ರಾಜ್ಯದಲ್ಲಿ ಬಿಜೆಪಿ ಅಭಿವೃದ್ದಿಗೆ ಅನಂತಕುಮಾರ್‌-ಬಿಎಸ್‌ವೈ ಜೋಡಿ ಕಾರಣ: ಜಗದೀಶ್‌ ಶೆಟ್ಟರ್‌

198

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ರಾಜಕೀಯದ ಟ್ರಬಲ್‌ ಶೂಟರ್‌ ಆಗಿದ್ದ ಅನಂತಕುಮಾರ್‌, ಬಿಎಸ್ ಯಡಿಯೂರಪ್ಪ ನವರ ಜೊತೆಗೂಡಿ ರಾಜ್ಯದಲ್ಲಿ ಬಿಜೆಪಿ ಅಭಿವೃದ್ದಿ ಹೊಂದಲು ಪ್ರಮುಖ ಕಾರಣ ಎಂದು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್‌ ಶೆಟ್ಟರ್‌ ಹೇಳಿದರು.

ನಗರದಲ್ಲಿ ದಿವಂಗತ ಅನಂತಕುಮಾರ್‌ ಅವರ 63 ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಎ-ಚಾಟ್‌ ಅನಂತಕುಮಾರ್‌ ಸಾಂಸ್ಕೃತಿಕ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಅನಂತಕುಮಾರ್‌ ಅವರು ಮಾಡಿರುವ ಕೆಲಸಗಳು ಇಂದಿಗೂ ಅವರನ್ನ ಜೀವಂತವಾಗಿಟ್ಟಿವೆ. ತಳಮಟ್ಟದಿಂದ ರಾಷ್ಟ್ರೀಯ ಮಟ್ಟಕ್ಕೆ ಬೆಳೆದ ರೀತಿ ಬಹಳ ರೋಚಕವಾದದ್ದು. ಎಬಿವಿಪಿಯಲ್ಲಿ ಅವರ ಒಡನಾಟ ಪ್ರಾರಂಭವಾಯಿತು. ನನ್ನ ರಾಜಕೀಯ ಗುರುಗಳು ಅನಂತಕುಮಾರ್‌ ಎಂದರೆ ತಪ್ಪಾಗಲಾರದು. ತಾವೊಬ್ಬರೇ ನಾಯಕರಾಗಲಿಲ್ಲ, ನನ್ನಂತಹ ನೂರಾರು ನಾಯಕರನ್ನು ಬೆಳೆಸಿದ ಖ್ಯಾತಿ ಅವರದ್ದು. ರಾಜ್ಯದಲ್ಲಿ ಬಿಜೆಪಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸದಾ ಮುಂಚೂಣಿಯಲ್ಲಿದ್ದು, ಟ್ರಬಲ್‌ ಶೂಟರ್‌ ಎಂದೇ ಖ್ಯಾತಿಯಾಗಿದ್ದರು. ಅನಂತಕುಮಾರ್‌ ಯಶಸ್ಸಿನ ಹಿಂದೆ ತೇಜಸ್ವಿನಿ ಅವರ ಪಾತ್ರ ಹಿರಿದು. ಎಷ್ಟೋ ಬಾರಿ ಇದನ್ನ ಅನಂತಕುಮಾರ್‌ ಅವರೇ ವ್ಯಕ್ತಪಡಿಸಿದ್ದಾರೆ. ಅನಂತಕುಮಾರ್‌ ಅವರ ಕಾರ್ಯಚಟುವಟಿಕೆಗಳನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಅವರ ಕಾರ್ಯದಲ್ಲಿ ನಮ್ಮ ಸಹಕಾರ ಇರಲಿದೆ ಎಂದರು.

ಬೃಹತ್‌ ನೀರಾವರಿ ಸಚಿವರ ಗೋವಿಂದ ಕಾರಜೋಳ ಮಾತನಾಡಿ, ಅನಂತಕುಮಾರ್‌ ಅವರು ರಾಜ್ಯದ ಅಭಿವೃದ್ದಿ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಹಲವಾರು ಅದ್ಭುತ ಕೆಲಸಗಳನ್ನು ಮಾಡುವ ಮೂಲಕ ರಾಜ್ಯದ ಅಭಿವೃದ್ದಿಯಲ್ಲಿ ತಮ್ಮ ವಿಶಿಷ್ಟ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದಾರೆ. ಅಲ್ಪ ಸಮಯದಲ್ಲಿ ಬೆಂಗಳೂರಿಗೆ ಬಂದು ಪಕ್ಷದ ಕೆಲಸ ಮಾಡುವುದರ ಮೂಲಕ 6 ಸಂಸದರಾಗಿ, ಕೇಂದ್ರದಲ್ಲಿ ಮಂತ್ರಿಗಳಾಗಿ ಅದ್ಭುತ ಯಶಸ್ಸುಗೊಳಿಸಿದ್ದಾರೆ. ಇಡೀ ರಾಷ್ಟ್ರದ ಸಂಸದರ ಜೊತೆಗೆ ಆತ್ಮೀಯವಾಗಿ ಮಾತನಾಡುತ್ತಿದ್ದ ಅವರು, ತಮ್ಮ ಕಚೇರಿಗೆ ಕರೆದು ಹಲವಾರು ಅಧಿಕಾರಿಗಳನ್ನು ಹಾಗೂ ಸಚಿವರನ್ನು ಕರೆದು ತಕ್ಷಣ ಕೆಲಸ ಮಾಡಿಕೊಡುವ ಕೆಲಸ ಮಾಡುತ್ತಿದ್ದರು. ಬಹಳ ವಿಶಿಷ್ಟವಾದ ಸಾಮಾಜಿಕ ಕಾಳಜಿ ಹೊಂದಿದ್ದರು. ಸಾಮಾಜಿಕ ಕಳಕಳೀ – ಬಡವರ ಮಕ್ಕಳಿಗೆ ಉಪಹಾರದ ಯೋಜನೆ ಬಹಳ ಶ್ರೇಷ್ಠವಾದ ಕೆಲಸ ಮಾಡಿದ್ದಾರೆ. ಅವರು ಜೀವನದ ಉದ್ದಕ್ಕೂ ಮಾಡಿರುವ ಸೇವೆ ನೂರಾರು ವರ್ಷಗಳ ಕಾಲ ನೆನೆಪಿರುತ್ತದೆ. ಅವರು ಹಾಕಿಕೊಟ್ಟ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹುಟ್ಟುಹಬ್ಬದ ಪ್ಲೇಟ್‌ ಬ್ಯಾಂಕ್‌, 63 ದೇವಸ್ಥಾನಗಳ ದೇಗುಲ ದರ್ಶನದ ಕೈಪಿಡಿ ಪುಸ್ತಕ ಲೋಕಾರ್ಪಣೆ ಹಾಗೂ 63 ವಿಶಿಷ್ಟ ಬುಕ್‌ ಮಾರ್ಕರ್‌ಗಳನ್ನು ಬಿಡುಗಡೆಗೊಳಿಸಲಾಯಿತು.




Leave a Reply

Your email address will not be published. Required fields are marked *

error: Content is protected !!