ಸಿಂದಗಿ ಪುರಸಭೆ ಅಧ್ಯಕ್ಷಗಿರಿ: ಯಾರ್ಯಾರಿಗೆ ಎಷ್ಟು ಲಕ್ಷ ಡೀಲ್ ಆಗಿದೆ ಗೊತ್ತಾ?

725

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಎಲ್ಲ ಅಂದುಕೊಂಡಂತೆ ಆಗಿದ್ದರೆ ಅಕ್ಟೋಬರ್ 22ಕ್ಕೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಎಲೆಕ್ಷನ್ ನಡೆಯಬೇಕಿತ್ತು. ಆದ್ರೆ, ರಾಜ್ಯದ ಹಲವು ಭಾಗಗಳಲ್ಲಿ ಹಾಗೂ ವಿಜಯಪುರ ಜಿಲ್ಲೆಯ ಕೆಲವು ಪುರಸಭೆ ಮೀಸಲಾತಿ ಪ್ರಶ್ನಿಸಿ ಕೋರ್ಟ್ ಗೆ ಹೋದ ಪರಿಣಾಮ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ. ಕೋರ್ಟ್ ವಿಚಾರಣೆ ಮುಗಿದು ಮತ್ತೊಂದು ದಿನಾಂಕ ನಿಗದಿ ಆಗುವವರೆಗೂ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಂದೂಡಲಾಗಿದೆ.

ಸಿಂದಗಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಆದರಿಂದ ಸಹಜವಾಗಿ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಪೈಪೋಟಿ ಜೋರಾಗಿದೆ. ಚುನಾವಣೆ ಫಲಿತಾಂಶ ನೋಡಿದ್ರೆ 11 ಸ್ಥಾನ ಗೆದ್ದಿರುವ ಕಾಂಗ್ರೆಸ್, ಈ ಮೊದ್ಲು ಕಾಂಗ್ರೆಸ್ ನಲ್ಲಿದ್ದು ಟಿಕೆಟ್ ಸಿಗದೆ ಪಕ್ಷೇತರರಾಗಿ ಗೆದ್ದು ಬಂದಿರುವ ಇಬ್ಬರು ಅಭ್ಯರ್ಥಿಗಳ ಬೆಂಬಲ ನೋಡಿದ್ರೆ 13 ಸ್ಥಾನ ಹೊಂದುವ ಕಾಂಗ್ರೆಸ್, ಪುರಸಭೆ ಚುಕ್ಕಾಣಿ ಹಿಡಿಯಬೇಕು. ಆದ್ರೆ, ಇದೀಗ ಎಲ್ಲವೂ ಉಲ್ಟಾ ಆಗಿದೆ.

ಸ್ಥಳೀಯ ಶಾಸಕರ ಪುತ್ರ ಸಹ ಈ ಬಾರಿಯ ಚುನಾವಣೆಗೆ ನಿಂತು ಗೆದ್ದು ಬಂದಿದ್ದು, ಅಧ್ಯಕ್ಷರಾಗಬೇಕೆಂದು ಭರ್ಜರಿ ಪೈಪೋಟಿ ನಡೆಸಿದ್ದಾರೆ. ಆದ್ರೆ, ಜೆಡಿಎಸ್ ಗೆದ್ದಿರುವುದು 6 ಸ್ಥಾನ ಮಾತ್ರ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗಾಳ ಹಾಕಿ ಹಣ ಹಾಗೂ ಸೈಟ್ ಆಸೆ ತೋರಿಸಲಾಗಿದೆ ಎಂದು ಹೇಳಲಾಗ್ತಿದೆ. ಇದೆ ಕಾರಣಕ್ಕೆ ಇರಬಹುದು ಪಟ್ಟಣದಲ್ಲಿ ಬಹುತೇಕ ಪುರಸಭೆ ಸದಸ್ಯರು ಕಾಣ್ತಿಲ್ಲ.!

20 ಲಕ್ಷ ರೂಪಾಯಿ.. ಒಂದು ಸೈಟ್..

6 ಸ್ಥಾನ ಗೆದ್ದಿರುವ ಜೆಡಿಎಸ್, ತಮ್ಮ ಅಭ್ಯರ್ಥಿಗೆ ಬೆಂಬಲ ನೀಡಲು ಕೆಲ ಸದಸ್ಯರಿಗೆ 20 ಲಕ್ಷ ರೂಪಾಯಿ ಡೀಲ್ ಮಾಡಲಾಗಿದೆ ಎಂದು ಎಲ್ಲೆಡೆ ಮಾತ್ನಾಡಿಕೊಳ್ಳಲಾಗ್ತಿದೆ. ಅಲ್ದೇ, ಒಂದೊಂದು ಸೈಟ್ ಸಹ ಕೊಡುವ ಬಗ್ಗೆ ಮಾತುಕತೆಯಾಗಿದೆಯಂತೆ. ಇದರ ಬಲೆಗೆ ಕಾಂಗ್ರೆಸ್ ನಿಂದ ಮೊದಲ ಬಾರಿಗೆ ಆಯ್ಕೆಯಾದ ಕೆಲ ಅಭ್ಯರ್ಥಿಗಳು ಬಿದ್ದಿದ್ದಾರೆ ಎಂದು ಹೇಳಲಾಗ್ತಿದೆ.

ಶಾಸಕ, ಎಂಎಲ್ ಸಿ, ಎಂಪಿ ವೋಟ್ ಲೆಕ್ಕಾಚಾರ

ಇನ್ನು ಶಾಸಕರ ಪುತ್ರ ಅಧ್ಯಕ್ಷರಾಗಲು 3 ರಿಂದ 4 ಜನ ಕಾಂಗ್ರೆಸ್, 1-2 ಪಕ್ಷೇತರ ಅಭ್ಯರ್ಥಿಗಳ ಸಪೋರ್ಟ್ ಸಿಗುವಂತೆ ಮಾಡುವುದು. ಇದರ ಜೊತೆಗೆ ಶಾಸಕ, ಎಂಎಲ್ ಸಿ, ಎಂಪಿ ಅವರ ಒಂದೊಂದು ವೋಟ್ ಸಹ ತೆನೆ ಮಹಿಳೆಗೆ ಹಾಕಿಸುವ ಪ್ಲಾನ್ ಮಾಡಲಾಗಿದೆಯಂತೆ. ಈ ಎಲ್ಲ ಪ್ಲಾನ್ ಮಾಡಿ ಶಾಸಕರ ಪುತ್ರನಿಗೆ ಅಧ್ಯಕ್ಷ ಪಟ್ಟ ಕಟ್ಟುವ ಸಿದ್ಧತೆ ಅಂತೂ ನಡೆದಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಆದ್ರೆ, ಇವರನ್ನ ಗೆಲ್ಲಿಸಿದ್ರೆ ವಾರ್ಡ್ ಉದ್ದಾರ ಮಾಡ್ತಾರೆ ಅಂತಿದ್ದ ಜನರು ಕೊಚ್ಚೆಯಲ್ಲಿ ಜೀವನ ಮಾಡುವಂತಾಗಿದೆ. ಮಳೆಯಿಂದ ಪ್ರತಿ ವಾರ್ಡ್ ಗಳು ಗಬ್ಬೆದ್ದು ಹೋಗಿವೆ, ಸದಸ್ಯರು ಮಾತ್ರ ಎಸ್ಕೇಪ್ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!