ವಾರಂತ್ಯದ ಕರ್ಫ್ಯೂ ಮುಂದುವರೆಯುತ್ತಾ ತೆರವಾಗುತ್ತಾ?

247

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜೊತೆಗೆ ವಾರಂತ್ಯದ ಕರ್ಫ್ಯೂ ಸಹ ಜಾರಿಗೆ ತರಲಾಗಿದೆ. ಇದು ಜನವರಿ 31ರ ತನಕ ಇರಲಿದೆ. ಆದರೆ, ಇದಕ್ಕೆ ಜನರು ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಲಾಕ್ ಡೌನ್, ಸೆಮಿ ಲಾಕ್ ಡೌನ್, ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಎಂದು ಜೀವನ ಹಾಳಾಗಿದೆ ಅಂತಿದ್ದಾರೆ.

ಕೋವಿಡ್ ಲಸಿಕೆ ತೆಗೆದುಕೊಳ್ಳಲಾಗುತ್ತಿದೆ. 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಹೀಗಿದ್ದರೂ ಕಟ್ಟುನಿಟ್ಟಿನ ಕ್ರಮವೆಂದು ಹೇಳುತ್ತಾ ಶಾಲಾ, ಕಾಲೇಜುಗಳನ್ನು ಬಂದ್ ಮಾಡಿಸಲಾಗುತ್ತಿದೆ. ಧಾರ್ಮಿಕ ಕೇಂದ್ರಗಳನ್ನು ಮತ್ತೆ ಮುಚ್ಚಿಸಲಾಗುತ್ತಿದೆ. ವಾರಂತ್ಯದ ಕರ್ಫ್ಯೂ ಮಾಡಿ ಜನರ ದುಡಿಮೆ ಮೇಲೆ ಬರೆ ಎಳೆಯಲಾಗುತ್ತಿದೆ ಅನ್ನೋ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ದೇ, ವೀಕೆಂಡ್ ಕರ್ಫ್ಯೂ ಬಗ್ಗೆ ಜನರು ಕ್ಯಾರೆ ಅಂತಿಲ್ಲ. ಹೀಗಾಗಿ ಸರ್ಕಾರ ಇಲ್ಲಿ ವಿಫಲವಾಗುತ್ತಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವರು ಹಾಗೂ ತಜ್ಞರ ಜೊತೆಗೆ ಸಭೆ ನಡೆಸಲಿದ್ದಾರೆ. ಈ ವೇಳೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಾ? ವೀಕೆಂಡ್ ಕರ್ಫ್ಯೂ ಈ ತಿಂಗಳವರೆಗೂ ಮಾತ್ರ ಮುಂದುವರೆಸಿ ಫೆಬ್ರವರಿಯಲ್ಲಿ ತೆರವುಗೊಳಿಸಲಾಗುತ್ತಾ? ಹೋಟೆಲ್, ರೆಸ್ಟೋರೆಂಟ್, ಜವಳಿ ಉದ್ಯಮ ಸೇರಿದಂತೆ ಇನ್ನಿತರ ವಾಣಿಜ್ಯ ಚಟುವಟಿಕೆಗಳಿಗೆ ಸಡಿಲಿಕೆ ನೀಡಲಾಗುತ್ತಾ ಅನ್ನೋದು ಸೇರಿ ಹಲವು ವಿಚಾರಗಳು ತಿಳಿಯಲಿವೆ.




Leave a Reply

Your email address will not be published. Required fields are marked *

error: Content is protected !!