ಕರೋನಾ ವಾರಿಯರ್ ಸತೀಶ್ ಮುಡಿಗೆ ‘ಕನ್ನಡ ವಿಕಾಸ ರತ್ನ’

456

ಪ್ರಜಾಸ್ತ್ರ ಸುದ್ದಿ

ಮೈಸೂರು: ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯು ಪ್ರತಿ ವರ್ಷ ರಾಜಶೇಖರ್ ಕೋಟಿ ಅವರ ಸ್ಮರಣಾರ್ಥವಾಗಿ ವಿವಿಧ ಕ್ಷತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ‘ಕನ್ನಡ ವಿಕಾಸ ರತ್ನ’ ಪ್ರಶಸ್ತಿಯನ್ನು ನೀಡುತ್ತಿದೆ. ಈ ಬಾರಿಗೆ ಕರೋನಾ ವಾರಿಯರ್, ಸಮಾಜ ಸೇವಕ ಸತೀಶ್ ಮೇತ್ರಿಗೆ ಒಲಿದಿದೆ.

ಡಿಸೆಂಬರ್ 25ರಂದು ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಯಮುನಾ.ಎಚ್.ಎಲ್ ತಿಳಿಸಿದ್ದಾರೆ.

ಸತೀಶ್ ಮೇತ್ರಿಯ ಸಾಮಾಜಿಕ ಕಾರ್ಯ

ಇವರು ಮೂಲತಃ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕೊಣ್ಣೂರು ಗ್ರಾಮದವರು. ಆದರೆ, ಹುಟ್ಟಿದ್ದು ತಾಯಿಯ ತವರೂರಾದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಲಗರ್ ಅನ್ನೋ ಗ್ರಾಮದಲ್ಲಿ. ಬಾಲ್ಯದಲ್ಲಿ ನಡೆದ ಘಟನೆಯೊಂದು ಇವರನ್ನು ಸಮಾಜ ಸೇವೆಯತ್ತ ತಿರುಗುವಂತೆ ಮಾಡಿತು.

ಹೆಣ್ಣು ಮಕ್ಕಳ ರಕ್ಷಣೆ, ಹೆಣ್ಣುಮಕ್ಕಳ ಮೇಲೆ ನಡೆಯುವ ಅತ್ಯಾಚಾರ ತಡೆಗಟ್ಟುವಿಕೆ, ಹೆಣ್ಣುಮಕ್ಕಳ ಸಬಲೀಕರಣ ಮಾಡುವುದಲ್ಲದೆ ದೇವದಾಸಿ ಮಹಿಳೆ ಹಾಗೂ ಮಕ್ಕಳ ಕುರಿತು ಅಪಾರ ಕಾಳಜಿ ವಹಿಸಿ ಅಂತವರಿಗಾಗಿ ಸೇವೆ ಸಲ್ಲಿಸಬೇಕೆಂದು ದೃಢ ನಿರ್ಧಾರ ಮಾಡಿ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಸಮಾಜ ಕಾರ್ಯ ಅಧ್ಯಯನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಸತೀಶ್ ಮೇತ್ರಿ

ಐದು ವರ್ಷಗಳ ಕಾಲ ದೇವದಾಸಿ ಮಹಿಳೆಯರ ಕಲ್ಯಾಣ, ಸಬಲೀಕರಣ, ಹೆಚ್ಐವಿ ತಡೆಗಟ್ಟುವಿಕೆ, ದೇವದಾಸಿ ಮಹಿಳೆಯರ ಸಂಘ-ಸಂಸ್ಥೆಗಳ ಬಲವರ್ಧನೆ ಮತ್ತು ಅಭಿವೃದ್ಧಿ, ಮಂಗಳಮುಖಿಯರ ಸಬಲೀಕರಣ, ಕೌಟುಂಬಿಕ ಕಲಹಗಳ ಆಪ್ತ ಸಮಾಲೋಚನೆ, ಕಾನೂನಿನ ಅರಿವು-ನೆರವು ಈ ರೀತಿ ರಾಜ್ಯದ ತುಂಬಾ ಸೇವೆ ಸಲ್ಲಿಸಿದ್ದಾರೆ.

ಲಂಚದ ವಿಚಾರಕ್ಕೆ ನವಲಗುಂದ ತಾಲೂಕು ಆಸ್ಪತ್ರೆಯಲ್ಲಿನ ಆಪ್ತ ಸಮಾಲೋಚಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮೈಸೂರಿಗೆ ಬಂದು ಯೂಥ್ ಫಾರ್ ಸೇವಾದೊಂದಿಗೆ ಸೇರಿಕೊಂಡರು. ಕೋವಿಡ್ ಮೊದಲ ಅಲೆಯಲ್ಲಿ ದಿಯಾ ಫೌಂಡೇಶನ್ ನ ಸಿಇಒ ಹರೀಶ್ ಶೆಣೈ ಅವರ ಮಾರ್ಗದರ್ಶನದಲ್ಲಿ ಮೈಸೂರು ನಗರದ ಎಲ್ಲರಿಗೂ ಕೋವಿಡ್ ಕುರಿತು ಅರುವು ಮೂಡಿಸುವುದರ ಜೊತೆಗೆ ಮಾಸ್ಕ್ ಫಾರ್ ಮೈಸೂರ್ ಅಭಿಯಾನ ಪ್ರಾರಂಭಿಸಿದವರು. ಕೋವಿಡ್ ಎರಡನೇ ಅಲೆಯಲ್ಲಿಯೂ ಶ್ರಮಿಸಿದರು. ಇವರ ಸೇವೆಗೆ ಸುತ್ತೂರು ಮಠದ ದೇಶಿಕೇಂದ್ರ ಮಹಾಸ್ವಾಮಿಗಳು ಸನ್ಮಾನಿಸಿದರು. ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯವನ್ನು ಗುರುತಿಸಿ ಕನ್ನಡ ವಿಕಾಸ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!