ಬಿಗ್ ಸ್ಕ್ರೀನ್ ಮೇಲೆ ಭಾರತದಲ್ಲಿಯೇ ಯಾರು ಟಚ್ ಮಾಡದ ಕಥೆ..!

529

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತನ್ನ ಚಿತ್ರದ ಟೈಟಲ್ ಮೂಲಕವೇ ಕಳೆದ ಎರಡು ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ಅಂಗಳದಲ್ಲಿ ಭಾರೀ ಕುತೂಹಲ, ಚರ್ಚೆಗೆ ಕಾರಣವಾಗಿದ್ದ ಸಿನಿಮಾ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು. ಒಂದಿಷ್ಟು ರಿಯಲ್ ಒಂದಿಷ್ಟು ರೀಲ್ ಕಥಾವಸ್ತುವಿನೊಂದಿಗೆ ಹೊಸಬರ ತಂಡವೊಂದು ಎಂಟ್ರಿ ಪಡೆಯಿತು.

ದಶಕಗಳ ಕಾಲ ಗಾಂಧಿನಗರದಲ್ಲಿದ್ದು ಹಿಟ್ ಸಿನಿಮಾಗಳನ್ನ ನೀಡಿದವರೆ ಟೈಟಲ್ ಮೂಲಕ ಪ್ರೇಕ್ಷಕರನ್ನ ಸೆಳೆಯಲು ಸಾಕಷ್ಟು ವರ್ಕೌಟ್ ಮಾಡ್ತಾರೆ. ಸಿನಿಮಾ ಹೆಸರೇ ಜನರಿಗೆ ಇಷ್ಟವಾಗ್ಲಿಲ್ಲ ಅಂದ್ರೆ ಥಿಯೇಟರ್ ಗೆ ಬರೋದು ಕಷ್ಟ ಎಂದು ಟೆನ್ಷನ್ ಮಾಡಿಕೊಳ್ತಾರೆ. ಆದ್ರೆ, ಮೊದಲ ಚಿತ್ರಕ್ಕೆ ವಿಶೇಷ ಹಾಗೂ ವಿಚಿತ್ರವಾದ ಹೆಸರನ್ನಿಟ್ಟುಕೊಂಡು ಬಂದ ಲೋಕೇಂದ್ರ ಸೂರ್ಯ ಅವರ ಟೀಂ ಸಾಕಷ್ಟು ಭರವಸೆ ಮೂಡಿಸಿತು. ಅಲ್ದೇ, ಮೊದಲ ಚಿತ್ರವೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಹೊರ ರಾಜ್ಯಗಳಲ್ಲಿ ಸ್ಕ್ರೀನಿಂಗ್ ಆಯ್ತು.

ಒಳ್ಳೆ ಸಿಂಗರ್ ಆಗಿರುವ ಲೋಕೇಂದ್ರ ಸೂರ್ಯ ಅವರು ಸಾಕಷ್ಟು ಕನಸುಗಳನ್ನ ಪೋಣಿಸಿಕೊಂಡು ಬಂದು, ಫಸ್ಟ್ ಸಿನಿಮಾದಲ್ಲಿಯೇ ಮ್ಯಾಜಿಕ್ ಮಾಡಿದ್ರು. ಬಳಿಕ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದ್ರು. ಈಗ ಮತ್ತೊಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಹೀರೋ ಆಗಿಯೂ ಎಂಟ್ರಿ ಕೊಡ್ತಿದ್ದಾರೆ. ಮೊದಲ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಇವರು ಇದೀಗ ‘ಹಾಫ್’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟರಾಗಿ ಕಾಣಿಸಿಕೊಳ್ತಿದ್ದಾರೆ.

ಭಾರತದಲ್ಲಿಯೇ ಇದುವರೆಗೂ ಯಾರೂ ಟಚ್ ಮಾಡದ ಕಥೆಯನ್ನಿಟ್ಟುಕೊಂಡು ‘ಹಾಫ್’ ಚಿತ್ರ ರೆಡಿಯಾಗ್ತಿದೆ ಎಂದು ನಿರ್ದೇಶಕ, ನಟ ಲೋಕೇಂದ್ರ ಸೂರ್ಯ ಅವರು ಹೇಳ್ತಿದ್ದಾರೆ. ಇದರಲ್ಲಿ ಇಬ್ಬರು ನಟಿಯರಿದ್ದಾರೆ. ಇಬ್ಬರು ಹೀರೋನನ್ನ ಪ್ರೀತಿಸ್ತಾರೆ. ಹೀರೋ ಸಹ ಇಬ್ಬರನ್ನ ಪ್ರೀತಿಸ್ತಾರೆ. ಆದ್ರೆ, ಹೀರೋಯಿನ್ ಮಾತ್ರ ಒಬ್ಬರೇ ಎಂದು ಹೇಳುವ ಮೂಲಕ ಲೋಕೇಂದ್ರ ಸೂರ್ಯ ಅವರು ಒಂದಿಷ್ಟು ಕನ್ ಫ್ಯೂಸ್ ಮಾಡುವುದರೊಂದಿಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದಾರೆ. ಹೀಗಾಗಿ ಸಿನಿಮಾದ ಕಥೆ ಏನಿರಬಹುದು ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆ ಮೂಡಿದೆ.

ನಟಿಯರಾದ ಆಸಿಯಾ ಹಾಗೂ ಅಥಿರಾಗೆ ಇದು ಮೊದಲ ಚಿತ್ರ. ಆಡಿಷನ್ ಮೂಲಕ ಹೊಸ ಪ್ರತಿಭೆಗಳನ್ನ ಪರಿಚಯ ಮಾಡಿಕೊಡಲಾಗ್ತಿದೆ. ಇನ್ನು ಸಾಹಸ ದೃಶ್ಯಗಳಿಗೆ ಡಾ. ಥ್ರಿಲ್ಲರ್ ಮಂಜು ಅವರು ಫೈಟ್ ಕಂಪೋಸ್ ಮಾಡಿದ್ದಾರೆ. ಬರೋಬ್ಬರಿ 150 ಮಂದಿ ಸಾಹಸ ಕಲಾವಿದರ ದಂಡು ಕಾಣಿಸಿಕೊಂಡಿರುವುದು ಮತ್ತೊಂದು ವಿಶೇಷ. ಚಿತ್ರಕ್ಕೆ ಬಂಡವಾಳ ಹೂಡಿರುವ ರಾಜು ಕಲ್ಕುಣಿ ಹಾಗೂ ಡಾ.ಪವಿತ್ರ ಆರ್ ಪ್ರಭಾಕರ ರೆಡ್ಡಿ ಅವರು ಸ್ಕ್ರೀನ್ ಮೇಲೆಯೂ ಕಾಣಿಸಿಕೊಳ್ತಿದ್ದು, ಅವರ ರೋಲ್ ಏನು ಅನ್ನೋ ಕೌತುಕವಿದೆ.

ಮೊದಲ ಹಂತದ ಶೂಟಿಂಗ್ ಮುಗಿಸಿರುವ ಹಾಫ್ ಟೀಂ, ಸಾಂಗ್ ಶೂಟಿಂಗ್ ಗೆ ರೆಡಿಯಾಗ್ತಿದೆ. ಚಿತ್ರಕ್ಕೆ ರಾಕಿ ಸೋನು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಮಲ್ಲಿಕಾರ್ಜುನ ಬಿ.ಆರ್ ಛಾಯಾಗ್ರಹಣವಿದೆ. ಋತು ಚೈತ್ರಾ ಕಾಸ್ಟ್ಯೂಮ್ ಡಿಸೈನರ್ ಆಗಿ ವರ್ಕ್ ಮಾಡುವ ಮೂಲಕ ಒಳ್ಳೊಳ್ಳೆ ಕಾಸ್ಟ್ಯೂಮ್ ಗಳನ್ನ ರೆಡಿ ಮಾಡಿದ್ದಾರೆ. ಉಳಿದಂತೆ ರಕ್ಷಾ, ರೋಹಿಣಿ, ಸಿವಿಜಿ ಚಂದ್ರು, ಮೋಹನ ನೆನಪಿರಲಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ಸಾಕಷ್ಟು ವಿಶೇಷತೆಗಳೊಂದಿಗೆ ಭರ್ಜರಿ ಶೂಟಿಂಗ್ ನಡೆಸಿರುವ ಹಾಫ್ ಸಿನಿಮಾ ನೋಡಬೇಕು ಅಂದ್ರೆ ಪ್ರೇಕ್ಷಕರು ಇನ್ನು ಎರಡ್ಮೂರು ತಿಂಗಳು ಕಾಯಲೇಬೇಕು.




Leave a Reply

Your email address will not be published. Required fields are marked *

error: Content is protected !!