ಭೂಸನೂರ ವಿರುದ್ಧ ಮನಗೂಳಿ ಆರೋಪಗಳ ಸುರಿಮಳೆ

386

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಗುತ್ತಿ ಬಸವಣ್ಣ ಏತನೀರಾವರಿ ಯೋಜನೆಯ ನೀರು ಬರದೆ ಇರೋದು, 88 ಕಾಮಗಾರಿಗಳ 3 ಕೋಟಿ ಬೋಗಸ್ ಬಿಲ್, ತೋಟಗಾರಿಕೆ ಕಾಲೇಜು, ಅಂಬೇಡ್ಕರ್ ಭವನದ ಅನುದಾನದ ವಿಚಾರ, ಡಾ.ಬಾಬು ಜಗಜೀನರಾಂ ಭವನ ನಿರ್ಮಾಣ ವಿಚಾರ, ತಳವಾರ ಸಮಾಜಕ್ಕೆ ಎಸ್ಟಿ ಮೀಸಲಾತಿ ಕೊಡಿಸುವಲ್ಲಿ ಅನ್ಯಾಯ ಸೇರಿದಂತೆ ಹಲವು ವಿಚಾರಗಳ ಕುರಿತು ಶಾಸಕ ರಮೇಶ ಭೂಸನೂರ ವಿರುದ್ಧ, ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಆರೋಪಗಳ ಸುರಿಮಳೆ ಸುರಿಸಿದರು.

ಪಟ್ಟಣದ ಪಕ್ಷದ ಕಚೇರಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಗುತ್ತಿ ಬಸವಣ್ಣ ಏತನೀರಾವರಿ ಯೋಜನೆಯ ನೀರು ಹರಿಯದ ಪರಿಣಾಮ ತಾಲೂಕಿನ ಹತ್ತಾರು ಗ್ರಾಮಗಳ ರೈತರ 300 ಕೋಟಿಗೂ ಹೆಚ್ಚು ಮೌಲ್ಯದ ಬೆಳೆ ಹಾನಿಯಾಗಿದೆ. ಜಿಲ್ಲೆಗೆ ಬಂದಿದ್ದ ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರು ಧರಣಿ ನಡೆಸುತ್ತಿರುವ ರೈತರ ಮನವಿ ಆಲಿಸಿಲ್ಲ. ರೈತರಿಗೆ ಲಿಂಬೆ, ಕಬ್ಬು ಬೆಳೆಯಲು ನಿಮಗೆ ಯಾರು ಹೇಳಿದ್ದಾರೆ ಎಂದು ಶಾಸಕರು ಉಡಾಫೆ ಮಾತುಗಳನ್ನಾಡಿದ್ದಾರೆ ಎಂದು ಕಿಡಿ ಕಾರಿದರು.

ಪ್ರವಾಹದಿಂದ ಹಾಳಾದ ರಸ್ತೆಗಳು, ಶಾಲೆ ಕಟ್ಟಡಗಳು ಸೇರಿದಂತೆ 88 ದುರಸ್ತಿ ಕಾಮಗಾರಿಗಳನ್ನು ಮಾಡದೆ 3 ಕೋಟಿ ಬೋಗಸ್ ಬಿಲ್ ಎತ್ತಿದ್ದಾರೆ ಎಂದು ಆರೋಪಿಸಿದರು. ಆಲಮೇಲಕ್ಕೆ ತೋಟಗಾರಿಕೆ ಕಾಲೇಜು ಸ್ಥಾಪನಗೆ ಅನುಮೋದನೆ ಸಿಕ್ಕು, ಅಂದಿನ ಸಿಎಂ ಯಡಿಯೂರಪ್ಪ 5 ಕೋಟಿ ಬಿಡುಗಡೆಗೆ ಆದೇಶಿಸಿದ್ದರು. ಕಡಣಿ ಸೇತುವೆ, ಆರ್ ಟಿಒ ಕಚೇರಿ ಎಲ್ಲವೂ ಶಾಸಕರ ಇಚ್ಛಾಶಕ್ತಿ ಕೊರತೆಯಿಂದ ನೆನಗುದಿಗೆ ಬಿದ್ದಿವೆ ಎಂದರು.

ಎಂ.ಸಿ ಮನಗೂಳಿ ಅವರು ಶಾಸಕರಾಗಿದ್ದಾಗ ಅನುದಾನ ತಂದು ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿದ್ದಾರೆ. ಅದನ್ನು ಶಾಸಕರು ತಾವು ಮಾಡಿದ್ದು ಎನ್ನುತ್ತಿದ್ದಾರೆ. ಡಾ.ಬಾಬು ಜಗಜೀವನರಾಂ ಭವನ ನಿರ್ಮಾಣವೇ ಆಗಿಲ್ಲ. ಅದು ನಿರ್ಮಾಣವಾಗಿದೆ ಎಂದಿದ್ದಾರೆ. ಮಾಡದೆ ಕೆಲಸಗಳನ್ನು ಮಾಡಿದ್ದೇವೆ ಎನ್ನುವ ಬದಲು ಕೆಲಸ ಮಾಡಿ ಜನರಿಗೆ ತೋರಿಸಿ ಎಂದರು. ಇನ್ನು ತಳವಾರ ಸಮುದಾಯಕ್ಕೆ ಎಸ್ಟಿ ಸರ್ಟಿಫಿಕೇಟ್ ಕೊಡುತ್ತೇವೆ ಎಂದು ಉಪ ಚುನಾವಣೆಯಲ್ಲಿ ಸಿಎಂ ಬೊಮ್ಮಾಯಿ ಅವರು ಆಲಮೇಲಗೆ ಬಂದಾಗ ಹೇಳಿದ್ದರು. ಆರು ತಿಂಗಳಾದರೂ ಸರ್ಟಿಫಿಕೇಟ್ ಕೊಡದೆ ಅನ್ಯಾಯ ಮಾಡಿದ್ದಾರೆ. ಶಾಸಕ ಭೂಸನೂರ ಅವರು, ಸಿಎಂ ಕಡೆಯಿಂದ 25 ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಕೊಡಿಸುತ್ತೇನೆ ಎಂದಿದ್ದರು. ಯಾವುದು ಮಾಡಿಲ್ಲ. ಇದಕ್ಕೆ ಶಾಸಕರೆ ನೇರ ಹೊಣೆ ಎಂದು ಆರೋಪಿಸಿದರು.

ಈ ವೇಳೆ ಎಂ.ಎ ಖತೀಬ, ಇಕ್ಬಾಲ್ ತಲಕಾರಿ, ಸಂತೋಷ ಹರನಾಳ, ರಾಜಶೇಖರ ಕೂಚಬಾಳ, ಸಂತೋಷ ಪೂಜಾರಿ ಸೇರಿ ಇತರರು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!