ಇದು ಲಂಚ, ಲೂಟಿ ಸರ್ಕಾರ: ಸಿದ್ದರಾಮಯ್ಯ

189

ಪ್ರಜಾಸ್ತ್ರ ಸುದ್ದಿ

ದೇವರಹಿಪ್ಪರಗಿ: ಆಪರೇಷನ್ ಕಮಲಕ್ಕಾಗಿ ಕೋಟ್ಯಾಂತರ ಹಣ ಕೊಟ್ಟು ಕಾಂಗ್ರೆಸ್ಸಿನ ಶಾಸಕರನ್ನು ಖರೀದಿಸಲು ಹಾಗು ಮತ್ತೆ ಗೆಲ್ಲಿಸಲು ಖರ್ಚು ಮಾಡಿ ಸರ್ಕಾರ ರಚಿಸಿದ ಬಿಜೆಪಿ ಅಧಿಕಾರವಧಿಯುದ್ದಕ್ಕೂ ಲೂಟಿ ಮಾಡುತ್ತಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಪಟ್ಟಣದ ಬಿಎಲ್‌ಡಿಇ ಶಾಲಾ ಆವರಣದಲ್ಲಿ ಗುರುವಾರ ನಡೆದ ಕಾಂಗ್ರೆಸ್ಸಿನ ಪ್ರಜಾಧ್ವನಿ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದ ಬಿಜೆಪಿ ಸರ್ಕಾರವನ್ನು ಕಡು ಭ್ರಷ್ಟ ಹಾಗೂ ಅಭಿವೃದ್ಧಿ ವಿರೋಧಿ ಸರ್ಕಾರ, ಇಂದಿಗೂ ತನ್ನ ಲಂಚಬಾಕ ಪ್ರವೃತ್ತಿಯನ್ನು ಬಿಟ್ಟಿಲ್ಲ ಎಂದು ಆಪಾದಿಸಿ, ಜೆಡಿಎಸ್ ಪಕ್ಷವನ್ನು ಢೋಂಗಿ ಪಾರ್ಟಿ ಎಂದು ಮೂದಲಿಸಿದರು.

ದಾರಿ ತಪ್ಪಿಸುವ ಜೆಡಿಎಸ್ ಗೆ ಅಧಿಕಾರವೇ ಮುಖ್ಯ. 20:20 ಬಿಜೆಪಿ ಜೆಡಿಎಸ್ ಸರ್ಕಾರ ರಚನೆಯಾಗದೇ ಇದ್ದಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಕನಸಿನ ಮಾತು. ಜೆಡಿಎಸ್ ಪಕ್ಷ ತನ್ನ ಹೆಸರಿನ ಮುಂದೆ ಎಸ್(ಸೆಕ್ಯುಲರ್) ಎಂದು ಬಳಸಿ ರಾಜ್ಯದಲ್ಲಿನ ಅಲ್ಪಸಂಖ್ಯಾತರನ್ನು ದಾರಿ ತಪ್ಪಿಸುವ ಯತ್ನ ಮಾಡುತ್ತಿದೆ. ಅದಕ್ಕೆ ಯಾವುದೇ ಜಾತ್ಯಾತೀತ ನಿಲುವು ಬದ್ಧತೆಯ ಲಕ್ಷಣಗಳೇ ಇಲ್ಲ. ಎನರು ಜೆಡಿಎಸ್ ಬೆಂಬಲಿಸಿದರೆ ಅದು ಕೋಮುವಾದಿ ಪಕ್ಷ ಬಿಜೆಪಿಗೆ ಮತ ಹಾಕಿದಂತೆ ಜನರು ಎಚ್ಚರವಾಗಿ ಮತ ಚಲಾಯಿಸಬೇಕು ಎಂದರು.

ಬಿಜೆಪಿ ಅಧಿಕಾರಕ್ಕೆ ಬರಬಾರದು ರಾಜ್ಯದಲ್ಲಿ ಇಂದು ಬಿಜೆಪಿ ಬಲಗೊಳ್ಳಲು ಕುಮಾರಸ್ವಾಮಿ ದೋಸ್ತಿ ಕಾರಣ. ಅಧಿಕಾರ ಕೊಡದೇ ಅಂದು ಮಾತು ತಪ್ಪಿದ ಹೆಚ್‌ಡಿಕೆಯಿಂದಾಗಿ ಬಿಎಸ್‌ವೈಗೆ ಅನ್ಯಾಯವಾಯಿತು ಎಂಬ ಅನುಕಂಪದಿಂದ ಬಿಜೆಪಿ ಅಧಿಕಾರಕ್ಕೆ ಬಂದಿತು. ಕಾಂಗ್ರೆಸ್ ಪಕ್ಷ ಅಧಿಕಾರ ಸಿಕ್ಕರೂ ಸಿಗದಿದ್ದರೂ ತನ್ನ ಜಾತ್ಯಾತೀತ ತತ್ವದೊಂದಿಗೆ ಬದುಕು ಸವೆಸಿದೆ. ದೇಶದ ಸಮುದಾಯಗಳ ನಡುವೆ ಧರ್ಮ ಸಂಘರ್ಷ, ವಿಶ್ವಾಸ, ಪ್ರೀತಿ ಮತ್ತು ಸಹೋದರತ್ವವನ್ನು ಮಾಯಮಾಡುತ್ತಿರುವ ಬಿಜೆಪಿ ಅಽಕಾರಕ್ಕೆ ಬರಬಾರದು ಎಂದು ಮನವಿ ಮಾಡಿದರು.

ಸಿದ್ರಾಮಯ್ಯರೇ ನಮ್ಮ ಲೀಡರ್ ಸಿದ್ರಾಮಯ್ಯಾಜೀ ಎನ್ನುತ್ತ ಉರ್ದುವಿನಲ್ಲಿಯೇ ಮಾತು ಆರಂಭಿಸಿದ ಶಾಸಕ ಝಮೀರ್ ಅಹ್ಮದ್ 2018ರಲ್ಲಿನ ಸಿದ್ರಾಮಯ್ಯನವರ ಸರ್ಕಾರವಿದ್ದಾಗ ಅಲ್ಪಸಂಖ್ಯಾತರಿಗಾಗಿ ಕೋಟ್ಯಂತರ ಅನುದಾನವನ್ನು ಮೀಸಲಿರಿಸಿ, ಸಾಮಾಜಿಕ ನ್ಯಾಯದಡಿಯಲ್ಲಿ ಅಭಿವೃದ್ಧಿ ಆಗಿದೆ. ಜೆಡಿಎಸ್-ಬಿಜೆಪಿ ಪಕ್ಷಗಳು ಅಽಕಾರದಲ್ಲಿದ್ದಾಗ ಕಾಂಗ್ರೆಸ್ ಮೀಸಲಿಟ್ಟ ಅನುದಾನವನ್ನೇ ಕಡಿತಗೊಳಿಸಿ,ಅನ್ಯಾಯ ಮಾಡಿವೆ. ಅಲ್ಪಸಂಖ್ಯಾತರಿಗೆ ಸಿದ್ರಾಮಯ್ಯನವರೇ ನಮ್ಮ ಲೀಡರ್ ಎಂದು ಪುನರುಚ್ಚಿರಿಸಿದರು.

ಸರ್ವೆದಲ್ಲಿ ಪಾಸಾದವರಿಗೆ ಟಿಕೆಟ್ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಮಾತನಾಡಿ, ಎಪ್ರಿಲ್ ಕೊನೆಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದ ಯುವನಾಯಕ ರಾಹುಲ್ ಗಾಂಧಿ ಅವರು ಸರ್ವೆ ಮಾಡಿಸಿದ್ದಾರೆ. ಆ ಸರ್ವೆಯಲ್ಲಿ ಪಾಸಾಗುವ ಆಕಾಂಕ್ಷಿಗಳಿಗೆ ಮಾತ್ರ ಟಿಕೆಟ್ ಕೊಡಲಾಗುತ್ತದೆ. ಕಾಂಗ್ರೆಸ್ ಪಕ್ಷ ದೇವರಹಿಪ್ಪರಗಿ ಭಾಗದ ರೈತರಿಗೆ ನೀರು ಕೊಟ್ಟಿದೆ. ಅದರ ಉಪಕಾರ ಮರೆಯಬೇಡಿ. ಕಾಂಗ್ರೆಸ್ಸ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದರು.

ಹಿರಿಯ ನಾಯಕ ಹೆಚ್.ಸಿ.ಮಹದೇವಪ್ಪ, ಇಂಡಿ ಶಾಸಕ ಯಶವಂತ್ರಾಯಗೌಡ ರೂಗಿ, ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಎಂಎಲ್ಸಿ ಪ್ರಕಾಶ ರಾಠೋಡ ಮಾತನಾಡಿದರು. ಮಾಜಿ ಶಾಸಕ ಶರಣಪ್ಪ ಸುಣಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಸ್.ಪಾಟೀಲ ಯಾಳಗಿ ಸ್ವಾಗತಿಸಿದರು.

ವೇದಿಕೆಯಲ್ಲಿ ಪ್ರೊ.ರಾಜು ಆಲಗೂರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಷ್ಣು, ಡಾ.ಪ್ರಭುಗೌಡ ಲಿಂಗದಳ್ಳಿ, ಆನಂದ ದೊಡಮನಿ, ಸುಜಾತಾ ಕಳ್ಳಿಮನಿ, ಗೌರಮ್ಮ ಮುತ್ತತ್ತಿ, ಡಾ.ಆನಂದ ಭೈರಿ, ಮಲ್ಲನಗೌಡ ಬಿರಾದಾರ, ಬಾಪುಗೌಡ ಪಾಟೀಲ ಸೇರಿದಂತೆ ವಿವಿಧ ಮುಖಂಡರುಗಳಿದ್ದರು.




Leave a Reply

Your email address will not be published. Required fields are marked *

error: Content is protected !!