ಮುರಿಗೆಪ್ಪಗೌಡ ರದ್ದೇವಾಡಗಿ ಸಿಂದಗಿ ಆಪ್ ಅಭ್ಯರ್ಥಿ

174

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಿಂದಗಿ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮುರಿಗೆಪ್ಪಗೌಡ ರದ್ದೇವಾಡಗಿ ಎಂದು, ರಾಜ್ಯ ಉಪಾಧ್ಯಕ್ಷ ರೋಹನ ಐನಾಪೂರ ಹೇಳಿದರು. ಬುಧುವಾರ ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ದೆಹಲಿ, ಪಂಜಾಬ್ ನಲ್ಲಿ ಆಡಳಿತ ನಡೆಸುತ್ತಿರುವ ಆಪ್, ಅಭಿವೃದ್ಧಿ ಅಂದರೆ ಏನು ಅನ್ನೋದು ತೋರಿಸಿದೆ. ಅದನ್ನೇ ಕಾಂಗ್ರೆಸ್, ಬಿಜೆಪಿ ನಕಲು ಮಾಡುತ್ತಿವೆ ಎಂದರು.

ಭ್ರಷ್ಟಾಚಾರ ರಹಿತ ಆಡಳಿತದ ಜೊತೆಗೆ ಶಿಕ್ಷಣ, ಆರೋಗ್ಯ, ಕಾರ್ಮಿಕ, ರೈತ, ಮಹಿಳೆಯರ ಪರ ಇರುವ ಪಕ್ಷ ಆಪ್. ಇದೀಗ ರಾಷ್ಟ್ರೀಯ ಪಕ್ಷವಾಗಿದೆ. ಕರ್ನಾಟಕದ 224 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುತ್ತೇವೆ. ಈಗಾಗ್ಲೇ ಘೋಷಣೆ ಮಾಡಿರುವ ಅಭ್ಯರ್ಥಿಗಳಲ್ಲಿ 16 ರೈತರು, 13 ಮಹಿಳೆಯರು, 18 ವಕೀಲರು, 10 ವೈದ್ಯರು, 10 ಇಂಜಿನಿಯರ್, 15 ಡಾಕ್ಟರೇಟ್ ಪದವಿ ಪಡೆದವರು, 41 ಸ್ನಾತಕೋತ್ತರ ಪದವಿಧರರು, 81 ಪದವಿಧರರು ಇದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಶೇಕಡ 20 ಕಮಿಷನ್ ಸರ್ಕಾರ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದರು. ಆದರೆ ಕರ್ನಾಟಕದಲ್ಲಿ ನಂತರ ಬಂದ ಬಿಜೆಪಿ ಸರ್ಕಾರ ಶೇಕಡ 40 ಕಮಿಷನ್ ಸರ್ಕಾರವಾಗಿದೆ. ಡಬಲ್ ಇಂಜನ್ ಸರ್ಕಾರ ಅಲ್ಲ ಡಬಲ್ ಕಮಿಷನ್ ಸರ್ಕಾರ. ಹೀಗಾಗಿ ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಕರ್ನಾಟಕದಲ್ಲಿ ನಮಗೊಂದು ಅವಕಾಶ ಕೊಡಿ ಎಂದರು.

ಅಭ್ಯರ್ಥಿ ರದ್ದೇವಾಡಗಿ ಮಾತನಾಡಿ, ನಾನು 20 ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಇದ್ದವನು. ಸುಣಗಾರ ಅವರ ಜೊತೆಗೆ ಕೆಲಸ ಮಾಡಿದ್ದೇನೆ. ಕೆಪಿಸಿಸಿಯಲ್ಲಿ ಕೆಲಸ ಮಾಡಿದ್ದೇನೆ. ಆದರೆ, ಈಗ ಕಾಂಗ್ರೆಸ್ ನಲ್ಲಿ ಸಾಮಾಜಿಕ ನ್ಯಾಯ ಇಲ್ಲ. ಪಕ್ಷ ನಿಷ್ಠೆ ಇದ್ದವರಿಗೆ ಟಿಕೆಟ್ ನೀಡುತ್ತಿಲ್ಲ. ಅದೊಂದು ಬಂಡವಾಳಶಾಹಿ ಪಕ್ಷವಾಗಿ ಬದಲಾಗಿದೆ. ಹೀಗಾಗಿ ನಾನು ಆಪ್ ಪಕ್ಷ ಸೇರ್ಪಡೆಯಾಗಿದ್ದು, ನನಗೆ ಜನರು ಆಶೀರ್ವಾದ ಮಾಡಬೇಕು ಎಂದರು.

ಮಾಜಿ ಸೈನಿಕ ಶಬ್ಬೀರ ಪಟೇಲ, ಶಿವು ಮಾತನಾಡಿದರು. ಆಪ್ ಪಕ್ಷದ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!