ಆಕೆಯ ಆತ್ಮ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು?

344

ಪ್ರಜಾಸ್ತ್ರ ವಿಶೇಷ ಪ್ಯಾಕೇಜ್:

ಕರೋನಾ ವೈರಾಣುವಿಗೆ ಕರುಣೆಯಿಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ, ಕರುಣೆ, ಅನುಕಂಪ, ಮಾನವೀಯತೆ ಇರುವ ಮನುಷ್ಯ ಸಹ ಕೆಲವೊಮ್ಮ ಅಸಾಹಾಯಕನಾಗುತ್ತಾನೆ. ಕಾಯ್ದೆ, ಕಾನೂನಿನ ಕತ್ತಿ ಅಂಚಿನ ಮೇಲೆ ನಿಂತಿರುವ ಅಧಿಕಾರಿಗಳು ಕೈಚೆಲ್ಲಿ ಕುಳಿತುಕೊಳ್ಳಬೇಕಾಗುತ್ತೆ. ಆಗ ಘಟನೆಯ ಪಾತ್ರಗಳಿಗೆ ಜೀವನ ಕಲಿಸುವ ಪಾಠ ಎಂದೂ ಮರೆಯಲು ಸಾಧ್ಯವಿಲ್ಲ.

ಕರ್ನಾಟಕ-ಮಹಾರಾಷ್ಟ್ರದ ಗಡಿಯಲ್ಲಿರುವ ಧೂದ್ ಸಾಗರ ಬಳಿ ಸೌಮ್ಯ ಅನ್ನೋ ಹೆಣ್ಮಗಳೊಬ್ಬಳ ಅಂತ್ಯ ಸಂಸ್ಕಾರ ಭಾನುವಾರ ಮಧ್ಯರಾತ್ರಿ ನಡೆಯುತ್ತೆ. ಅಗ್ನಿಯಲ್ಲಿ ಕರಗಿಹೋದ ಆಕೆಯ ಸಾವಿನ ಸುತ್ತ ಕರುಣಾಜನಕ ಕಥೆ ಇದೆ. ಅದು ನಮ್ಮಲ್ಲರ ಕಣ್ಣುಗಳನ್ನ ತೇವಗೊಳಿಸುತ್ತೆ. ಪರಿಸ್ಥಿತಿಯ ಒತ್ತೆಯಾಳುಗಳಾದ ನಮ್ಗೆ ಕಾಡುತ್ತೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೌಮ್ಯ ಮದುವೆ ಮಾಡಿಕೊಂಡು ಪುಣೆಯಲ್ಲಿ ಕೆಲಸ ಮಾಡಿಕೊಂಡಿದ್ಳು. ಸೌಮ್ಯ ಹಾಗೂ ಶರತ ದಂಪತಿಗೆ 5 ವರ್ಷದ ಯುಕ್ತಾ ಅನ್ನೋ ಮಗಳು. ಖುಷಿಯಿಂದ ಇದ್ದ ಸೌಮ್ಯ ಮೇ 8ರಂದು ಹೃದಯಾಘಾತದಿಂದ ಪುಣೆಯಲ್ಲಿ ಸಾವನ್ನಪ್ಪುತ್ತಾರೆ. ಆಕೆ ಕುಟುಂಬ ಹುಟ್ಟೂರಲ್ಲಿ ಅಂತ್ಯ ಸಂಸ್ಕಾರಕ್ಕೆ ಮುಂದಾಗುತ್ತೆ. ಆದ್ರೆ, ಕರೋನಾ ಲಾಕ್ ಡೌನ್ ಇದಕ್ಕೆ ಅವಕಾಶ ಕೊಡುವುದಿಲ್ಲ. ಮಂಡ್ಯ ಜಿಲ್ಲಾಡಳಿತ ಸೌಮ್ಯಳ ಮೃತದೇಹ ತರುವುದಕ್ಕೆ ತಿರಸ್ಕರಿಸುತ್ತೆ. ಕಾರಣ, ಕರೋನಾ ಟೆಸ್ಟ್ ಮಾಡಿಸಿರುವುದಿಲ್ಲ ಅನ್ನೋದು.

ಸೌಮ್ಯಳ ಮೃತದೇಹವನ್ನ ತೆಗೆದುಕೊಂಡು ಪತಿ ಶರತ, ತಂದೆ ನಿವೃತ್ತ ಪಿಎಸ್ಐ ಅಯ್ಯಪ್ಪ, 5 ವರ್ಷದ ಮಗಳು ಯುಕ್ತಾ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಧೂದ್ ಸಾಗರ ಹತ್ತಿರ ಅವಕಾಶಕ್ಕಾಗಿ ಕಾಯುತ್ತಾ ಕುಳಿತುಕೊಳ್ಳುತ್ತೆ. ಅತ್ತ ವಾಪಸ್ ಪುಣೆಗೂ ಹೋಗುವುದಕ್ಕೆ ಆಗದೆ, ಇತ್ತ ಮಂಡ್ಯಕ್ಕೂ ಬರಲು ಆಗದೆ, ಕಾಡಿನಂತಿರುವ ಪ್ರದೇಶದಲ್ಲಿ ಕಣ್ಣೀರು ಹಾಕುತ್ತಾ ಇರಬೇಕಾಗುತ್ತೆ. ಏನೂ ಅರಿಯದ ಮಗುವಿನ ಕಣ್ಣಲ್ಲಿ ತಾಯಿ ಮೌನದೇಹ ನಿರುತ್ತರವಾಗಿರುತ್ತೆ.

ಹೀಗೆ 24 ಗಂಟೆಗಳ ಬಳಿಕ ಈ ಕುಟುಂಬಕ್ಕೆ ಬೆಳಗಾವಿ ಅಧಿಕಾರಿಗಳು ನೆರವಿಗೆ ಬರ್ತಾರೆ. ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ, ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ, ಇಂಡಸ್ಟ್ರಿ ಅಧಿಕಾರಿ ದೊಡ್ಡಬಸವರಾಜು ಹಾಗೂ ವೈದ್ಯ ಶಿಂಧೆ ಅವರು ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡ್ತಾರೆ. ಕಟ್ಟಿಗೆ, ಸೀಮೆಎಣ್ಣೆ ಹೊಂದಿಸಿ, ಧೂದ್ ಸಾಗರ ದಡದಲ್ಲಿ ಸೌಮ್ಯಳ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಗುತ್ತೆ.

ಮಗಳ ಅಂತ್ಯ ನೆನೆದು ದುಃಖಿಸುವ ತಂದೆ, ಹೆಂಡ್ತಿಯ ಸ್ಥಿತಿಗೆ ಕಣ್ಣೀರಾದ ಗಂಡ. ಅಮ್ಮನ ಬರುವಿಕೆಗಾಗಿ ದೂರದ ಕಾರಿನಲ್ಲಿ ಕುಳಿತ 5 ವರ್ಷದ ಮಗಳ ನೋಟ.. ಅಲ್ಲಿ ನಿಯಮಗಳಿಗೆ ಸೋತ ಮಾನವೀಯತೆ. ಇಲ್ಲಿ ಮನುಷ್ಯತ್ವಕ್ಕೆ ಜಾಗವಿದೆ ಎನ್ನುತ್ತೆ. ಆದ್ರೆ, ಕೊನೆಯಲ್ಲಿ ಇದು ಎಲ್ಲದಕ್ಕೂ ಮುಕ್ತಿನಾ.. ಆದಿನಾ ಅನ್ನೋ ಪ್ರಶ್ನೆ ಉಳಿಯುತ್ತೆ…




Leave a Reply

Your email address will not be published. Required fields are marked *

error: Content is protected !!