ಸಿಂದಗಿ ಪುರಸಭೆ ಡೆಡ್ ಲೈನ್ ಗೆ ಕ್ಯಾರೆ ಅಂತಿಲ್ಲ ಕೆಲ ಅಂಗಡಿಕಾರರು!

381

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿನ ಬಸವೇಶ್ವರ ಸರ್ಕಲ್ ನಿಂದ ವಿವೇಕಾನಂದ ಸರ್ಕಲ್ ವರೆಗೂ ರಸ್ತೆ ಅಗಲೀಕರಣಕ್ಕೆ ಇತ್ತೀಚೆಗೆ ಭೂಮಿಪೂಜೆ ಮಾಡಲಾಗಿದೆ. ಹೀಗಾಗಿ ವಾರ ಮೊದ್ಲೇ ಈ ರಸ್ತೆ ಅಕ್ಕ ಪಕ್ಕದಲ್ಲಿರುವ ಅನಧಿಕೃತ ಅಂಗಡಿಕಾರರಿಗೆ ಗಡವು ನೀಡಲಾಗಿತ್ತು. ಆದ್ರೆ, ಪುರಸಭೆ ಅಧಿಕಾರಿಗಳ ಮಾತಿಗೆ ಕೆಲವರು ಕ್ಯಾರೆ ಅಂತಿಲ್ಲ.

ಕಳೆದ ಶುಕ್ರವಾರದ ತನಕ ಅನಧಿಕೃತ ಅಂಗಡಿಕಾರರಿಗೆ ತೆರವು ಮಾಡಲು ಸಮಯ ನೀಡಲಾಗಿತ್ತು. ಅಲ್ಲೊಬ್ಬರು ಇಲ್ಲೊಬ್ಬರು ಅಂಗಡಿಗಳನ್ನ ತೆರವು ಮಾಡ್ತಿದ್ದಾರೆ. ಆದ್ರೆ, ಉಳಿದ ಕೆಲವರು, ತಮ್ಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ಅಧಿಕಾರಿಗಳ ಮಾತಿಗೆ ಕಿಮ್ಮತ್ತು ಕೊಡದೆ ವ್ಯಾಪಾರ ಮುಂದುವರೆಸಿಕೊಂಡು ಹೊರಟಿದ್ದಾರೆ. ಇದನ್ನ ನೋಡಿಕೊಂಡು ಸಹ ಸ್ಥಳೀಯ ಆಡಳಿತ ಸುಮ್ಮನೆ ಕುಳ್ತಿರುವುದು ನೋಡಿದ್ರೆ ಹಲ್ಲು ಕಿತ್ತ ಹಾವಿನಂತೆ ಬರೀ ಬುಸ್ ಎನ್ನಬಹುದು ಅನ್ನೋ ಅನುಮಾನ ಬಂದಿದೆ.

ಹೇಳಿದ್ದೇವೆ ತೆಗೆಯುತ್ತಾರೆ. ತಗೆಸುವ ಕೆಲಸ ಮಾಡ್ತೀವಿ.

ಸುರೇಶ ನಾಯಕ, ಪುರಸಭೆ ಮುಖ್ಯಾಧಿಕಾರಿ, ಸಿಂದಗಿ

ಇದು ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಅವರ ಒಂದು ಲೈನ್ ಉತ್ತರ. ಇದೆ ರೀತಿ ರಸ್ತೆ ಕೆಲಸ ಮಾಡುತ್ತೇವೆ ಎಂದು ಹೇಳಿ ಕಳೆದ ಸುಮಾರು ಒಂದೂವರೆ ಎರಡು ತಿಂಗಳ ಹಿಂದೆ ಕನಕದಾಸ ಸರ್ಕಲ್ ನಿಂದ ಪೂಜಾರಿಗೋಳ ಓಣಿಯಲ್ಲಿನ ಶೆಡ್ ಗಳನ್ನ ಒಂದು ದಿನದಲ್ಲಿ ನಿಂತು ತೆರವುಗೊಳಿಸಿದ್ರು. ರಸ್ತೆ ಕೆಲಸ ಮಾತ್ರ ಶುರುವಾಗಿಲ್ಲ. ಇಲ್ಲಿ ನೋಡಿದ್ರೆ ದೊಡ್ಡದಾಗಿ ಕಾರ್ಯಕ್ರಮ ಮಾಡಿ ಭೂಮಿ ಪೂಜೆ ಮಾಡಿದ್ದಾರೆ. ಆದ್ರೆ, ಅನಧಿಕೃತ ಅಂಗಡಿಗಳನ್ನ ತೆರವುಗೊಳಿಸಲು ಆಗ್ತಿಲ್ಲ.

ತಹಶೀಲ್ದಾರ್ ಕಚೇರಿ ಎದುರಿನ ಒಂದು ಬದಿಯಲ್ಲಿ ರಸ್ತೆ ಅಗೆದಿರುವುದು

ಇನ್ನು ರಸ್ತೆಯ ಇನ್ನೊಂದು ಭಾಗದಲ್ಲಿ ಅಗೆಯುವ ಕೆಲಸ ನಡೆಸಲಾಗಿದೆ. ಅದು ಸಹ ಸರಿಯಾದ ಪ್ಲಾನ್ ಇಲ್ಲದೆ ಎಂದು ಹೇಳಬಹುದು. ಅಧಿಕೃತವಾಗಿ ಜಾಗದಲ್ಲಿರುವ ಯಾಕಂದ್ರೆ, ಇಲ್ಲಿನ ಮನೆ, ಹೋಟೆಲ್, ಶೋ ರೂಮ್, ಸೇರಿದಂತೆ ಈ ಭಾಗದ ಜನರು ಮನೆಗೆ ಹೋಗುವುದಕ್ಕೂ ಆಗದಂತೆ ರಸ್ತೆ ಅಗೆಯುತ್ತಾ ಹೋಗಿದ್ದಾರೆ. ಸೋಮವಾರ ಭರ್ಜರಿಯಾಗಿ ಸುರಿದ ಮಳೆಗೆ ನೀರು ತುಂಬಿಕೊಂಡು ಹೋಗಿತ್ತು. ಇದೀಗ ಇಲ್ಲಿ ಸಂಪೂರ್ಣ ಕೆಸರುಮಯವಾಗಿದ್ದು ನಿವಾಸಿಗಳು, ಅಂಗಡಿಕಾರರು ಪರದಾಡುವಂತಾಗಿದೆ.

ಕೂಡಲೇ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ಮನೆಗಳಿಗೆ, ಅಂಗಡಿಗಳಿಗೆ ಹೋಗಲು ಅನುಕೂಲವಾಗುವಂತೆ ಮಾಡಿ ತಮ್ಮ ಕಾಮಗಾರಿಯನ್ನ ಮುಂದುವರೆಸಿಕೊಂಡು ಹೋಗಬೇಕಿದೆ. ಇಲ್ಲದೆ ಹೋದ್ರೆ ಇಲ್ಲಿನ ನಿವಾಸಿಗಳು ಅಗೆದುಹೋಗಿರುವ ರಸ್ತೆಯನ್ನ ಮುಚ್ಚುವ ಸಾಧ್ಯತೆಯಿದೆ.




Leave a Reply

Your email address will not be published. Required fields are marked *

error: Content is protected !!