ಯುಗಪುರುಷನಿಗೊಂದು ನಮನ…

441

ವಿಶ್ವದಲ್ಲಿಯೇ ಅತಿ ಹೆಚ್ಚು ಯುವ ಸಮೂಹ ಹೊಂದಿದ ದೇಶವೆಂದರೆ ಅದು ಭಾರತ. ಇಂಥಾ ದೇಶದ ಯುವ ಪಡೆ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ವಿಶ್ವ ಕಂಡ ಮಹಾನ್ ವೀರ ಸನ್ಯಾಸಿ ಬಗ್ಗೆ ಉಪನ್ಯಾಸಕಿ ಜಯಲಕ್ಷ್ಮಿ ಕೆ ಅವರು ಬರೆದ ಕಿರು ಲೇಖನ ಇಲ್ಲಿದೆ…

“ಹತ್ತು ಜನ ಸಮರ್ಪಣಾಭಾವದ ಯುವಕ-ಯುವತಿಯರನ್ನು ನನ್ನ ಕೈಗೆ ಕೊಡಿ, ನಾನು ದೇಶದ ಭವಿಷ್ಯವನ್ನೇ ಬದಲಾಯಿಸುತ್ತೇನೆ ” ಇದು ಸ್ವಾಮಿ ವಿವೇಕಾನಂದರು ಯುವ ಶಕ್ತಿಯ ಮೇಲಿಟ್ಟ ಭರವಸೆ. ಹರಿಯುವ ನೀರಿಗಿರುವ ಶಕ್ತಿ ಯುವಜನತೆಯಲ್ಲಿದೆ. ಯುವ ಶಕ್ತಿಯ ಮುಂದೆ ಅಣುಶಕ್ತಿಯೂ ಇಲ್ಲ ಎಂದು ಸಾರಿದ್ದ ಸ್ವಾಮಿ ವಿವೇಕಾನಂದರು ಯುವ ಜನಾಂಗ ಸತ್ಪಥದಲ್ಲಿ ಸಾಗಿದ್ದೇ ಆದಲ್ಲಿ ದೇಶದ ಅಭಿವೃದ್ಧಿ ಖಚಿತ ಎಂದು ಬಲವಾಗಿ ನಂಬಿದ್ದರು.

ನೀವು ದೇವರನ್ನು ಕಂಡಿದ್ದೀರಾ ಎಂದು ನೇರವಾಗಿ ರಾಮಕೃಷ್ಣ ಪರಮಹಂಸರನ್ನು ಕೇಳಿದ್ದರು. ಹೌದು, ಕಂಡಿದ್ದೇನೆ. ಬೇಕಾದರೆ  ನಿನಗೂ ತೋರಿಸುತ್ತೇನೆ ಎಂದವರು ಉತ್ತರಿಸಿದ ತಕ್ಷಣ ಅವರನ್ನೇ ತಮ್ಮ ಗುರುವಾಗಿ, ಆದರ್ಶ ವ್ಯಕ್ತಿಯಾಗಿ ಸ್ವೀಕರಿಸಿದ್ದರು. ದಿಟ್ಟ ನೇರ ನಡೆ ನುಡಿಯ ಪರಮಹಂಸರನ್ನು ನರೇಂದ್ರ ಸ್ವೀಕರಿಸಿದಂತೆ ಸ್ವಾಮಿ  ವಿವೇಕಾನಂದರ ಜೀವನಾದರ್ಶಗಳನ್ನು ಇಂದಿನ ಜನತೆ ಸ್ವೀಕರಿಸಿದ್ದೇ ಆದಲ್ಲಿ ಯುವಶಕ್ತಿ ಭವ್ಯ ಭಾರತದ ನಿರ್ಮಾತೃಗಳಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂದೇಹವಿಲ್ಲ.

ಸ್ವಾಮಿ ವಿವೇಕಾನಂದರು ಯುವ ಜನತೆಗೆ ನೀಡಿದ ಪಂಚತತ್ವಗಳಲ್ಲಿ ಮಾನವ ಜೀವನ ಸಾರ್ಥಕತೆಯ ಸರ್ವಸ್ವವೂ ಅಡಕವಾಗಿದೆ ಎಂದರೆ ಅತಿಶಯೋಕ್ತಿ ಎನಿಸದು. ಆ ಪಂಚ ತತ್ವಗಳೇ..

1. ಏಕಾಗ್ರತೆ

ತನ್ನೆದುರು ಹೆಡೆ ಎತ್ತಿ ನಿಂತ ಸರ್ಪವನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಧ್ಯಾನಾಸಕ್ತನಾಗಿದ್ದ ನರೇಂದ್ರನ ಏಕಚಿತ್ತ ನಮ್ಮಲ್ಲಿ ಮಿಳಿತಗೊಳ್ಳಬೇಕು. ಗುರಿಯೆಡೆಗೆ ಸಾಗುವ ಮನಸಿಗೆ ಬೇರಾವ ಯೋಚನೆಗಳೂ ಬರಬಾರದು. ಏಕಾಗ್ರತೆಯೇ ಜ್ಞಾನಭಂಡಾರದ ಕೀಲಿಕೈ ಎನ್ನುವುದು ಸ್ವಾಮಿ ವಿವೇಕಾನಂದರ ದೃಢವಾದ ನಂಬಿಕೆಯಾಗಿತ್ತು.

2.ಮನೋನಿಗ್ರಹ

ಅದು ಬೇಕು ಇದು ಬೇಕು ಮತ್ತಿನ್ನೇನೋ ಬೇಕು ಎಂದು ಸದಾ ಹಂಬಲಿಸುತ್ತಾ ಮನಸನ್ನು ಎಲ್ಲೆಂದರಲ್ಲಿ ಹರಿಯಬಿಡುವ ಹುಚ್ಚು ಮನಸಿಗೆ ತನಗೇನು ಬೇಕು ಎನ್ನುವುದೇ ಅರಿಯದು. ಆದ್ದರಿಂದ ವಿಷಯಾಸಕ್ತ ಮನಸಿನ ನಿಗ್ರಹ ಮೊದಲಾಗಬೇಕು ಎನ್ನುತ್ತಿದ್ದ ಸ್ವಾಮಿ ವಿವೇಕಾನಂದರಿಗೆ ಅವರೆದುರು ನಿಲ್ಲುತ್ತಿದ್ದ ನಾರಿಯರೆಲ್ಲ ಮಾತೃ ಸ್ವರೂಪಿಣಿಯರಾಗಿ ಕಾಣುತ್ತಿದ್ದರು. ಅವರ ಈ ತತ್ವ ದಿಕ್ಕು ದೆಸೆಯಿಲ್ಲದೆ ಅಲೆಯುವ ಕೆಲ ಮನಗಳಿಗೆ ಆದರ್ಶವಾಗಿದ್ದೇ ಆದಲ್ಲಿ ನಮ್ಮ ಸಮಾಜದಲ್ಲಿ ಒಂದಷ್ಟು ಸುಧಾರಣೆ ಆದೀತು. ಮಹಿಳಾ ರೋಧನ ನಿಂತೀತು.

3.ಆಧ್ಯಾತ್ಮಿಕ ಚಿಂತನೆ

ವ್ಯಕ್ತಿಯ ದೈಹಿಕ, ಬೌದ್ಧಿಕ, ನೈತಿಕ ವಿಕಸನಕ್ಕೆ ಆಧ್ಯಾತ್ಮ ಮೂಲ ಎನ್ನುತ್ತಿದ್ದರು ವಿವೇಕಾನಂದರು. ಪ್ರಾರ್ಥನೆ-ಧ್ಯಾನ ಎನ್ನುವ ಆಧ್ಯಾತ್ಮ ಅಂಶಗಳೇ ಶಿಕ್ಷಣದ ಜೀವಾಳ. ನಮ್ಮಲ್ಲಿ ಸುಪ್ತವಾಗಿರುವ ದೈವೀ ಗುಣಗಳ ಅಭಿವ್ಯಕ್ತಿಗೆ ಅವು ಅಗತ್ಯ ಎಂದು ಅವರು ಭಾವಿಸಿದ್ದರು.

4. ಸಮಯದ ಸದ್ಬಳಕೆ

ಬಿಟ್ಟ ಬಾಣ, ಆಡಿದ ಮಾತು, ಹರಿದು ಹೋದ ನೀರು, ಕಳೆದು ಹೋದ ಅವಕಾಶ ಎಂದಿಗೂ ತಿರುಗಿ ಬರಲಾರವು. ಕಳೆದು ಹೋದ ಒಂದೇ ಒಂದು ನಿಮಿಷವನ್ನು ಮರಳಿ ತರಬಲ್ಲೆಯಾದರೆ ನಿನಗೆ ಸಮನಾದವರು ಈ ಜಗತ್ತಿನಲ್ಲಿ ಯಾರೂ ಇರಲಾರರು ಎಂದು ಬಾಲಕನಾಗಿದ್ದಾಗಲೇ ತನ್ನ ಸಹವರ್ತಿಗಳಿಗೆ ಹೇಳುತ್ತಿದ್ದ ವಿವೇಕಾನಂದರು ಸಮಯಕ್ಕೆ ಬಹಳ ಆದ್ಯತೆ ಕೊಡುತ್ತಿದ್ದರು. ಸಮಯವೆಂಬ ಅತ್ಯಮೂಲ್ಯ ಸಂಪತ್ತಿನ ಸದ್ವಿನಿಯೋಗಕ್ಕಾಗಿ ಅವರು ಕರೆ ನೀಡುತ್ತಿದ್ದರು.

5. ನಿರಂತರ ಶ್ರಮ

ಸಾಧನೆಯೇ ಸಫಲತೆಯ ಮೂಲ ಸಾಧನ. ಕಠಿಣ ಶ್ರಮದಿಂದ ಮಾತ್ರ ನಾವು ಸಾಧನೆಯ ಶಿಖರವೇರಲು ಸಾಧ್ಯ ಎನ್ನುತ್ತಿದ್ದ ವಿವೇಕಾನಂದರು, ಶ್ರಮವಿಲ್ಲದೇ ಹಣಗಳಿಸುವ ನಿಟ್ಟಿನಲ್ಲಿ ಹೊರದೇಶಗಳಿಗೆ ಪಲಾಯನ ಮಾಡುವ ವಿದ್ಯಾವಂತ ಯುವಕರನ್ನು ಉದ್ದೇಶಿಸಿ ಹೇಳಿದ್ದು ಹೀಗೆ “ಹೊಟ್ಟೆಗೆ ಹಿಟ್ಟಿಲ್ಲದೇ ಜನರು ಸಾಯುತ್ತಿರುವಾಗ ಅವರ ತ್ಯಾಗದ ಫಲವಾಗಿ ವಿದ್ಯೆ ಕಲಿತು ಅವರಿಗಾಗಿ ಮರುಗದ ಪ್ರತಿಯೊಬ್ಬ ವಿದ್ಯಾವಂತನನ್ನು ನಾನು ವಿಶ್ವಾಸಘಾತುಕನೆಂದು ಕರೆಯುತ್ತೇನೆ.”

 ತನ್ನ ಗಂಭೀರ ನಡೆ ಮತ್ತು ಪರಿಣಾಮಕಾರಿ ಮಾತುಗಳಿಂದ ವಿಶ್ವಮಟ್ಟದಲ್ಲಿ ಭಾರತಕ್ಕೊಂದು ವಿಶಿಷ್ಟ ಸ್ಥಾನವನ್ನು ಕಲ್ಪಿಸಿಕೊಟ್ಟ ಧೀರೋದಾತ್ತ ಸ್ವಾಮಿ ವಿವೇಕಾನಂದರು ನಮ್ಮೆಲ್ಲರ ಹೃನ್ಮನಗಳಲ್ಲಿ ಅಜರಾಮರರಾಗಿ ಉಳಿಯುವ ಯುಗಪುರುಷ. ಈ ಯುಗಪುರುಷನಿಗೆ ಹೃದಯಾಳದ ನಮನಗಳು…

ವಿಜಯಲಕ್ಷ್ಮಿ ಕೆ, ಉಪನ್ಯಾಸಕಿ, ಮಡಿಕೇರಿ



Leave a Reply

Your email address will not be published. Required fields are marked *

error: Content is protected !!