ಸೋತ ಸೋಮಣ್ಣಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗುತ್ತಾ?

159

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಒಂದು ತಿಂಗಳು ಆಗುತ್ತಾ ಬರುತ್ತಿದೆ. ಆದರೂ ಬಿಜೆಪಿ ಇದುವರೆಗೂ ವಿಪಕ್ಷ ನಾಯಕ ಹಾಗೂ ನೂತನ ರಾಜ್ಯಾಧ್ಯಕ್ಷರ ನೇಮಕ ಮಾಡಲು ಆಗುತ್ತಿಲ್ಲ. ಚುನಾವಣೆಯಲ್ಲಿ ಸೋತ ಹಿನ್ನಲೆಯಲ್ಲಿ ಬಿಜೆಪಿ ಹೈಕಮಾಂಡ್ ಕರ್ನಾಟಕದ ಬಗ್ಗೆ ಆಸಕ್ತಿನೇ ಕಳೆದುಕೊಂಡಂತೆ ಕಾಣುತ್ತಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಘಟಾನುಘಟಿ ನಾಯಕರೆ ಸೋತಿದ್ದು, ಈಗಿರುವ ಶಾಸಕರಲ್ಲಿ ಯಾರಿಗೆ ವಿಪಕ್ಷ ನಾಯಕ ಸ್ಥಾನ ನೀಡಬೇಕು, ಯಾರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಅನ್ನೋ ಪ್ರಶ್ನೆ ಬಗೆಹರಿಯುತ್ತಿಲ್ಲ. ಯಾಕಂದರೆ, ಈ ಎರಡು ಸ್ಥಾನಗಳು ಮುಂಬರುವ 2024ರ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುತ್ತೆ.

ಸದನದೊಳಗೆ ಸರ್ಕಾರವನ್ನು ಕಟ್ಟಿಹಾಕುವ ಸಮರ್ಥ ವಿಪಕ್ಷ ನಾಯಕ ಜೊತೆಗೆ ಸದನದ ಹೊರಗೆ ಸಮರ್ಥವಾಗಿ ಪಕ್ಷವನ್ನು ಕಟ್ಟಿ ಬೆಳೆಸುವುದರೊಂದಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ತಂದುಕೊಡುವ ತಾಕತ್ತು ಇರುವ ನಾಯಕ ಬೇಕಾಗಿದ್ದಾರೆ. ಇದ್ಯಾವುದೂ ಈಗಿರುವ ನಾಯಕರಲ್ಲಿ ಇಲ್ವಾ ಅನ್ನೋದೆ ಸಧ್ಯದ ಪ್ರಶ್ನೆ. ಹೀಗಿರುವ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿಯೂ ಸೋತಿರುವ ವಿ.ಸೋಮಣ್ಣ, ತಮಗೆ ರಾಜ್ಯಾಧ್ಯಕ್ಷ ನೀಡಬೇಕು ಎಂದು ಬಹಿರಂಗವಾಗಿ ಹೇಳಿದ್ದಾರೆ.

ಹೈಕಮಾಂಡ್ ಬಳಿ ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಎಂದು ಕೇಳಿದ್ದೇನೆ. ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ನನಗೂ ಒಂದು ಅವಕಾಶ ಕೊಡಿ ಎಂದಿದ್ದೇನೆ. ನಾನು ಯಾರಿಗೂ ಬಕೆಟ್ ಹಿಡಿಯುವುದಿಲ್ಲ. ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುತ್ತೇನೆ ಎಂದಿದ್ದಾರೆ. ಅತ್ತ ಆರ್.ಅಶೋಕ್, ಸಿ.ಎನ್ ಅಶ್ವತ್ಥನಾರಾಯಣ್ ಅವರ ಹೆಸರು ಚಾಲ್ತಿಯಲ್ಲಿವೆ. ನಳೀನ್ ಕುಮಾರ್ ಕಟೀಲ್ ಅವರ ಕೈಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟು ಸೋತು ಸುಣ್ಣವಾಗಿರುವ ಹೈಕಮಾಂಡ್ ಗೆ ಯಾರಿಗೆ ಆ ಸ್ಥಾನ ನೀಡಬೇಕು ಅನ್ನೋದೇ ತಿಳಿಯದಾಗಿದೆ. ತಮ್ಮನ್ನೇ ತಾವು ಗೆಲ್ಲಿಸಿಕೊಳ್ಳಲು ಆಗದ ವಿ.ಸೋಮಣ್ಣರಿಗೆ ಈ ಪಟ್ಟ ಸಿಗುತ್ತಾ ಅನ್ನೋ ಕುತೂಹಲವಿದೆ.




Leave a Reply

Your email address will not be published. Required fields are marked *

error: Content is protected !!