ಮಕ್ಕಳ ಸಾಹಿತ್ಯದಲ್ಲಿ ಗದ್ಯ ಸಾಹಿತ್ಯ ಹೆಚ್ಚಾಗಲಿ: ಪ.ಗು ಸಿದ್ದಾಪುರ

268

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಮಕ್ಕಳ ಸಾಹಿತ್ಯ ಎಂದರೆ ಬರೀ ಕವಿತೆಗಳು ಎನ್ನುವಂತಾಗಿದೆ. ಅದು ಹಾಗಲ್ಲ. ಇಲ್ಲಿಯೂ ಗದ್ಯ ಸಾಹಿತ್ಯವಿದೆ. ಆದರೆ ಮಕ್ಕಳ ಸಾಹಿತಿಗಳು ಅದರ ಕಡೆ ಹೆಚ್ಚು ಗಮನ ಹರಿಸುತ್ತಿಲ್ಲ. ಇದು ನೋವಿನ ಸಂಗತಿ ಎಂದು ಮುಳವಾಡದ ಹಿರಿಯ ಮಕ್ಕಳ ಸಾಹಿತಿ ಪ.ಗು ಸಿದ್ದಾಪುರ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಬಸವ ಮಂಟಪದಲ್ಲಿ ಮಾರ್ಚ್ 26ರ ಸಂಜೆ ವಿದ್ಯಾಚೇತನ ಹಾಗೂ ವಿಶ್ವಚೇತನ ಪ್ರಕಾಶನದ ಅಡಿಯಲ್ಲಿ ಪ್ರಕಟಣೆಗೊಂಡ ‘ಹಾಡು ಕೋಗಿಲೆ ಹಾಡು’ ಎಂಬ ಕವನ ಸಂಕಲನ, ‘ಅಜ್ಜನ ಮನೆಯ ಅಂಗಳದಲ್ಲಿ’ ಎಂಬ ಕಾದಂಬರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಮಕ್ಕಳ ಸಾಹಿತ್ಯ ಮನಸ್ಸನ್ನು ಅರಳಿಸುತ್ತದೆ. ಕುತೂಹಲವನ್ನು ಕೆರಳಿಸುತ್ತದೆ. ಇಲ್ಲಿ ಯಾವುದೇ ರೀತಿಯ ಗದ್ದಲ ಎಬ್ಬಿಸುವ ಕೆಲಸವೇ ಆಗುವುದಿಲ್ಲ. ಹೀಗಾಗಿ ಪದ್ಯದ ಜೊತೆಗೆ ಗದ್ಯ ಪ್ರಕಾರದ ಕಥೆ, ಕಾದಂಬರಿ, ಲೇಖನ, ಪ್ರಬಂಧಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮೂಡಿ ಬರಲಿ ಎಂದರು.

ಎಸ್.ಎಸ್ ಸಾತಿಹಾಳ ಅವರ ಹಾಡು ಕೋಗಿಲೆ ಹಾಡು ಕವನ ಸಂಕಲನದ ಪರಿಚಯವನ್ನು ತಾಳಿಕೋಟಿಯ ಸಾಹಿತಿ ಅಶೋಕ ಹಂಚಲಿ, ಹ.ಮ ಪೂಜಾರ ಅವರ ಅಜ್ಜನ ಮನೆಯ ಅಂಗಳದಲ್ಲಿ ಕಾದಂಬರಿಯ ಪರಿಚಯವನ್ನು ಇಂಡಿಯ ಸಾಹಿತಿ ಸಿ.ಎಂ ಬಂಡಗರ ಮಾಡಿದರು. ಎಚ್.ಜಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಆರ್ ಹೆಗ್ಗನದೊಡ್ಡಿ ಮುಖ್ಯ ಅತಿಥಿಗಳಾಗಿ, ಹಿರಿಯ ಕಥೆಗಾರ ಡಾ.ಚನ್ನಪ್ಪ ಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿರಿಯ ಮಕ್ಕಳ ಸಾಹಿತಿ ಹ.ಮ ಪೂಜಾರ ತಮ್ಮ ಬದುಕು ಬರಹದ ಕುರಿತು ಮಾತನಾಡಿದರು. ಸಾಹಿತಿ ಎಸ್.ಎಸ್ ಸಾತಿಹಾಳ ಪ್ರಾಸ್ತಾವಿಕ ನುಡಿಗಳನ್ನಾಡಿದರು.




Leave a Reply

Your email address will not be published. Required fields are marked *

error: Content is protected !!