿಸುತ್ತಿರುವುದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಇದೆಲ್ಲದರ ನಡುವೆ ಅಘೋಷಿತ ಲಾಕ್ ಡೌನ್ ಮೂಲಕ ಸರ್ಕಾರ ಏನು ಮಾಡಲು ಹೊರಟಿದೆ ಅನ್ನೋ ಪ್ರಶ್ನೆ ಮೂಡಿದೆ.

ನೈಟ್ ಕರ್ಫ್ಯೂ ಜೊತೆಗೆ ವೀಕೆಂಟ್ ಕರ್ಫ್ಯೂ ಎಂದು ಹೇಳಿದೆ. ಜೊತೆಗೆ ಹಲವು ನಿರ್ಬಂಧಗಳನ್ನ ಹೇರಿರುವುದರಿಂದ ಅಧಿಕಾರಿಗಳು ಅಂಗಡಿ ಮುಂಗಟ್ಟುಗಳನ್ನು ಬಲವಂತದಿಂದ ಬಂದ್ ಮಾಡಿಸುತ್ತಿದ್ದಾರೆ. ಕಳೆದ ಬಾರಿ ಯಾವುದೇ ಪ್ಲಾನ್ ಇಲ್ಲದೆ ಲಾಕ್ ಡೌನ್ ಘೋಷಿಸಿ ಕೋಟ್ಯಾಂತರ ಜನರ ಬದುಕು ಕಿತ್ತುಕೊಂಡಿದ್ದ ಸರ್ಕಾರ, ಇದೀಗ ನೇರವಾಗಿ ಲಾಕ್ ಡೌನ್ ಎಂದು ಹೇಳದೆ ಕರ್ಫ್ಯೂ ಹೆಸರಿನಲ್ಲಿ ಎಲ್ಲವನ್ನೂ ಬಂದ್ ಮಾಡಿಸುವ ಮೂಲಕ ಒಂದೇ ಏಟಿಗೆ ಎರಡು ಹಣ್ಣು ಹೊಡೆಯುವ ಪ್ಲಾನ್ ಮಾಡಿದೆ. ಆದ್ರೆ, ಇದು ಜನರಿಗೆ ಅರ್ಥವಾಗುತ್ತಿದೆ.

ಐಪಿಸಿ 144 ಸೆಕ್ಷನ್ ಪ್ರಕಾರ ಗುಂಪು ಗುಂಪಾಗಿ ತಿರುಗಾಡಬಾರದು, ಸಭೆ, ಸಮಾರಂಭಗಳನ್ನ ಆಯೋಜಿಸಬಾರದು, ಧಾರ್ಮಿಕ ಕಾರ್ಯಕ್ರಮಗಳನ್ನ ನಡೆಸಬಾರದು ಅನ್ನೋದು ಸೇರಿದಂತೆ ಹಲವು ಕಟ್ಟೆಚ್ಚರಿಕೆ ನೀಡಲಾಗಿದೆ. ಒಂದು ಸಮೀತಿ ಪ್ರದೇಶಕ್ಕೆ ಹಾಗೂ ಹಿಂಸಾಚಾರದ ಹಂತಕ್ಕೆ ಹೋಗುವ ಸಂದರ್ಭದಲ್ಲಿ 144 ಸೆಕ್ಷನ್ ಜಾರಿ ಮಾಡುವುದು ಸಾಮಾನ್ಯ. ಆದ್ರೆ, ಇಡೀ ರಾಜ್ಯಕ್ಕೆ ಅದನ್ನ ವಿಸ್ತರಣೆ ಮಾಡಿ ಆದೇಶಿಸಿದ್ದು ಯಾಕೆ? ಇದರಿಂದ ಸಣ್ಣ, ಅತಿ ಸಣ್ಣ, ಮಧ್ಯಮ ವರ್ಗದ ಜನರು ಮತ್ತೆ ಸಂಕಷ್ಟ ಎದುರಿಸುವಂತಾಗುತ್ತಿದೆ. ಆರ್ಥಿಕ ಹೊಡೆತ ಮತ್ತೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಮಾನಸಿಕವಾಗಿಯೂ ಜನರು ನರಳುವ ಮೂಲಕ ಆಳುವ ಸರ್ಕಾರದ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ.

ಲಾಕ್ ಡೌನ್ ಘೋಷಿಸಿ ಜನರ ಆಕ್ರೋಶಕ್ಕೆ ನೇರವಾಗಿ ಗುರಿಯಾಗುವುದನ್ನ ತಪ್ಪಿಸಿಕೊಳ್ಳಲು, ಅಘೋಷಿತ ಲಾಕ್ ಡೌನ್ ಮಾಡುತ್ತಿರುವುದು ನಿಜಕ್ಕೂ ರಾಜಕೀಯ ದುರುದ್ದೇಶ ಹೊಂದಿದೆ ಅನ್ನೋದು ಮಾತ್ರ ಸ್ಪಷ್ಟವಾಗಿದೆ.




Leave a Reply

Your email address will not be published. Required fields are marked *

error: Content is protected !!