ಸಿಂದಗಿಯಲ್ಲಿ ದಾಖಲೆಯ ಮಳೆ.. ಕಳಚಿದ ಹಲವರ ಮುಖವಾಡ..!

389

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಸೋಮವಾರ ಸಂಜೆಯಿಂದ ರಾತ್ರಿಯವರೆಗೂ ಜಿಲ್ಲೆಯಾದ್ಯಂತ ಭರ್ಜರಿ ಮಳೆಯಾಗಿದೆ. ಭಾರೀ ಗುಡುಗು ಮಿಂಚು ಸಮೇತ ಎಲ್ಲೆಡೆ ಮಳೆ ಸುರಿದಿದೆ. ಇದರಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದ್ದು, ಮಳೆ ಸೃಷ್ಟಿಸಿದ ಅವಾಂತರಕ್ಕೆ ಅನೇಕ ಕಡೆ ಜನರು ನಿದ್ದೆಯೇ ಮಾಡಿಲ್ಲ.

ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಭಾರೀ ಮಳೆ ಸುರಿದಿದೆ. ಹೀಗಾಗಿ ಪಟ್ಟಣ ಸೇರಿದಂತೆ ತಾಲೂಕಿನ ಜನತೆ ಮಳೆ ನೀರು, ಚರಂಡಿ ನೀರಿನಲ್ಲಿ ರಾತ್ರಿ ಕಳೆಯುವಂತಾಯ್ತು. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಸಿಂದಗಿಯಲ್ಲಿ ಬರೋಬ್ಬರಿ 110 ಮಿಲಿ ಮೀಟರ್ ಮಳೆಯಾಗಿದೆ.

ದೇವರಹಿಪ್ಪರಗಿ 50 ಮಿ.ಮೀ, ಆಲಮೇಲ 25 ಮಿ.ಮೀ, ಕೊಂಡಗೂಳಿ 22, ರಾಮನಹಳ್ಳಿ 20.4 ಮಿ.ಮೀ, ಸಾಸಾಬಾಳ 20.3 ಮಿ.ಮೀ ಹಾಗೂ ಕಡ್ಲೇವಾಡ ಪಿ.ಎಚ್ 10.5 ಮಿ.ಮೀ ಮಳೆಯಾಗಿದೆ. ಇದೆಲ್ಲವನ್ನು ನೋಡಿದರೆ ಸಿಂದಗಿಯಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗಿದೆ.

ಪಟ್ಟಣದ 23 ವಾರ್ಡ್ ಗಳು ಬಹುತೇಕ ಮಳೆ ನೀರು, ಚರಂಡಿ ನೀರಿನಿಂದ ತುಂಬಿಕೊಂಡಿದ್ವು. ಇಷ್ಟು ಸಾಲದು ಎಂಬಂತೆ ಹಲವು ಮನೆಗಳಲ್ಲಿ ಮಳೆ ನೀರು ನುಗ್ಗಿದ್ದವು. ಹೀಗಾಗಿ ಮನೆಯಲ್ಲಿ ಸಾಕಷ್ಟು ವಸ್ತುಗಳು ಮಳೆ ನೀರಿನಲ್ಲಿ ತೊಯ್ದು ಹೋಗಿವೆ. ಹೀಗಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಿಡಿ ಶಾಪ ಹಾಕುತ್ತಿದ್ದಾರೆ. ಅಭಿವೃದ್ಧಿ ಪರ್ವ ಸೃಷ್ಟಿಸಿದ್ದೇವೆ. ಸೃಷ್ಟಿಸುತ್ತೇವೆ ಎಂದು ಹೇಳುವ ಸಿಂದಗಿ ಜನಪ್ರತಿನಿಧಿಗಳ, ಅಧಿಕಾರಿಗಳ ಮುಖವಾಡ ಈ ಒಂದು ಮಳೆ ಕಳಚಿದೆ.

ಕೆಲ ದಿನಗಳ ಹಿಂದೆಯೇ ‘ಪ್ರಜಾಸ್ತ್ರ’ ಪಟ್ಟಣ ಸುತ್ತಾಟ ನಡೆಸಿ ಮಳೆಯಿಂದ ಉಂಟಾಗುತ್ತಿರುವ ಸಂಕಷ್ಟದ ಬಗ್ಗೆ ಸವಿಸ್ತಾರವಾಗಿ ವರದಿ ಮಾಡಿತ್ತು. ಹೀಗಿದ್ದರೂ ಆಯಾ ವಾರ್ಡ್ ಸದಸ್ಯರು, ಪುರಸಭೆ, ತಾಲೂಕು ಆಡಳಿತ ಮುಂಜಾಗ್ರತ ಕ್ರಮ ತೆಗೆದುಕೊಳ್ಳದೆ ಇರೋದೆ ಇರುವುದರಿಂದ ಸೋಮವಾರ ಸಂಜೆ ಸುರಿದ ಮಳೆ ಎಲ್ಲರನ್ನು ಹೈರಾಣು ಮಾಡಿದೆ. ಈಗ್ಲಾದರೂ ವಾರ್ಡ್ ಸದಸ್ಯರು, ಪುರಸಭೆ ಅಧ್ಯಕ್ಷರು, ಮುಖ್ಯಾಧಿಕಾರಿ ಹಾಗೂ ತಾಲೂಕು ಆಡಳಿತ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಂಡು ಜನರ ಸಮಸ್ಯೆ ಬಗೆಹರಿಸಬೇಕಿದೆ.




Leave a Reply

Your email address will not be published. Required fields are marked *

error: Content is protected !!