ಮಾಧ್ಯಮದ ಬುಡಕ್ಕೂ ಬಿತ್ತು ಆರ್ಥಿಕ ಪೆಟ್ಟು

1580

ಇವತ್ತು ದೇಶದಲ್ಲಿ ಬಹುದೊಡ್ಡ ಚರ್ಚೆಯಾಗ್ತಿರುವುದು ಆರ್ಥಿಕ ಮಂದಗತಿ (Economic Slowdown) ಬಗ್ಗೆ. ಇದ್ರಿಂದಾಗಿ ಸಣ್ಣಪುಟ್ಟ ಉದ್ಯಮದಿಂದ ಹಿಡಿದು ಬೃಹತ್ ಕಂಪನಿಗಳವರೆಗೂ ಇದರ ಬಿಸಿ ತಟ್ಟಿದೆ. ಈ ಬಗ್ಗೆ ಹಲವು ದಿನಗಳಿಂದ ಪ್ರತಿಯೊಂದು ಮಾಧ್ಯಮಗಳಲ್ಲಿ ಸುದ್ದಿ ಬರುತ್ತಲೇ ಇದೆ. ಇದಕ್ಕೆ ಕೇಂದ್ರ ಸರ್ಕಾರದ ಆಡಳಿತ ವೈಖರಿ ಕಾರಣವೆಂದು ಆರ್ಥಿಕ ತಜ್ಞರಾದಿಯಾಗಿ ಪ್ರತಿಯೊಬ್ಬರು ಹೇಳ್ತಿದ್ದಾರೆ. ಆದ್ರೆ, ಬಿಜೆಪಿ ಬೆಂಬಲಿತ ಟೀಂ ಮಾತ್ರ ಸೈಲೆಂಟ್ ಆಗಿದೆ. ಈ ಬೆಂಬಲಿತ ಟೀಂನಲ್ಲಿ ಕೆಲ ಮಾಧ್ಯಮಗಳು ಸೇರಿಕೊಂಡಿವೆ.

ಆರ್ಥಿಕ ಮಂದಗತಿ ಅಥವ ಕುಸಿತದ ಬಗ್ಗೆ ಚಕಾರೆತ್ತದೆ ಜೀ ಹುಜೂರ್ ಎನ್ನುತ್ತಾ ವಾಸ್ತವ ಸತ್ಯವನ್ನ ಮರೆಮಾಚುವ ಕೆಲಸ ಮಾಡ್ತಿರುವ ಕೆಲ ಮಾಧ್ಯಮಗಳ ತಳಕ್ಕೆ ಬೆಂಕಿ ಬಿದ್ದಿದೆ. ಹೀಗಾಗಿ ದೇಶದಲ್ಲಿ ಸಾವಿರಾರು ಪತ್ರಕರ್ತರು ಕೆಲಸ ಕಳೆದುಕೊಳ್ತಿದ್ದಾರೆ. ಮಾಧ್ಯಮ ಸಂಸ್ಥೆಗಳು ಹಂತ ಹಂತವಾಗಿ ತನ್ನ ಸಿಬ್ಬಂದಿಯನ್ನ ಮನೆಗೆ ಕಳುಹಿಸುತ್ತಿದೆ. ಹೀಗಿದ್ರೂ ಬಾಯಿ ಬಿಡದೆ ಸಂಸ್ಥೆಗಳನ್ನ ಬಂದ್ ಮಾಡಲಾಗ್ತಿದೆ. ಸಂಸ್ಥೆಯ ಮಾಲೀಕನಿಗೆ ಇದು ಇಲ್ಲಂದ್ರೆ ಮತ್ತೊಂದು ಬ್ಯುಸಿನೆಸ್ ಇದೆ. ತಿಂಗಳ ಸಂಬಳದ ಮೇಲೆ ಬದುಕ್ತಿರುವ ಪತ್ರಕರ್ತರ ಗತಿಯೇನು ಸ್ವಾಮಿ.

ಕನ್ನಡ ಮೀಡಿಯಾ ಪ್ರಪಂಚದಲ್ಲಿ ಕಳೆದ ಕೆಲ ದಿನಗಳಿಂದ ಟರ್ಮಿನೇಷನ್ ಪದ ಭರ್ಜರಿಯಾಗಿ ಕೇಳಿ ಬರುತ್ತಿದೆ. ಮೊದ್ಲೇ ವೃತ್ತಿ ಭದ್ರತೆಯಿಲ್ಲದ ಪತ್ರಕರ್ತರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ರಾಜ್ಯದ ಸುದ್ದಿವಾಹಿನಿಯೊಂದು ಯಾವುದೇ ಕಾರಣ ನೀಡದೆ 70 ಜನ ಸಿಬ್ಬಂದಿಯ ಮೊದಲ ಹಂತದ ರಾಜೀನಾಮೆ ಪಡೆದುಕೊಂಡಿದೆ. ಇದು ಕೊನೆಯ ಹಂತಕ್ಕೆ ಬರುವಷ್ಟರಲ್ಲಿ 150ರ ಗಡಿ ದಾಟಿ ಹೋಗುತ್ತೆ. ಇಷ್ಟು ಜನ ಪತ್ರಕರ್ತರಿಗೆ ಯಾವ ಮೀಡಿಯಾ ಸೇರಿಸಿಕೊಳ್ಳುತ್ತೆ? ಈ ಸ್ಥಿತಿ ದೇಶದ ಉಳಿದ ರಾಜ್ಯಗಳಲ್ಲಿಯೂ ಎದುರಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಪಕ್ಕದ ರಾಜ್ಯದಿಂದ ಬಂದ ಸುದ್ದಿವಾಹಿನಿಯಲ್ಲಿ ಸರಿಯಾಗಿ ಸಂಬಳವಾಗ್ತಿಲ್ವಂತೆ. ಮೊದ್ಲಿದ್ದ ಹೆಸರು ಬದಲಾಗಿ ಹೊಸ ಹೆಸರಿನಿಂದ ನಡೆಯುತ್ತಿರುವ ಟಿವಿಯಲ್ಲಿಯೂ ಇದೇ ಕಥೆ ಅನ್ನೋ ಮಾತಿದೆ.

ಕಾಂಗ್ರೆಸ್ ಸರ್ಕಾರದ ಸಚಿವರೊಬ್ಬರು ಶುರು ಮಾಡಿದ್ದ ವಾಹಿನಿಯೂ ಕ್ಲೋಸ್ ಆಗಿದ್ದು ಹಳೆ ಸುದ್ದಿ. ಪತ್ರಿಕೆಯೊಂದನ್ನ ಬಿಟ್ಟು ಚಾನೆಲ್ ಲಾಂಚ್ ಮಾಡಿದವರ ಕಥೆ ದುರಂತ ಅಂತ್ಯ. ಆ ಪತ್ರಿಕೆಯಿಂದ ಅದೆಷ್ಟೋ ಸಿಬ್ಬಂದಿ ಹೊರ ಬಂದ್ರು. ಇದೀಗ ಗುಟುಕು ಜೀವ ಹಿಡಿದುಕೊಂಡು ಬದುಕುತ್ತಿದೆ. ಟಿವಿ ದುನಿಯಾದಿಂದ ದೂರವಿದ್ದು, ದಿಢೀರ್ ಪ್ರತ್ಯಕ್ಷವಾಗಿ ನೂರಾರು ಪತ್ರಕರ್ತರನ್ನ ನಡುನೀರಿನಲ್ಲಿ ಕೈಬಿಟ್ಟು, ಹಳೆಸುದ್ದಿ ಸಂಸ್ಥೆಯನ್ನ ಸೇರಿದ ವ್ಯಕ್ತಿಯಿಂದ ಯಾವ ಬದಲಾವಣೆ ಆಗ್ಲಿಲ್ಲ. ಆ ವಾಹಿನಿಯೂ ಸಹ ಸಮಯದ ಹೊಡೆತಕ್ಕೆ ಸಿಲುಕಿತು. ಅಲ್ಲಿಂದ ನೂರಾರು ಪತ್ರಕರ್ತರ ಬದುಕು ಸಹ ಅತಂತ್ರ. ಇನ್ನೂ ಕೆಲವು ವಾಹಿನಿಗಳು ಎರಡ್ಮೂರು ವರ್ಷಗಳಿಂದ ಲಾಂಚ್ ಆಗುವ ಹಂತದಲ್ಲಿಯೇ ಇವೆ. ಅಲ್ಲಿನ ಸಿಬ್ಬಂದಿ ಪರಿಸ್ಥಿತಿ ಅಡ್ಡಕತ್ತರಿಯಲ್ಲಿ ಸಿಕ್ಕ ಅಡಕೆಯಂತಾಗಿದೆ.

16 ರಾಜ್ಯಗಳಲ್ಲಿದೆ ಎಂದು ಹೇಳಿದ ಐಟಿವಿ ನೆಟ್ ವರ್ಕ್ ನ ನ್ಯೂಸ್ ಎಕ್ಸ್ ಕನ್ನಡ ಚಾನೆಲ್ ರಾಜ್ಯ ವಿಧಾನಸಭಾ ಚುನಾವಣೆ ಟೈಂನಲ್ಲಿ ಶುರುವಾಗಿ ಎಂಪಿ ಎಲೆಕ್ಷನ್ ಮುಗಿಯುತ್ತಿದ್ದಂತೆ ಬಂದ್ ಆಯ್ತು. ಇದು ಬಂದ್ ಆಗುವ ಸುಮಾರು ಆರೇಳು ತಿಂಗಳು ಮೊದ್ಲೇ ಅಲ್ಲಿಂದ ಸ್ವಯಿಚ್ಛೆಯಿಂದ ಆಚೆ ಬಂದವರಲ್ಲಿ ನಾನು ಸಹ ಒಬ್ಬ. ಅನಿಲ ಅಂಬಾನಿ ಒಡೆತನದ ಬಿಟಿವಿಐ ವಾಣಿಜ್ಯ ವಾಹಿನಿ ಆಗಸ್ಟ್ 31ಕ್ಕೆ ಸ್ತಬ್ಧವಾಗಿದೆ. ಕೇಂದ್ರದ ಮಾಜಿ ಸಚಿವ ಕಪಿಲ ಸಿಬಲ್ ಅವರ ತಿರಂಗಾ ಚಾನೆಲ್ ಸಹ ಅರ್ಧಬಾಗಿಲು ಮುಚ್ಚಿದೆ. ತಮಿಳಿನ ಕಾವೇರಿ ಸುದ್ದಿವಾಹಿನಿ ದಿಢೀರ್ ಸ್ಟಾಪ್ ಆಗಿರೋದ್ರಿಂದ 140ಕ್ಕೂ ಹೆಚ್ಚು ಉದ್ಯೋಗಿಗಳು ಬೀದಿಗೆ ಬಂದ್ರು. ಹೀಗೆ ಮಾಧ್ಯಮ ಸಹ ಆರ್ಥಿಕ ಹೊಡೆತಕ್ಕೆ ನಲುಗ್ತಿದೆ. ಇದ್ರಿಂದಾಗಿ ಪವರ್ ಫುಲ್ ಜೀವನವಲ್ಲ ಸರಳ ಬದುಕು ಸಹ ಕಷ್ಟವಾಗಿದೆ. ಸರಿಯಾದ ಟೈಂಗೆ ಸಂಬಳವಾಗ್ತಿಲ್ಲ. ಆದ್ರೂ ಅದನ್ನ ಬಹಿರಂಗವಾಗಿ ಹೇಳುವಂತಿಲ್ಲ. ಕೆಲ ದಿನಗಳ ಹಿಂದೆ ನನ್ನ ಸ್ನೇಹಿತರೊಬ್ಬರು ಫೋನ್ ಮಾಡಿದ್ರು. 35 ಸಾವಿರ ಮೇಲ್ಪಟ್ಟು ಸಂಬಳವಿರುವ ಸಿಬ್ಬಂದಿಯನ್ನ ಒಬ್ಬೊಬ್ಬರನ್ನಾಗಿಯೇ ತೆಗೆದು ಹಾಕ್ತಿದ್ದಾರೆ ಅಂತಾ ಕಳವಳ ವ್ಯಕ್ತಪಡಿಸಿದ. ಬೇರೆ ಕಂಪನಿಗಳು ಕ್ಲೋಸ್ ಆಗ್ತಿರುವ ಬಗ್ಗೆ ನ್ಯೂಸ್ ಮಾಡುವ ಮೀಡಿಯಾದವರೆ ಮನೆಗೆ ಹೋಗ್ತಿದ್ರೂ ಧ್ವನಿ ಎತ್ತದೆ ಇರೋದು ನಿಜಕ್ಕೂ ದುರಂತ.

ಇದು ಬರೀ ಎಲೆಕ್ಟ್ರಾನಿಕ್ ಮೀಡಿಯಾಗಳಿಗೆ ಮಾತ್ರ ಸಿಮೀತವಾಗಿಲ್ಲ. ಮುದ್ರಣ ಮಾಧ್ಯಮಗಳಲ್ಲಿಯೂ ಹೇಳಿಕೊಳ್ಳುವಂತಹ ಪರಿಸ್ಥಿತಿಯಿಲ್ಲ. ಕನ್ನಡದ ಮೂರ್ನಾಲ್ಕು ಪತ್ರಿಕೆಗಳನ್ನ ಬಿಟ್ಟರೆ ಬಹುತೇಕ ಪತ್ರಿಕೆಗಳಲ್ಲಿ ನೋ ವೆಕೆನ್ಸಿ. ಕಡಿಮೆ ಸಂಬಳಕ್ಕೆ ದುಡಿಯುತ್ತಿರುವುದು. ಇನ್ನು ರಾಷ್ಟ್ರೀಯ ಪತ್ರಿಕೆಗಳಲ್ಲಿ ಸಾವಿರಾರು ಸಿಬ್ಬಂದಿ ಪಿಂಕ್ ಸ್ಲಿಪ್ ಹಿಡಿದು ಸೈಲೆಂಟ್ ಆಗಿ ಸಂಸ್ಥೆಯಿಂದ ಹೆಜ್ಜೆ ಹಾಕಿದ್ದಾರೆ. ಕೆಲ ಆರ್ಥಿಕ ತಜ್ಞರ ಪ್ರಕಾರ ಮೀಡಿಯಾದಲ್ಲಿ ಹೀಗೆ ಆಗಲು ಕಾರಣ, ಹೊಸದಾಗಿ ಶುರುವಾಗುವ ಟಿವಿ ಮತ್ತು ಪತ್ರಿಕೆಗಳು ಹೆಚ್ಚಿನ ಸಂಬಳಕ್ಕೆ ಸಿಬ್ಬಂದಿಯನ್ನ ನೇಮಕ ಮಾಡಿಕೊಳ್ಳುವುದು. ಉದ್ಯಮವಾಗಿ ಬದಲಾಗಿರುವ ಮಾಧ್ಯಮದಲ್ಲಿ ಲಾಭ ಇಲ್ಲದೆ ಹೋದಾಗ, ಸಹಜವಾಗಿಯೇ ಸಂಸ್ಥೆ ನಷ್ಟಕ್ಕೆ ಸಿಲುಕುತ್ತೆ. ಅದರ ಎಫೆಕ್ಟ್ ಸಿಬ್ಬಂದಿ ಮೇಲಾಗುತ್ತೆ ಅಂತಾರೆ.

ಎರಡನೇ ಕಾರಣ, ಡಿಜಿಟಲ್ ಮೀಡಿಯಾ. ಒಂದು ಕಾಲದಲ್ಲಿ ಪತ್ರಿಕೆಗಾಗಿ ಮೂರ್ನಾಲ್ಕು ದಿನ ಕಾಯುತ್ತಿದ್ರು. ಬಳಿಕ ರೇಡಿಯೋ ಜಮಾನಾ ಶುರುವಾಯ್ತು. ನಿಧಾನವಾಗಿ ಟಿವಿ ಬಂತು. ಅದ್ರಲ್ಲಿ ಅಭಿವೃದ್ಧಿಯಾಗಿ 24X7 ನ್ಯೂಸ್ ನೀಡಲು ಆರಂಭವಾಯ್ತು. ಅದರ ಮುಂದುವರೆದ ಭಾಗವಾಗಿ ಬೆರಳ ತುದಿಯಲ್ಲಿ ಸುದ್ದಿ ಸಮಾಚಾರ ಜನರಿಗೆ ತಲುಪುತ್ತಿದೆ. ಹೀಗಾಗಿ ಓದುಗರು, ನೋಡುಗರು ವೆಬ್ ಮೀಡಿಯಾದತ್ತ ಹೆಚ್ಚು ಆಸಕ್ತಿ ಬೆಳಸ್ತಿದ್ದಾರೆ ಅಂತಾ ಹೇಳಲಾಗ್ತಿದೆ. ಟೆಕ್ನಾಲಜಿ ಬೆಳದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆಯಾಗುತ್ತೆ. ಆದ್ರೆ, ವಾಸ್ತವತೆಯನ್ನ ಬಿಟ್ಟು ಭ್ರಮೆಯ ಬದುಕು ಬಹಳ ದಿನ ಉಳಿಯುವುದಿಲ್ಲ. ಅದರ ಪರಿಣಾಮ ಮಾಧ್ಯಮಕ್ಕೂ ಆಗ್ತಿದೆ. ಈಗ್ಲೇ ಎಚ್ಚೆತ್ತುಕೊಳ್ಳುವುದು ಎಲ್ಲರಿಗೂ ಒಳ್ಳೆಯದು.

ನಿಮ್ಮ ಅಭಿಪ್ರಾಯಗಳಿಗೆ: prajaastra18@gmail.com




Leave a Reply

Your email address will not be published. Required fields are marked *

error: Content is protected !!