ವಿಜ್ಞಾನಲೋಕಕ್ಕೆ ಸವಾಲಾಗಿದ್ದ ಶ್ರೀಮಾತೆ: ನಾಳೆ ಅಂತಿಮ ಸಂಸ್ಕಾರ

427

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆದಾಡುವ ದೇವರೆಂದೇ ಖ್ಯಾತಿಯನ್ನ ಪಡೆದಿದ್ದ ಲಿಂಗೈಕ್ಯ ಶ್ರೀಮಾತೆ ಮಾಣಿಕೇಶ್ವರಿ ಅವರ ಅಂತಿಮ ಸಂಸ್ಕಾರ ನಾಳೆ ನಡೆಯಲಿದೆ. 87 ವರ್ಷದ ಶ್ರೀಮಾತೆ ಶನಿವಾರ ರಾತ್ರಿ 8.57ಕ್ಕೆ ಲಿಂಗೈಕ್ಯರಾಗಿದ್ದಾರೆ.

ಸೇಂಡಂ ತಾಲೂಕಿನ ಯಾನೆಗುಂದಿಯಲ್ಲಿರುವ ಮಠದ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಭಕ್ತ ಸಾಗರ ಹರಿದು ಬರ್ತಿದೆ. ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಬರ್ತಿದ್ದಾರೆ. ಅಲ್ದೇ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದಿಂದಲೂ ಭಕ್ತರು ಬಂದು ಶ್ರೀಮಾತೆ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಬೆಳಗ್ಗೆ 5 ಗಂಟೆಗೆ ಮಠದ ಗುಹೆಯಲ್ಲಿ ಅರ್ಚಕರು ಹಾಲಿನ ಅಭಿಷೇಕ ಮಾಡಿದ್ದಾರೆ. ವೀರಶೈವ ಲಿಂಗಾಯತ ಧರ್ಮದ ವಿಧಿ ವಿಧಾನದಂತೆ ನಾಳೆ ಸಂಸ್ಕಾರ ನಡೆಯಲಿದೆ. ಮಠದ ಆವರಣದಲ್ಲಿನ ಶಿವಲಿಂಗ ಆಕಾರದ ಸಮಾಧಿಯಲ್ಲಿ ಅವರನ್ನ ಲಿಂಗೈಕ್ಯ ಮಾಡಲಾಗುತ್ತೆ. ಈ ಸಮಾಧಿಯನ್ನ ಸ್ವತಃ ಶ್ರೀಮಾತೆ ಮಾಣಿಕೇಶ್ವರಿ ಅವರು ನಿರ್ಮಾಣ ಮಾಡಿದ್ರಂತೆ. ಇನ್ನು ಕೆಲವರು ಮಂಗಳವಾರ ಅಥವ ಬುಧವಾರ ಎಂದು ಹೇಳ್ತಿದ್ದು, ಮಠದ ಟ್ರಸ್ಟ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಈ ಭಾಗದ ಜನಕ್ಕೆ ನಡೆದಾಡುವ ದೇವರಾಗಿದ್ದ ಶ್ರೀಮಾತೆ, ವಯೋಸಹಜ ಕಾಯಿಲೆಯಿಂದ ಇತ್ತೀಚೆಗೆ ಬಳಲುತ್ತಿದ್ರು. ಹೀಗಾಗಿ ಮಠದಲ್ಲಿಯೇ ಚಿಕಿತ್ಸೆ ನೀಡಲಾಗ್ತಿತ್ತು. ನಿನ್ನೆ ರಾತ್ರಿ ಲಿಂಗೈಕ್ಯರಾಗಿದ್ದಾರೆ.

ವಿಜ್ಞಾನಲೋಕಕ್ಕೆ ಸವಾಲಾಗಿದ್ದರು:

9ನೇ ವಯಸ್ಸಿಗೆ ಮದುವೆಯಾಗಿದ್ದ ಅವರು, ಅತ್ಯಂತ ಕಡಿಮೆ ಅವಧಿಯಲ್ಲಿಯೇ ಅದರಿಂದ ವಿಮುಕ್ತಿ ಹೊಂದಿ ಆಧ್ಯಾತ್ಮದ ಕಡೆ ಮುಖ ಮಾಡಿದ್ರು. ಶ್ರೀಮಾತೆ ಮಾಣಿಕೇಶ್ವರಿ ಅವರು ಅನ್ನ ನೀರು ಸೇವಿಸದೆ ತಮ್ಮ ಬದುಕನ್ನ ಕಳೆದವರು. ಗಾಳಿಯೇ ಅವರಿಗೆ ಆಹಾರವಾಗಿತ್ತು. ಈ ಮೂಲಕ ವಿಜ್ಞಾನಲೋಕಕ್ಕೆ ಸವಾಲಾಗಿದ್ರು. ಪ್ರತಿ ಶಿವರಾತ್ರಿ ಹಬ್ಬದಂದು ಭಕ್ತರಿಗೆ ದರ್ಶನ ನೀಡಿ, ಸಂದೇಶ ನೀಡ್ತಿದ್ರು. ಈ ಬಾರಿ ಏನೂ ಹೇಳದೆ, ಶೀಘ್ರದಲ್ಲಿಯೇ ತಾವು ಲಿಂಗೈಕ್ಯರಾಗುವುದಾಗಿ ಹೇಳಿದ್ರಂತೆ.

ರಾಜ್ಯದ, ರಾಷ್ಟ್ರದ ರಾಜಕೀಯ ನಾಯಕರು ಅಮ್ಮನ ದರ್ಶನ ಪಡೆಯಲು ಬರ್ತಿದ್ರು. ಆದ್ರೆ, ಅದೆಷ್ಟೋ ಜನಕ್ಕೆ ಅವರ ದರ್ಶನ ಸಿಗುತ್ತಿರ್ಲಿಲ್ಲ. ಅವರ ಗುಹೆಯಿಂದ ಆಚೆ ಬರುವುದೇ ತುಂಬಾ ಅಪರೂಪವಾಗಿತ್ತು. ಒಮ್ಮೆ 2018ರ ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ ಶಾ ಸಹ ಅಮ್ಮನ ದರ್ಶನಕ್ಕಾಗಿ ಅರ್ಧಗಂಟೆ ಕಾಯ್ದು, ದರ್ಶನ ಸಿಗದೆ ವಾಪಸ್ ಆಗಿದ್ರು. ಇದು ಬಿಜೆಪಿಗೆ ರಾಜಕೀಯ ಹಿನ್ನೆಡೆಯ ಸೂಚನೆಯಾಗಿತ್ತು ಎಂದು ಹೇಳಲಾಗಿತ್ತು. ಅದರಂತೆ ಬಿಜೆಪಿಗೆ ಸ್ಪಷ್ಟ ಬಹುಮತ ಬರಲೇ ಇಲ್ಲ.




Leave a Reply

Your email address will not be published. Required fields are marked *

error: Content is protected !!