Search

ಸಂಗಯ್ಯನ ನೆಲದಲ್ಲಿ ‘ಏಕತಾರಿ’ ನಿನಾದ

508

ಸಿಂದಗಿ: ಖ್ಯಾತ ಲೇಖಕರಾದ ಚನ್ನಪ್ಪ ಕಟ್ಟಿ ಅವರ ಏಕತಾರಿ ಕಥಾ ಸಂಕಲನ ಪಟ್ಟಣದ ಮಾಂಗಲ್ಯ ಭವನದಲ್ಲಿ ಲೋಕಾರ್ಪಣೆಗೊಂಡಿತು. ಇಮಾಮಬಿ ದೊಡ್ಡಮನಿ ಅವರು ಏಕತಾರಿಯೊಂದಿಗೆ ತತ್ವಪದ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.

ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯರಾದ ಡಾ.ಬಾಳಾಸಾಹೇಬ ಲೋಕಾಪುರ ಕೃತಿ ಬಿಡುಗಡೆ ಮಾಡಿದ್ರು. ಬಳಿಕ ಮಾತ್ನಾಡಿದ ಅವರು, ಕಥೆ ಓದುವುದು ಬೇರೆ. ಅಧ್ಯಯನ ಮಾಡುವುದು ಬೇರೆ ಅಂತಾ ಹೇಳಿದ್ರು. ಕಥೆಯಲ್ಲಿ ತಾತ್ವಿಕತೆ ಅಡಕವಾಗಿರುತ್ತೆ. ಅದು ಸಮಾಜದ ಒಳಿತನ್ನ ಹೇಳುತ್ತೆ. ಕಟ್ಟಿವರ ಕಥೆಗಳಲ್ಲಿ ಗ್ರಾಮ್ಯದ ಸೊಗಡು ಇದ್ರೂ ಆಧುನಿಕತೆಯಲ್ಲಿ ಜೀವಿಸುತ್ತವೆ ಎಂದ್ರು. ಕಟ್ಟಿ ಅವರ ಆರಂಭಿಕ ಕಥೆಗಳಾದ ಚರಗ, ಪಾಳು ಕಥೆಗಳಿಗಿಂತ ಏಕತಾರಿಯಲ್ಲಿನ ಕಥೆಗಳು ವೈಚಾರಿಕತೆಯನ್ನ ಹಿಂದಿಟ್ಟು ಕಾರಣಿಕಭಾಷೆಯಲ್ಲಿ ಮಾತ್ನಾಡುತ್ತವೆ. ಲೌಕಿಕ ಬದುಕನ್ನ ಅಲೌಕಿಕದ ಕಡೆಗೆ ದಾಟಿಸುತ್ತೆ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ರು.

ತತ್ವಪದ ಹಾಡಿದ ಇಮಾಮಬಿ ದೊಡ್ಡಮನಿ

ಕೃತಿ ಪರಿಚಯ ಮಾಡಿದ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ವಿಕ್ರಮ ವಿಸಾಜಿ ಅವರು, ಇಲ್ಲಿನ ಕಥೆಗಳಲ್ಲಿ ಬಹುದೊಡ್ಡ ಗ್ರಾಮೀಣ ಬದುಕು. ಸ್ವಲ್ಪ ಆಧುನಿಕತೆಯಿದೆ ಎಂದ್ರು. ಸಂಬಂಧಗಳ ತಿಕ್ಕಾಟ, ತಾಕಲಾಟ, ಹಾದರವಿದೆ. ನವೋದಯ ಕಾಲಘಟ್ಟದಲ್ಲಿ ಗ್ರಾಮೀಣ ಸೊಗಡು ಹೆಚ್ಚಿದೆ. ನವ್ಯದಲ್ಲಿ ಆಧುನಿಕತೆಯಿದೆ. ಕಟ್ಟಿ ಅವರು ಮಾಸ್ತಿ ಅವರ ನವೋದಯ ಶೈಲಿಯ ಗ್ರಾಮೀಣ ಸೊಗಡು ತುಂಬಿದ ಕಥೆಗಳನ್ನ ಕಟ್ಟಿಕೊಟ್ಟಿದ್ದಾರೆ.

ಮಣ್ಣಿನ ವಾಸನೆಯ ಕಥೆಗಳಲ್ಲಿ ನೆಲದ ಸೆಳೆತವಿದೆ. ಗ್ರಾಮ ಮತ್ತು ನಗರದ ಬದುಕಿನ ನಡುವೆ ಚಲಿಸುವಿಕೆಯ ಹ್ಯೊದಾಟವಿದೆ. ಮಾಗಿದ ಪಕ್ವತೆಯ ಮನಸ್ಸಿನಿಂದ ಮೂಡಿದ ಕಥೆಗಳಲ್ಲಿ ನಿರಾಡಂಬರವಿದೆ. ನೈತಿಕತೆಯಿದೆ. ಕುವೆಂಪು ಅವರ ಅವಸರವು ಸಾವಧಾನದ ಬೆನ್ನೇರಿದ ಅನ್ನೋ ಮಾತಿನಂತೆ, ಇಲ್ಲಿರುವ 9 ಕಥೆಗಳು ಸಾವಧಾನವಾಗಿ ಓದಿಸಿಕೊಂಡು ಹೋಗುತ್ತವೆ. ಮೃತ್ಯು ಮತ್ತು ವೈರಾಗ್ಯ ಪ್ರಜ್ಞೆಯನ್ನ ತುಂಬಾ ಢಾಳವಾಗಿ ಕಾಡುವ ಮೂಲಕ ಏಕತಾರಿ ಕನ್ನಡ ಕಥೆಗಳಲ್ಲಿ ವಿಶೇಷವಾಗಿದೆ ಅಂತಾ ಹೇಳುವ ಮೂಲಕ ಕೃತಿಯ ಹಲವು ಒಳನೋಟಗಳನ್ನ ಪರಿಚಯಿಸಿದ್ರು.

ಕೃತಿಯ ಮುಖಪುಟ

ಮುಖ್ಯ ಅತಿಥಿಗಳಾಗಿ ಮಾತ್ನಾಡಿದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಕಲಾ ನಿಕಾಯ ಡೀನ್ ಡಾ.ನಾಮದೇವಗೌಡ ಅವರು, ಹಿಂದಿಯಲ್ಲಿ ಪ್ರೇಮಚಂದ್ರ ಹಾಗೂ ಫಣಿಶ್ವೇರ ರೇಣು ಅವರು ಚಿತ್ರಿಸಿದ ಗ್ರಾಮೀಣ ಬದುಕನ್ನ ಬೇರೆ ಯಾರಿಂದಲೂ ಕಟ್ಟಿಕೊಡಲು ಆಗ್ಲಿಲ್ಲ. ಆ ಮಾದರಿಯ ಕಥೆಗಳು ಏಕತಾರಿಯಲ್ಲಿವೆ ಅಂತಾ ಹೇಳಿದ್ರು.

ಲೇಖಕರಾದ ಚನ್ನಪ್ಪ ಕಟ್ಟಿ ಮಾತ್ನಾಡಿ, ಏಕತಾರಿ ರೂಪಗೊಂಡ ಬಗೆ, ತಮ್ಮ ಹುಟ್ಟೂರು ತಮ್ಮ ಕೃತಿಗಳಲ್ಲಿ ಯಾಕೆ ಕಾಣಿಸುವುದಿಲ್ಲ ಅನ್ನೋದನ್ನ ವಿವರಿಸಿದ್ರು. ಇದೇ ವೇಳೆ ತಮ್ಮ ತಾಯಿಯನ್ನ ನೆನಪಿಸಿಕೊಂಡ ಅವರು, ಭಾವುಕರಾಗಿ ಕಣ್ಣೀರು ಹಾಕಿದ್ರು. ಹೀಗಾಗಿ ಕೆಲ ಕಾಲ ಸಭಾಂಗಣದಲ್ಲಿ ಮೌನ ಆವರಿಸಿಕೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ್ನಾಡಿದ ಹಿರಿಯ ಜಾನಪದ ವಿದ್ವಾಂಸರಾದ ಡಾ.ಎಂ.ಎಂ ಪಡಶೆಟ್ಟಿ ಅವರು, ಸಾವಿನ ಮನೆಯ ಪರಿಸರದಲ್ಲಿ ಶಿವನ ಅನುಸಂಧಾನ ಮಾಡುವಂತೆ ಮಾಡುವುದು ಏಕತಾರಿಯ ಶಕ್ತಿ ಅಂತಾ ಹೇಳಿದ್ರು. ಶಿಸ್ತು, ಪರಿಶ್ರಮ ಮತ್ತು ಸಂಯಮ ಕಟ್ಟಿಯವರಲ್ಲಿ ಇರುವುದ್ರಿಂದ ಇಂಥಾ ಕೃತಿ ಒಡಮೂಡುವಲ್ಲಿ ಸಹಕಾರಿಯಾಯ್ತು ಎಂದ್ರು.

ಕಥೆಗೆ ಓದಿಸಿಕೊಂಡು ಹೋಗುವ ಶಕ್ತಿ ಇರಬೇಕೆಂದು ದಿವ್ಯ ಸಾನಿಧ್ಯ ವಹಿಸಿದ್ದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದ್ರು. ಇದೇ ವೇಳೆ ಕೃತಿ ಪ್ರಕಟಿಸಿದ ಪಲ್ಲವ ಪ್ರಕಾಶನದ ಮಾಲೀಕರಾದ ಪಲ್ಲವ ವೆಂಕಟೇಶ ಉಪಸ್ಥಿತರಿದ್ರು. ಮನು ಪತ್ತಾರ ನಿರೂಪಿಸಿದ್ರು. ದೇವು ಮಾಕೊಂಡ ಸ್ವಾಗತಿಸಿದ್ರು. ಚಂದ್ರಶೇಖರ ಚೌರ ವಂದಿಸಿದ್ರು.




Leave a Reply

Your email address will not be published. Required fields are marked *

error: Content is protected !!