ದೊಡ್ಡಾಟಕ್ಕೆ ಯಕ್ಷಗಾನದಷ್ಟು ರಾಷ್ಟ್ರ ಮನ್ನಣೆ ಸಿಕ್ಕಿಲ್ಲ: ರಂಗಕರ್ಮಿ ಪರಶುರಾಮ ಗುಡ್ಡಳ್ಳಿ

331

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕರಾವಳಿ ಭಾಗದ ರಂಗ ಕಲೆಯಾದ ಯಕ್ಷಗಾನಕ್ಕೆ ಸಿಕ್ಕ ರಾಷ್ಟ್ರ ಮನ್ನಣೆ, ಅಭಿನಯದ ಮೊದಲ ಹೆಜ್ಜೆಯಾಗಿರುವ ಉತ್ತರ ಕರ್ನಾಟಕದ ದೊಡ್ಡಾಟಕ್ಕೆ ಸಿಕ್ಕಿಲ್ಲ ಎಂದು ರಂಗಕರ್ಮಿ ಪರಶುರಾಮ ಗುಡ್ಡಳ್ಳಿ ವಿಷಾಧ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ರವಿವಾರ ಸಂಜೆ ಪ್ರಜಾಸ ವೆಬ್ ಪತ್ರಿಕೆ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಬೇಸಿಗೆ ಕಲಾ ಮೇಳಕ್ಕೆ ಚಾಲನೆ ನೀಡಿ, ಬೇಸಿಗೆ ಕಲಾ ಶಿಬಿರಗಳ ಮೂಲಕ ಮಕ್ಕಳಲ್ಲಿ ಅಭಿನಯವನ್ನು ಕರಗತಗೊಳಿಸುವ ಮೊದಲ ಹೆಜ್ಜೆಯಾಗಿದ್ದು, ಇಲ್ಲಿ ಮಕ್ಕಳಲ್ಲಡಗಿರುವ ಪ್ರತಿಭೆಯ ಜೊತೆಗೆ ಸೂಕ್ತ ಮಾರ್ಗದರ್ಶನ ಕೊಡುವ ಮೂಲಕ ಮಕ್ಕಳ ಅಭಿನಯ ಭವಿಷ್ಯವನ್ನುರಾಜ್ಯ ಮಟ್ಟಕ್ಕೆ ಚೇತನಗೊಳಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಶ್ರೀಶೈಲ ಯಳಮೇಲಿ ಹಾಗೂ ರಾಜು ಜಮಖಂಡಿ ಅವರು ಮಾತನಾಡಿ, ಕಲಾ ಮೇಳಗಳು ಮಕ್ಕಳಲ್ಲಿ ಸೃಜನಶೀಲತೆಯನ್ನು ತುಂಬುವುದರ ಜತೆಗೆ ಅವರ ನಟನಾ ಕೌಶಲ್ಯಕ್ಕೆ ಪ್ರೇರಣಾದಾಯಿಯಾಗಿ ಪ್ರೋತ್ಸಾಹಿಸಬೇಕು. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ, ಅವರಿಗೆ ಸಾಂಸ್ಕೃತಿಕ ಚಟುವಟಿಕೆಗಳತ್ತ ಹೊರಳಿಸಬೇಕು ಎಂದರು.

ಬೇಸಿಗೆ ಕಲಾ ಮೇಳದ ಸಂಯೋಜಕ, ಪ್ರಜಾಸ್ತ್ರ ವೆಬ್ ಪತ್ರಿಕೆ ಸಂಪಾದಕ ನಾಗೇಶ ತಳವಾರ ಮಾತನಾಡಿ, ಪ್ರಜಾಸದ ಮೂಲಕ ವಿಶಿಷ್ಟ ಸಾಹಿತ್ಯ ಚಟುವಟಿಕೆಗಳನ್ನುಹಮ್ಮಿಕೊಳ್ಳುತ್ತ ಬಂದಿದೆ. ವಿಭಿನ್ನವಾಗಿ ಮಕ್ಕಳ ಮನಸ್ಸನ್ನು ಅರಳಿಸುವ ಬೇಸಿಗೆ ಕಲಾ ಮೇಳದಲ್ಲಿ ಮೈಸೂರು, ಬೆಂಗಳೂರು, ಧಾರವಾಡ ಸೇರಿದಂತೆ ಸಂತ ಶಿಶುನಾಳ ಷರೀಫ್ ರ ವಂಶಸ್ಥರಾದ ಲಾಲಸಾಬ, ಮೈಸೂರಿನ ಖ್ಯಾತ ಗಾಯಕ ಲಕ್ಷ್ಮಿರಾಮ್ ಸೇರಿ ಇತರೆ ನುರಿತು ಕಲಾವಿದರು ಶಿಬಿರದ ಮಕ್ಕಳಿಗೆ ನಟನೆ, ಮುಕಾಭಿನಯ, ಪ್ರಸಾದನ, ರಂಗ ಗೀತೆಗಳ ಕಲಿಕೆ, ರಂಗ ಚಟುವಟಿಕೆಗಳ ಜತೆಗೆ ಸಂಗೀತ ಮತ್ತು ನೃತ್ಯಗಳ ತರಬೇತಿ ನೀಡಲಿದ್ದಾರೆ.

ಅಲ್ಲದೇ ನೀನಾಸಂ ನಿರ್ದೇಶಕರಾದ ಪ್ರಸನ್ನ ಹುಣಸೆಕೊಪ್ಪ, ಶ್ರೀಪಾದ ಭಟ್ಟ, ಗುರುದೇವಮೂರ್ತಿ ವರದಮಾಲ, ಶೈಲಜಾ ಹಾಗೂ ಏಸುಪ್ರಕಾಶ ಅವರಿಗೆ ದಿ.ಮಾಸ್ಟರ್ ಹಿರಣಯ್ಯ ರಚಿತ ದೇವದಾಸಿ ನಾಟಕವನ್ನು ನಿರ್ದೇಶಿಸಿರುವ ರಂಗಕರ್ಮಿ ಪರಶುರಾಮ ಗುಡ್ಡಳ್ಳಿ ಅವರೂ ಬೇಸಿಗೆ ಕಲಾ ಮೇಳದಲ್ಲಿ ಪಾಲ್ಗೊಂಡು ನೋಂದಾಯಿತ ಮಕ್ಕಳಿಗೆ ವಿಶಿಷ್ಟ ಕಲಾ ಪ್ರಕಾರಗಳನ್ನು ಪರಿಚಯಿಸಲಿದ್ದಾರೆ ಎಂದರು.

ಸ್ಥಳೀಯ ಗುರುದೇವಾಶ್ರಮದ ಶಾಂತಗಂಗಾಧರ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ಹಿರಿಯ ರೈತ ದ್ಯಾವಪ್ಪ ರೊಳ್ಳಿ, ಮಲ್ಲು ಹಿರೊಳ್ಳಿ, ಲಕ್ಕಣ್ಣ ಬೀರಗೊಂಡ, ಸಂಜೀವಕುಮಾರ ಡಾಂಗಿ, ರಾಘು ಜೋಶಿ, ನಿತ್ಯಾನಂದ ಸೋಮಾಪೂರ, ಭಾಗಮ್ಮ ಬಳುಂಡಗಿ, ರಾಜೇಶ್ವರಿ, ಜಯಲಕ್ಷ್ಮಿ, ಸಹನಾ, ಗೌರಿ, ಸುದೀಪ್, ಶ್ರೇಯಸ್ ಸೇರಿದಂತೆ ಶಿಬಿರದಲ್ಲಿ ಮಕ್ಕಳು ಹಾಗೂ ಪಾಲಕರು ಇದ್ದರು. ರೇಣುಕಾ ತಳವಾರ ನಿರೂಪಿಸಿ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!