ಕನ್ನಡ-ಕರ್ನಾಟಕ ಇತಿಹಾಸ ಅಧ್ಯಯನ ಭಿನ್ನ ಸಂಶೋಧಕ…

775

ವಿ.ಸೂ: ಕನ್ನಡ ಬಾಶೆಯಲ್ಲಿ ಮಹಾಪ್ರಾಣ ದ್ವನಿಗಳು ಇಲ್ಲ, ಆದ್ದರಿಂದ ಮಹಾಪ್ರಾಣ ಬಿಟ್ಟು ಸಹಜವಾಗಿ ಲಿಪಿ‌ ಬದಲಿಸಿ ಬರೆದಿದೆ. ಇದು ಕನ್ನಡ ಬಾಶೆಗೆ, ಬರಹಕ್ಕೆ ಸಂಬಂದಿಸಿದ ಒಂದು ಮಹತ್ವದ ಪ್ರಯೋಗ. ಈ ಬರವಣಿಗೆಯಲ್ಲಿ ಈ ರೀತಿ ಬರೆದಿದೆ…

ಕಲಬುರಗಿಯಲ್ಲಿರುವ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸ್ತಿರುವ ಬಸವರಾಜ ಕೋಡಗುಂಟಿ ಅವರು ಷ.ಶಟ್ಟರ್ ಅವರ ಬಗ್ಗೆ ಬರೆದ ಲೇಖನ ಇಲ್ಲಿದೆ.

ಶೆಟ್ಟರ್ ಅವರು ತಮ್ಮ ಮೊದಮೊದಲಿನ ಹೊಯ್ಸಳರ ಶಿಲ್ಪ, ಸೋಮನಾತಪುರ, ಶ್ರವಣಬೆಳಗೊಳ ಅದ್ಯಯನಗಳಿಂದ ಹೆಚ್ಚು ಗಮನ ಸೆಳೆದವರು. ಆನಂತರ ಅವರ Inviting Death ಹಾಗೂ Pursuing Death ಎಂಬ ಎರಡು ಜಯ್ನ ತತ್ವವನ್ನು ಜಗತ್ತಿಗೆ ಪರಿಚಯಿಸುವ ಪುಸ್ತಕಗಳು ಶೆಟ್ಟರ್ ಅವರಿಗೆ ಇನ್ನಶ್ಟು ಮರ್ಯಾದೆಯನ್ನು ತಂದವು. ಜಯ್ನ ದರ್ಮದ ಆಚರಣೆ, ನಂಬಿಕೆ ಮೊದಲಾದವುಗಳೊಂದಿಗೆ ತಾತ್ವಿಕತೆಯನ್ನು ಕಟ್ಟಿಕೊಡುವ ಈ ಪುಸ್ತಕಗಳು ಒಂದು ಸಂಚಲನ ತಂದವು. ಇವೆರಡೂ ಇತ್ತೀಚೆಗೆ ಕನ್ನಡಕ್ಕೆ ಬಂದವು.

ಇತಿಹಾಸ ಅದ್ಯಯನದಲ್ಲಿ ತರಬೇತಿ ಪಡೆದಿದ್ದ ಇತಿಹಾಸ ಪ್ರಾದ್ಯಾಪಕರಾಗಿದ್ದ ಶೆಟ್ಟರ್ ಸಾಹಿತ್ಯ, ಶಾಸನವನ್ನು ಓದುವ ಕಡೆಗೆ ಹೆಚ್ಚು ವಾಲಿ ಕನ್ನಡ ಸಂಶೋದನೆಯ ದಿಕ್ಕುಗಳನ್ನು ಬದಲಿಸುವಂತ ಕೆಲಸ ಮಾಡಿದರು. ಕನ್ನಡ-ಕರ್ನಾಟಕದ ಸಂದರ್ಬದಲ್ಲಿ ಕ್ರಿಸ್ತಶಕದ ಮೊದಲ ಸಹಸ್ರಮಾನದ ಅದ್ಯಯನಗಳು ಹೆಚ್ಚು ಆಗಿರಲಿಲ್ಲ. ಕವಿರಾಜಮಾರ್ಗ, ಹಲ್ಮಿಡಿ ಶಾಸನ ಇಂತಾ ಅದ್ಯಯನಗಳ ಹೊರತಾಗಿ, ರಾಜಕೀಯ ಇತಿಹಾಸದ ಅದ್ಯಯನಗಳು ಮಾತ್ರ ಹೆಚ್ಚು ಬಂದಿದ್ದವು. ಶೆಟ್ಟರ್ ಮೊದಲ ಸಹಸ್ರಮಾನವನ್ನು ಆಮೂಲಾಗ್ರವಾಗಿ ತಮ್ಮ ಅದ್ಯಯನದ ತೆಕ್ಕೆಗೆ ತೆಗೆದುಕೊಂಡರು. ಕ್ರಿಸ್ತಶಕ 1000ದವರೆಗಿನ ಸುಮಾರು 2000ದಶ್ಟು ಅಲ್ಲಲ್ಲಿ ಚದುರಿ ಹೋಗಿದ್ದ ಶಾಸನಗಳನ್ನು ಒಂದೆಡೆ ಸಂಗ್ರಹಿಸಿ ಅವುಗಳ ಮೇಲೆ ಅದ್ಯಯನಕ್ಕೆ ತೊಡಗಿದರು. ಅದರ ಪಲವಾಗಿ ಹಳಗನ್ನಡ ಲಿಪಿ ಎಂಬ ಪುಸ್ತಕ ಬಂತು. ಲಿಪಿ, ಲಿಪಿಯ ಬೆಳವಣಿಗೆ, ಲಿಪಿಕಾರರು ಇವುಗಳ ಸಾಮಾಜಿಕತೆ ಮೊದಲಾದ ವಿಚಾರಗಳನ್ನು ಇಲ್ಲಿ ಪರಿಚಯಿಸಿದರು. ಶೆಲ್ಡನ್ ಪೊಲಾಕ್ ಅವರು ಕವಿರಾಜಮಾರ್ಗದ ತಮ್ಮ ಅದ್ಯಯನದಲ್ಲಿ ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಸಂಗರ್ಶವನ್ನು ಅದಾಗಲೆ ಗುರುತಿಸಿದ್ದರು. ಶೆಟ್ಟರ್ ಅವರು ಶಸನಗಳಲ್ಲಿ ಈ ಸಂಗರ್ಶವನ್ನು ತೋರಿಸಿದರು. ಮುಂದುವರೆದು ಹಳಗನ್ನಡ ಬಾಶೆ ಎಂಬ ಇನ್ನೊಂದು ಪುಸ್ತಕವನ್ನು ಸಂಪಾದಿಸಿದರು. ಇದರಲ್ಲಿ ಮೊದಲ ಸಹಸ್ರಮಾನದ ಶಾಸನಗಳ ಬಾಶೆಯ ಬಹು ಆಯಾಮಗಳನ್ನು ಪರಿಚಯಿಸುವ ಹಲವರ ಲೇಕನಗಳಿವೆ. ಇದರಲ್ಲಿಯೂ ಶೆಟ್ಟರ್ ಕನ್ನಡ-ಸಂಸ್ಕ್ರುತಗಳ ಸಂಗರ್ಶವನ್ನು ಹೇಳುತ್ತಾರೆ. ಆನಂತರ ಹಳಗನ್ನಡ ಲಿಪಿ ಪುಸ್ತಕದಲ್ಲಿ ಲಿಪಿಕಾರರ ಬಗೆಗೆ ಬಹುವಾಗಿ ಬರೆದ ಶೆಟ್ಟರ್ ರೂವಾರಿ ಎಂಬ ಪುಸ್ತಕದಲ್ಲಿ ಲಿಪಿಕಾರರ ಚರಿತ್ರೆಯನ್ನು ಕಟ್ಟುವ ಪ್ರಯತ್ನ ಮಾಡಿದರು. ಈ ಶಾಸನಗಳ ನಿಗಂಟು ಹೆಚ್ಚೂ ಕಡಿಮೆ ಅಂತಿಮವಾಗಿದೆ, ಪ್ರಕಟವಾಗಬೇಕಿದೆ.

ಮೊದಲ ಸಹಸ್ರಮಾನಕ್ಕೆ ಸೇರುವ ಕವಿರಾಜಮಾರ್ಗ ಕ್ರುತಿಯನ್ನು ತಮ್ಮ ತಮಿಳಿನ ಸಂಗಂ ಸಾಹಿತ್ಯ ಮತ್ತು ಅದರ ಮಹತ್ವವನ್ನು ಪರಿಚಯಿಸುವ ಕ್ರುತಿಯಲ್ಲಿ ಸಂಗಂ ಸಾಹಿತ್ಯದೊಂದಿಗೆ ಹೋಲಿಸುತ್ತಾ ಹೋಗುವ ಪ್ರಯತ್ನ ಶಂಗಂ ತಮಿಳಗಂ ಪುಸ್ತಕದಲ್ಲಿ ಮಾಡಿದರು. ಮೊದಲ ಸಹಸ್ರಮಾನದ ಎಲ್ಲ ಕ್ರುತಿಗಳಿಗೂ ಅವರು ನಿಗಂಟನ್ನು ತಯಾರಿಸಿದ್ದಾರೆ. ಕವಿರಾಜಮಾರ್ಗ ದಶಕದಶ್ಟು ಹಿಂದಿಯೆ ಅಂತಿಮಗೊಂಡಿದೆ. ಬ್ರಾಜಿಶ್ಣು, ಪಂಪ, ಪೊನ್ನ, ರನ್ನ, ಚಾವುಂಡರಾಯ ಮೊದಲಾದ ಮೊದಲ ಸಹಸ್ರಮಾನದ ಬಾಗವಾಗುವ ಎಲ್ಲ ಸಾಹಿತ್ಯಕ್ರುತಿಗಳಿಗೂ ನಿಗಂಟನ್ನು ತಯಾರಿಸಿದ್ದಾರೆ. ಅವುಗಳು ಅಂತಿಮ ಸ್ತಿತಿಯ ಹತ್ತಿರಕ್ಕೆ ಬಂದಿವೆ.

ಇದರ ಜೊತೆಗೆ ಕ್ರಿಸ್ತಪೂರ್ವ 3ನೆ ಶತಮಾನದಿಂದ ಕ್ರಿಸ್ತಶಕ 3ನೆ ಶತಮಾನದವರೆಗೆ ಕರ್ನಾಟಕ ಪ್ರಾಕ್ರುತಮಯವಾಗಿದ್ದಿತು ಎಂದು ತಮ್ಮ ಪ್ರಾಕ್ರುತ ಜಗದ್ವಲಯ ಪುಸ್ತಕದಲ್ಲಿ ತೋರಿಸಿದರು. ಸಂಸ್ಕ್ರುತ ಇಡಿಯಾಗಿ ಉದ್ದಕ್ಕೂ ಕರ್ನಾಟಕವನ್ನು ಆವರಿಸಿತ್ತು ಎಂಬ ಬ್ರಮೆಗೆ ಇದೊಂದು ವಾಸ್ತವದ ಕನ್ನಡಿಯಂತೆಯೂ ನೋಡಬಹುದು. ಸನ್ನತಿ-ಕನಗನಹಳ್ಳಿಯ ಬರವಣಿಗೆ, ಶಿಲ್ಪ ಇವುಗಳನ್ನು ಇಟ್ಟುಕೊಂಡು ಇತ್ತೀಚೆಗೆ ಅವರು ಹಲವಾರು ಒಳನೋಟಗಳನ್ನು ಕೊಡುತ್ತಿದ್ದರು. ಶತಮಾನಕ್ಕೂ ಹೆಚ್ಚು ಕಾಲ ಕನ್ನಡ ಹಳೆಯ ದಾಕಲಾದ ಪದ ಎಂದು ನಂಬಿದ್ದ ‘ಇಸಿಲ’ ಎಂಬುದನ್ನು ತಳ್ಳಿಹಾಕಿ ಅದು ಪ್ರಾಕ್ರುತ ಪದ ಎಂಬುದನ್ನು ಹೇಳಿದರು. ಆನಂತರ ಕನಗನಹಳ್ಳಿಯ ದಾಕಲೆಗಳಲ್ಲಿ ಸಿಗುವ ಕೊಪಣ ಕನ್ನಡದ ಹಳೆಯ ಲಿಕಿತ ದಾಕಲೆ ಎಂದರು. ಶಂಗಂ ತಮಿಳಗಂ ಪುಸ್ತಕದಲ್ಲಿ ಚರ್ಚಿಸಿದ್ದ ಎರುಮಯ್ ನಾಡಿಗೂ ಅವರು ಆದಾರಗಳನ್ನು ಕನಗನಹಳ್ಳಿ ದಾಕಲೆಗಳಿಂದ ತೆಗೆಯುವ ಪ್ರಯತ್ನ ಮಾಡಿದರು. ಕೊನೆಕೊನೆಗೆ ಮೊದಲ ಸಹಸ್ರಮಾನದ ಕನ್ನಡ ಬರವಣಿಗೆಗೆ ನಿಗಂಟು ಮಾಡುವ ಕೆಲಸದ ಹಾಗೆಯೆ ದಟ್ಟಕಾಡಿನಂತಿರುವ ವಚನಗಳನ್ನೂ ಎತ್ತಿಕೊಂಡಿದ್ದರು.

ಶೆಟ್ಟರ್ ಕನ್ನಡ-ಕರ್ನಾಟಕದ ಅಸಮಾನ ಕೆಲಸವನ್ನು ತೆಕ್ಕೆಗೆ ತೆಗೆದುಕೊಂಡು ಕೆಲಸ ಮಾಡಿದರು. ಅವರ ಸಂಶೊದನೆಗೆ ಸಂಬಂದಿಸಿ ಹಲವು ಸಮಸ್ಯೆಗಳಿದ್ದರೂ ಅವಾವೂ ಶೆಟ್ಟರ್ ಅವರ, ಅವರ ಕೆಲಸಗಳ ಮಹತ್ವವನ್ನು ಕಡಿಮೆ ಮಾಡಲಾರವು. ಶೆಟ್ಟರ್ ಅವರ ಯೋಚನೆಯ ಮೊದಲ ಸಹಸ್ರಮಾನದ ಎಲ್ಲ ಸಂಪುಟಗಳು ಬಂದಾಗ ಅವುಗಳನ್ನು ಬಿನ್ನ ಆಯಾಮಗಳಲ್ಲಿ ಅದ್ಯಯನ ಮಾಡುವ ಹಲವು ಸಂಶೊದಕರು ಬೇಕಾಗುತ್ತದೆ.

ಲೇಖಕ ಬಸವಾರಜ ಕೋಡಗುಂಟಿ



Leave a Reply

Your email address will not be published. Required fields are marked *

error: Content is protected !!