1981ರ ಕರಾಳ ಬಾಂಬೆ ಮುಷ್ಕರದಂತೆ ಆಗುತ್ತಾ ಸಾರಿಗೆ ಮುಷ್ಕರ?

339

ಪ್ರಜಾಸ್ತ್ರ ವಿಶೇಷ, ನಾಗೇಶ ತಳವಾರ

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಜೋರಾಗಿದೆ. 6ನೇ ವೇತನ ಆಯೋಗ ಸಾಧ್ಯವಿಲ್ಲವೆಂದು ಸರ್ಕಾರ ಕಡ್ಡಿ ತುಂಡು ಮಾಡಿದಂತೆ ಹೇಳಿದೆ. ಅದು ನಮಗೆ ಬೇಕು ಎಂದು ಮುಷ್ಕರ ನಿರತರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸರ್ಕಾರ ಒಂದೊಂದೇ ಅಸ್ತ್ರಗಳನ್ನು ಸಾರಿಗೆ ಸಿಬ್ಬಂದಿ ಮೇಲೆ ಪ್ರಯೋಗ ಮಾಡುತ್ತಿದೆ. ಆದರೂ, ಅವರು ಜಗ್ಗುತ್ತಿಲ್ಲ. ಈ ಮುಷ್ಕರದ ನಾಯಕತ್ವವನ್ನು ವಹಿಸಿಕೊಂಡವರು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ.

ಸಾರಿಗೆ ನೌಕರರ ವಿವಿಧ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷರಾಗಿ ಕೋಡಿಹಳ್ಳಿ ಚಂದ್ರಶೇಖರನ್ನ ಆಯ್ಕೆ ಮಾಡಲಾಗಿದೆ. ಇದಕ್ಕೆ ಸರ್ಕಾರ ಸೇರಿದಂತೆ ಹಲವು ಕಡೆಯಿಂದ ಅಪಸ್ವರ ಎದ್ದಿದೆ. ಹೋರಾಟದ ನಾಯಕತ್ವ ವಹಿಸಿಕೊಂಡಿರುವ ವ್ಯಕ್ತಿಯ ಹಿನ್ನೆಲೆ, ರಾಜಕೀಯ ಬೆಂಬಲ ಹಾಗೂ ಏಕಾಏಕಿ ಸಾರಿಗೆ ನೌಕರರ ನಾಯಕನಾಗಿ ಹೊರಹೊಮ್ಮಿದ್ದನ್ನ ಹಲವರು ಪ್ರಶ್ನೆ ಮಾಡುತ್ತಿದ್ದು, ಈ ಮುಷ್ಕರ 1981ರಲ್ಲಿ ಬಾಂಬೆ(ಮುಂಬೈ)ಯಲ್ಲಿ ಶುರುವಾದ ಬಟ್ಟೆ ಗಿರಣಿ ಕೆಲಸಗಾರರ ಹೋರಾಟದಂತೆ ಆಗುತ್ತೆ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಇಂದಿನ ಮುಂಬೈನ ಅಂದಿನ ಬಾಂಬೆಯಲ್ಲಿ ಜವಳಿ ಉದ್ಯಮ ಜೋರಾಗಿತ್ತು. ಇಲ್ಲಿನ ಬಟ್ಟೆಗಳು ಜಗತ್ತಿನ ವಿವಿಧ ಕಡೆ ರಪ್ತಾಗುತ್ತಿದ್ದವು. ಈ ನಗರದಲ್ಲಿನ 65 ಮಿಲ್ ಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದರು. ಹೀಗಾಗಿ ಅಂದು ಇದು ಜಗತ್ತಿನ ಅತಿದೊಡ್ಡ ಕಾರ್ಮಿಕ ಶಕ್ತಿಯಾಗಿತ್ತು. ನೂರು ವರ್ಷ ಮೇಲ್ಪಟ ಬಟ್ಟೆ ಗಿರಣಿಗಳಲ್ಲಿ ಕೆಲಸ ಮಾಡಲು ಜನರು ಮುಗಿಬೀಳುತ್ತಿದ್ದರು. ಹೀಗಿರುವಾಗ ಮಹಾರಾಷ್ಟ್ರದ ಕೊಂಕಣಿ ಭಾಗದ ದತ್ತು ಸಮಂತ್ ಎಂಬಿಬಿಎಸ್ ಓದಿ ವೈದ್ಯರಾಗಿದ್ದವರು ಬರಬರುತ್ತಾ ಟ್ರೇಡ್ ಯೂನಿಯನ್ ನಲ್ಲಿ ಸಕ್ರಿಯರಾದರು. ಮುಂದೆ ಕಾಂಗ್ರೆಸ್ ನ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸೇರಿದರು. ಅಲ್ಲಿಂದ ಅವರು ಡಾಕ್ಟರಸಾಬ್ ಎಂದೇ ಖ್ಯಾತಿ ಗಳಿಸಿದರು.

1960-70ರ ದಶಕದಲ್ಲಿ ಮುಂಬೈ-ಥಾಣೆಯಲ್ಲಿ ಕಾರ್ಮಿಕ ಹೋರಾಟಗಳು ಜೋರಾಗಿದ್ದವು. ರಾಜಕೀಯ ಪಕ್ಷಗಳು ಆಡಳಿತಕ್ಕಾಗಿ ಕಾರ್ಮಿಕ ಸಂಘಟನೆಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದ್ದವು. ಇಂತಹ ಹೊತ್ತಿನಲ್ಲಿ ದತ್ತು ಸಮಂತ್ 1972ರಲ್ಲಿ ಕಾಂಗ್ರೆಸ್ ನಿಂದ ಶಾಸಕರಾದರು. ಮುಂದೆ 1975ರಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಉಗ್ರಗಾಮಿ ಒಕ್ಕೂಟವಾದಿ ಅನ್ನೋ ಕಾರಣಕ್ಕೆ ಬಂಧಿಸಿದ್ರು. 1977ರಲ್ಲಿ ಬಿಡುಗಡೆಯಾದರು. ಮುಂದೆ 1981ರಲ್ಲಿ ದತ್ತು ಸಮಂತರನ್ನ ಕಾರ್ಮಿಕರ ಒಕ್ಕೂಟದ ನಾಯಕರನ್ನಾಗಿ ಆಯ್ಕೆ ಮಾಡಿತು. ಅಂದು ಬಾಂಬೆ ಮಿಲ್ ವೋನರ್ಸ್ ಅಸೋಷಿಯೇಷನ್ ಹಾಗೂ ಕಾರ್ಮಿಕ ಒಕ್ಕೂಟದ ನಡುವೆ ನಿರಂತರ ಸಂಘರ್ಷ ನಡೆಯುತಿತ್ತು.

ಮುಂದೆ 1981, ಜನವರಿ 18ರಂದು ಹೆಚ್ಚಿನ ವೇತನ ಹಾಗೂ ಬಾಂಬೆ ಕೈಗಾರಿಕೆ ಕಾಯ್ದೆ 1947 ಅನ್ನು ರದ್ದು ಮಾಡಬೇಕು ಅನ್ನೋ ಬೇಡಿಕೆಯೊಂದಿಗೆ ಮುಷ್ಕರ ಶುರುವಾಯ್ತು. ಇದನ್ನು ಒಪ್ಪಿಕೊಂಡಿರೆ ದತ್ತು ಸಮಂತ್ ದೊಡ್ಡ ನಾಯಕನಾಗುತ್ತಾನೆ ಅನ್ನೋ ಕಾರಣಕ್ಕೆ ಮುಖ್ಯಮಂತ್ರಿ ಎ.ಆರ್ ಅಂಟುಲೆ ಸರ್ಕಾರ ಇದಕ್ಕೆ ಸೊಪ್ಪು ಹಾಕಲಿಲ್ಲ. ಮುಷ್ಕರ ಹತ್ತಿಕ್ಕಲು ಶಿವಸೇನೆ ನೋಡುತಿತ್ತು. ಇದರ ಪರಿಣಾಮ ಕಾರ್ಮಿಕರ ಮುಷ್ಕರ 1 ವರ್ಷಕ್ಕೂ ಅಧಿಕ ಕಾಲ ನಡೆಯಿತು. ಈ ನಡುವೆ ಸುಮಾರು 50 ಜವಳಿ ಉದ್ಯಮಿಗಳು ಮುಚ್ಚಿದವು. ಮೊದಲೇ ನಷ್ಟದಲ್ಲಿದ್ದ ಜವಳಿ ಉದ್ಯಮದ ಮಾಲೀಕರು ಮುಷ್ಕರದ ನೆಪ ಇಟ್ಟುಕೊಂಡು ಆಧುನೀಕರಣದ ಕಡೆ ಮುಖ ಮಾಡಿದರು.

ಬಟ್ಟೆ ಗಿರಣಿ ಮಾಲೀಕರು ರಿಯಲ್ ಎಸ್ಟೇಟ್, ಮಾಲ್, ಕಾಂಪ್ಲೆಕ್ಸ್, ಎಂಟರ್ ಟೈನ್ಮೆಂಟ್ ಕ್ಷೇತ್ರಕ್ಕೆ ಕಾಲಿಟ್ಟರು. ರಾಜಕಾರಣಿಗಳು, ಬಿಲ್ಡರ್ ಗಳು ಭೂಮಿ ಖರೀದಿಸಿದರು. ಇದರ ಪರಿಣಾಮ ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಂದರು. ಇದು ದೇಶದಲ್ಲಿ ಕರಾಳ ಮುಷ್ಕರವಾಯ್ತು. ಕಾರ್ಮಿಕ ಸಂಘಟನೆಗಳು ರಾಜಕೀಯ ಪಕ್ಷಗಳ ದಾಳವಾದವು. ದುಡಿಯುವ ವರ್ಗದ ಬೃಹತ್ ತಂಡದ ನಾಯಕತ್ವ ವಹಿಸಿಕೊಂಡವರು ಮಿಂಚಿದರು. ರಾಜಕೀಯಕ್ಕೆ ಬಂದರು. ಶಾಸಕರು, ರಾಜ್ಯ ಮಂತ್ರಿ, ಕೇಂದ್ರ ಮಂತ್ರಿಯಾದರು. ಕೊನೆಗೆ ಕಾರ್ಮಿಕ ಸಂಘಟನೆಗಳಿಗೆ ನಿಜವಾದ ನಾಯಕನಿಲ್ಲದೆ ಉಳ್ಳವರ ಕೈಯೊಳಗೆ ಸಿಕ್ಕು ಸೊರಗಿದವು.

ಈಗ ಎಲ್ಲವನ್ನೂ ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರ, ಸಾರಿಗೆ ಸಂಸ್ಥೆ ನಷ್ಟದಲ್ಲಿದೆ ಎಂದು ಹೇಳಿಕೊಂಡು ಬರುತ್ತಲೇ ಇದೆ. ರೈತ ನಾಯಕರಾಗಿದ್ದ ಕೋಡಿಹಳ್ಳಿ ಚಂದ್ರಶೇಖರ ದಿಢೀರ್ ಕಾರ್ಮಿಕರ ನಾಯಕಾಗಿದ್ದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ 6ನೇ ವೇತನ ಆಯೋಗ ಸಾಧ್ಯವೇ ಇಲ್ಲವೆಂದು ಹೇಳಿದೆ. ಇದೆ ನೆಪ ಇಟ್ಟುಕೊಂಡು ಸಾರಿಗೆ ಸಂಸ್ಥೆಯನ್ನ ಸಹ ಖಾಸಗೀಕರಣ ಮಾಡುವ ನಿರ್ಧಾರಕ್ಕೆ ಕೈ ಹಾಕಿದರೆ ಅಚ್ಚರಿ ಪಡಬೇಕಿಲ್ಲ. ಬ್ಯಾಂಕ್, ವಿಮಾನ, ರೈಲ್ವೆ, ಶಿಕ್ಷಣ, ಪ್ರವಾಸೋದ್ಯಮ ಸೇರಿದಂತೆ ಪ್ರತಿಯೊಂದನ್ನು ಖಾಸಗೀಕರಣ ಮಾಡುತ್ತಿದ್ದರೂ ಸುಮ್ಮನೆಯಿರುವ ನಮ್ಮ ಜನರು ರಸ್ತೆ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡಿದರೂ ಹೋರಾಟ ಮಾಡಲ್ಲ. ದಬ್ಬಾಳಿಕೆ ಅನುಭವಿಸುತ್ತಲೇ ಇರ್ತಾರೆ. ಹೀಗಾಗಿ ಸಾರಿಗೆ ನೌಕರರ ಮುಷ್ಕರ ಹಾದಿ ತಪ್ಪದೆ ಇದ್ದರೆ ಸಾಕು.




Leave a Reply

Your email address will not be published. Required fields are marked *

error: Content is protected !!