ವಿವೇಕಾನಂದರ ವಿಚಾರಧಾರೆಯ ಪ್ರಸ್ತುತತೆ

690

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಬೀದರ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಶರಣ ಸಂಗಮೇಶ ಎನ್ ಜವಾದಿ ಅವರು ಮಹಾನ್ ಯೋಗಿ ಸ್ವಾಮಿ ವಿವೇಕಾನಂದರ ಕುರಿತು ಬರೆದ ಲೇಖನ…

ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರು ನಿರ್ಭಿಡತೆ,  ದೇಶಭಕ್ತಿ, ಆಶಾವಾದ, ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೂರದೃಷ್ಟಿಯ ಕುರಿತು ಮಾನವೀಯ ಮೌಲ್ಯಗಳನ್ನು ಈ ಜಗತ್ತಿನಲ್ಲಿ ಸಾರಿದ ಸಂತರು. 12ನೇ ಜನವರಿ 1862ರಂದು ಕಲ್ಕತ್ತದಲ್ಲಿ ಜನಿಸಿದರು.  ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆಯನ್ನು ನಿರ್ಮಿಸುವುದೇ ನನ್ನ ಗುರಿ ಎನ್ನುತ್ತಿದ್ದರು. ಯುವಕರಿಗೆ ಮಾನಸಿಕ, ದೈಹಿಕ, ಆಧ್ಯಾತ್ಮಿಕ, ನೈತಿಕ, ಸಾಮಾಜಿಕವಾಗಿ ಎಂದೂ ಶಕ್ತಿ ಕಳೆದುಕೊಳ್ಳಬಾರದು ಎಂದು ಕರೆ ನೀಡಿದ್ದ ಅವರು ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವನ್ನು ಮೂಡಿಸಿ ಸ್ವತಂತ್ರ ನವ ಭಾರತ ನಿರ್ಮಾಣಕ್ಕೆ ಬುನಾದಿಯನ್ನು ಹಾಕಿದರು. ಹಾಗಾಗಿ ಸ್ವಾಮಿ ವಿವೇಕಾನಂದರ ಸಂದೇಶಗಳು ಪ್ರಸ್ತುತ ಮನುಕುಲದ ಒಳಿತನ್ನು ಬಯಸುತ್ತವೆ. ವಿವೇಕಾನಂದರು ತಿಳಿಸಿದಂತೆ, ಈ ಕ್ಷಣಭಂಗುರವಾದ ಪ್ರಪಂಚದಲ್ಲಿ ಒಂದೆರಡು ದಿನ ಜಾಸ್ತಿ ಬದುಕಿದರೆ ತಾನೆ ಏನು? ತುಕ್ಕು ಹಿಡಿದು ಬದುಕುವುದಕ್ಕಿಂತ ಇತರರಿಗೆ ಕೈಲಾದಷ್ಟು ಸಹಾಯ ಮಾಡುತ್ತಾ ಸವೆದು ಸಾಯುವುದು ಮೇಲು ಎಂದು ತಿಳಿದು ಬದುಕುವುದು ಒಳ್ಳೆಯದು ಎಂದು ತಿಳಿದು ನಡೆದವರು.

ಸ್ವಾಮಿ ವಿವೇಕಾನಂದರು ತಾವಷ್ಟೇ ದೇಶಪ್ರೇಮಿಗಳಾಗಿರಲಿಲ್ಲ. ಅವರು ತಮ್ಮ ವೀರವಾಣಿಯಿಂದ ಯುವಕರನ್ನು ಬಡಿದೆಬ್ಬಿಸಿದ್ದರು.  ಅವರಲ್ಲಿ ಸ್ಫೂರ್ತಿಯ ಸೆಲೆ ತುಂಬಿದ್ದರು ಎನ್ನುವುದು ಯಾರು ಮರಿಯಬಾರದು. ಇದಲ್ಲದೆ ನಮಗಿಂದು ದೇಶಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸುವಂತಹ ಕೆಲವು ಮಂದಿ ಯುವಕರು ಬೇಕಿದ್ದಾರೆ ಎನ್ನುವ ಸ್ವಾಮೀಜಿಯವರ ಮಾತುಗಳಲ್ಲಿ ಯುವಶಕ್ತಿಯ ಬಗ್ಗೆ ಎಷ್ಟೊಂದು ಭರವಸೆಯಿತ್ತು ಎನ್ನುವುದು ಎದ್ದು ಕಾಣುತ್ತದೆ.

ವಿವೇಕಾನಂದರ ಪ್ರಸ್ತುತ  ತತ್ವಗಳು:

ಒಂದು ಆದರ್ಶ ಅಥವಾ  ಒಳ್ಳೆಯ ವಿಚಾರ ಪ್ರಸ್ತುತವಾಗಬೇಕಾದರೆ ಅದು ಸರ್ವಕಾಲದಲ್ಲೂ ಸತ್ಯವಾಗಿಯೇ ಇರಬೇಕು. ಅಂದಾಗ ಮಾತ್ರ ಅನುಷ್ಠಾನ ಮಾಡಲು ಯೋಗ್ಯವಾಗುತ್ತದೆ. ಹಾಗೆ ಅನುಷ್ಠಾನದಿಂದ ಉತ್ತಮ ವಾತಾವರಣ ನಿರ್ಮಾಣ ಮಾಡುವಂತಿರಬೇಕು. ಯಾವ ಯಾವ ಆದರ್ಶಗಳು ಇಂತಹ ಸ್ವರೂಪವನ್ನು ಹೊಂದಿವೆಯೋ ಅವನ್ನೇ ‘ಸತ್ಯ’ ಅಥವಾ ‘ತತ್ತ್ವ’ ಎನ್ನುತ್ತಾರೆ ನಮ್ಮ ವಿಚಾರವಾದಿಗಳು. ಹಾಗಾಗಿ ತ್ಯಾಗಮೂರ್ತಿವಾಣಿ ಸತ್ಯದ ಕುರಿತಾಗಿರುವುದರಿಂದ ಅದು ಎಂದೆಂದಿಗೂ ಪ್ರಸ್ತುತ.

ಸ್ವಾಮಿ ವಿವೇಕಾನಂದರ ಸಂದೇಶಗಳು:

ಸ್ವಾಮಿ ವಿವೇಕಾನಂದರು ಸಪ್ತರ್ಷಿಗಳಲ್ಲೊಬ್ಬರು. ಆದ್ದರಿಂದ ಅವರ ಸಂದೇಶಗಳೆಲ್ಲವೂ ಪ್ರಸ್ತುತವೇ. ಅವರದು ಋಷಿದೃಷ್ಟಿ. ಅವರು ಸಮಸ್ಯೆಯ ಮೂಲಕ್ಕೆ ಹೋಗಿ ಪರಿಹಾರವನ್ನು ಕಂಡು ಹಿಡಿದವರು. ನಮ್ಮ ಸಮಸ್ಯೆಗಳೆಲ್ಲ ಗೊತ್ತಿದ್ದು, ನಮ್ಮ ಮೇಲೆ ಅನುಕಂಪವಿರುವ, ಪರಿಹಾರ ಕೊಡುವ ಸಾಮರ್ಥ್ಯವಿರುವ ವ್ಯಕ್ತಿಯಿಂದ ಮಾತ್ರ ಮಾರ್ಗದರ್ಶನ ಸಾಧ್ಯ. ಸ್ವಾಮೀಜಿಯವರು ಅಂತಹ ಒಬ್ಬ ಮಹಾನ್ ಕಾರ್ಯ ನಿರ್ವಹಿಸಿದ ಶಕ್ತಿ, ವ್ಯಕ್ತಿ ಎನ್ನುವುದು ಅವರ ಜೀವನದ ಅಧ್ಯಯನದಿಂದ ತಿಳಿಯುತ್ತದೆ. ಆದ್ದರಿಂದ ವಿಶ್ವಮಾನವ ಸ್ವಾಮಿ ವಿವೇಕಾನಂದರು ಹೇಳುತ್ತಾರೆ, ಒಳ್ಳೆಯ ಉದ್ದೇಶ, ಸತ್ಯಸಂಧತೆ ಮತ್ತು ಅನಂತ ಪ್ರೇಮ ಇವು ಜಗತ್ತನ್ನೇ ಗೆಲ್ಲಬಲ್ಲವು. ಈ ಸದ್ಗುಣಗಳನ್ನು ಹೊಂದಿದ ಒಬ್ಬನೇ ವ್ಯಕ್ತಿ ಕೋಟ್ಯಂತರ ದುಷ್ಟರ, ದುರುಳರ ಕಪಟ ಜಾಲವನ್ನು ನಾಶಮಾಡಬಹುದು. ಇನ್ನೊಂದು ಕಡೆ ಹೇಳುತ್ತಾರೆ, ನಾನು ಮುಂದಿನ 1500 ವರ್ಷಗಳಿಗೆ ಬೇಕಾಗುವಷ್ಟು ಆದರ್ಶ ವಿಚಾರ ಸಂದೇಶಗಳನ್ನು ಈ ನಾಡಿಗೆ ಕೊಟ್ಟಿದ್ದೇನೆ ಎಂದು. ಈ ಮಾತುಗಳನ್ನು ಆಡಬೇಕಾದರೆ ಎಂತಹ ಅದಮ್ಯ ವಿಶ್ವಾಸ ಅವರಲ್ಲಿ ಇರಬೇಕು!

ಕೊನೆಯ ಮಾತು:

ಸ್ವಾಮಿ ವಿವೇಕಾನಂದರು ದೇಶದ ಯುವಜನತೆಯ ಮೇಲೆ ಅಪಾರ ವಿಶ್ವಾಸವಿಟ್ಟಿದ್ದರು. ಆದರೆ ಆ ವಿಶ್ವಾಸವೆಲ್ಲಾ ಹುಸಿಯಾದಂತಿದೆ ಇಂದು. ಆದ್ದರಿಂದ ಭಾರತೀಯ ಪ್ರಜ್ಞಾವಂತ ಯುವಜನತೆ ಯುವಕರೇ ಮುಂದೆ ಬನ್ನಿ.  ಟೊಂಕಕಟ್ಟಿ ನವ ಭಾರತದ ನಿರ್ಮಾಣದ ಹಾದಿಯಲ್ಲಿ ಸಾಗೋಣ. ಸ್ವಾಮಿ ವಿವೇಕಾನಂದರು ಭಾರತಾಂಬೆಯ ಹೃನ್ಮಂದಿರದಲ್ಲಿ ಇಂದಿಗೂ ವಿರಾಜಮಾನರಾಗಿದ್ದಾರೆ. ನವಭಾರತ ನಿರ್ಮಾಣದ ಮಹಾನ್‌ ಕಾರ್ಯದಲ್ಲಿ ಕಟಿಬದ್ಧರಾಗಿ ಟೊಂಕ ಕಟ್ಟಿದಲ್ಲಿ ವೀರ ಸನ್ಯಾಸಿಗೆ ನಾವು ಅರ್ಪಿಸುವ ಬಹು ದೊಡ್ಡ ದೇಶಭಕ್ತಿಯ ಪುಷ್ಪಾಂಜಲಿಯಾಗುತ್ತದೆ.

ಶರಣ ಸಂಗಮೇಶ ಎನ್ ಜವಾದಿ, ಕೂಡಂಬಲ, ಬೀದರ



Leave a Reply

Your email address will not be published. Required fields are marked *

error: Content is protected !!