ದೇವರು ಎಂದರೆ ಅದು ಅತೀ ಚಿಕ್ಕಪದ

578

ಏಷ್ಯಾದ ಬೆಳಕೆಂಬರು

ಭಾರತದ ಋಷಿಯೆಂಬರು

ಗೌತಮನೆಂಬರು ಬುದ್ದನೆಂಬರು

ಸಿದ್ದಾರ್ಥನೆಂಬರು ಹಲವು ನಾಮಗಳಿಂದ ಕರೆದರು

ಸೀಮೆಗಳಿಲ್ಲದ ನಿಸ್ಸೀಮ ಚೆಲುವ ಈತ

ಎಷ್ಟೊಂದು ಹೆಸರುಗಳೊಳಗಿದ್ದೂ

ತಾನಿಲ್ಲದವನಾಗಿ

ಎಷ್ಟೋ ಮೂರ್ತಿಗಳಲ್ಲಿದ್ದು ಇಲ್ಲದವನಾಗಿ

ಶಬ್ದಗಳೊಳಗಿದ್ದು ನಿಶ್ಯಬ್ದನಾಗಿ

ಹೃದಯಗಳಿಂದ ಹೃದಯಗಳಿಗೆ

ಕಾಲತೇಜದ ಜೊತೆಗೆ ಹರಿಯುವ ಈತ

ಬೆಳಕು ಎನ್ನಲೇ ಇಲ್ಲ ಈತ ಬೆಳಕಿಗೂ ಮೀರಿದವ

ಏಕೆಂದರೆ ಕತ್ತಲೆಗೂ ತಾಯಾದವ

ಹಂಚಿತಿನ್ನುವುದ ಕಲಿಸಿದ

ಹಿಂಸಿಸುವುದು ತಪ್ಪೆಂದು ತಿಳಿಸಿದ

ಆಡಿದ ಮಾತಿನಂತೆ ಬದುಕಿದ

ಎನಗೆ ವಿಷಕೊಟ್ಟವನ ಕ್ಷಮಿಸಿ ಉಳಿಸಿದ

ಈತನ ಯಾವ‌ ಹೆಸರಿನಿಂದ ಕರೆಯುವುದು

ಆತ್ಮನ ನುಡಿಸಿದ ಮಮತೆಗೆ ಮಿಡಿಸಿದ 

ದೇವರು ಎಂದರೆ ಈತನಿಗೆ ಅದು ಅತೀ ಚಿಕ್ಕಪದ

ಮಾತು ಹಿಡಿಯಲಾರದ ಈತನ

ಶಬ್ದಗಳು ಬಂದಿಸಲಾರದ ನಿಶ್ಯಬ್ದ ಸಖನ

ಮೂರ್ತಿಗಳೊಳಗೆ ಉಳಿಯದಾ ಮನೋನ್ಮಿಲನನ

ಆಗಸಕೆ ಮುಖಮಾಡಿ ಓ ಆತ್ಮ ಸಖ ಎಂದರೆ

ಎದೆಯೊಳಗೆ ಬಂದು ಆತ್ಮಸುಖವನೀವ

ಈತ ನನ್ನ ಸಖ ನನ್ನ ಆತ್ಮ ಬಂಧು

ಸಾಂಸ್ಕೃತಿಕ ಚಿಂತಕರು ಹಾಗೂ ಕವಿ ಸತ್ಯಮಂಗಲ ಮಹಾದೇವ



Leave a Reply

Your email address will not be published. Required fields are marked *

error: Content is protected !!