ಸಿಂದಗಿಯಲ್ಲಿ ಜೆಡಿಎಸ್ ಒಳಒಪ್ಪಂದ ಆಗಿದೆಯಾ?

246

ಪ್ರಜಾಸ್ತ್ರ ವಿಶೇಷ, ನಾಗೇಶ ತಳವಾರ

ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರದ ಅಖಾಡದಲ್ಲಿ ಅಂತಿಮವಾಗಿ ಉಳಿದಿದ್ದು 9 ಕಲಿಗಳು. ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ಜೊತೆಗೆ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದು ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಇದರ ನಡವೆ ಪಕ್ಷಗಳ ನಡುವೆ ಒಪ್ಪಂದವಾಗಿದೆ ಅನ್ನೋ ಗುಸುಗುಸು ಕ್ಷೇತ್ರದಲ್ಲಿ ಶುರುವಾಗಿದೆ.

ಈ ಒಪ್ಪಂದ ಅನ್ನೋ ಗಂಭೀರ ಆರೋಪ ಕೇಳಿ ಬಂದಿರುವುದು ಜೆಡಿಎಸ್ ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ ಅವರ ವಿರುದ್ಧ. ಸಾಮಾಜಿಕ ಜಾಲತಾಣ ಸೇರಿದಂತೆ ಮತದಾರರಲ್ಲಿಯೇ ಕೇಳಿ ಬರುತ್ತಿರುವ ಮಾತು ಒಂದಿಷ್ಟು ಸಂಚಲನ ಸೃಷ್ಟಿಸಿದೆ. ಹಂದಿಗನೂರ ಗ್ರಾಮದಲ್ಲಿ ಅಭ್ಯರ್ಥಿಗೆ ಈ ಕುರಿತು ಪ್ರಶ್ನಿಸಲಾಗಿದೆ ಅನ್ನೋ ಮಾತು ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ತಿಳಿದು ಬರಬೇಕಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೇಳಲು ಜೆಡಿಎಸ್ ಅಭ್ಯರ್ಥಿ ವಿಶಾಲಾಕ್ಷಿ ಶಿವಾನಂದ ಪಾಟೀಲ ಹಾಗೂ ತಾಲೂಕು ಅಧ್ಯಕ್ಷ ಸಂತೋಷ ಹರನಾಳ ಅವರನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಿಗಲಿಲ್ಲ.

ವಿಶಾಲಾಕ್ಷಿ ಪಾಟೀಲ ಅವರ ಪತಿ ಶಿವಾನಂದ ಪಾಟೀಲ ಅವರು ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಪ್ರಯತ್ನಿಸಿದ್ದರು. ಟಿಕೆಟ್ ಸಿಗದೆ ಹೋದಾಗ ಅನಿವಾರ್ಯ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಕೆಲಸ ಮಾಡಿದರು. ಮುಂದೆ ಬಿಜೆಪಿಯಿಂದ ಹೊರ ಬಂದು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಅವರ ಮೂಲಕ ಜೆಡಿಎಸ್ ನಾಯಕ ಕುಮಾರಸ್ವಾಮಿ ಭೇಟಿಯಾಗಿ ಜೆಡಿಎಸ್ ಸೇರ್ಪಡೆಯಾದರು. ಪಂಚರತ್ನ ಯಾತ್ರೆ ವೇಳೆ ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ ಶಿವಾನಂದ ಪಾಟೀಲ ಹೆಸರು ಘೋಷಿಸಲಾಯಿತು.

ಕ್ಷೇತ್ರದ ಮತದಾರರನ್ನು ಸಳೆಯುವ ಕೆಲಸ ನಡೆಸಿದ್ದರು. ಆದರೆ, ದುರಾದೃಷ್ಟವಶಾತ್ ಹೃದಯಾಘಾತದಿಂದ ನಿಧನರಾದರು. ಸಾರ್ವಜನಿಕರು ಊಹಿಸಿದಂತೆ ಶಿವಾನಂದ ಪತ್ನಿ ವಿಶಾಲಾಕ್ಷಿ ಅವರಿಗೆ ಕುಮಾರಸ್ವಾಮಿ ಟಿಕೆಟ್ ಘೋಷಿಸಿದರು. ಪತಿ ರಾಜಕೀಯಕ್ಕೆ ಹೋಗುವುದು ಇಷ್ಟವಿಲ್ಲದ ಪತ್ನಿ ಈಗ ಜೆಡಿಎಸ್ ಅಭ್ಯರ್ಥಿಯಾಗಿ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ. ಆದರೆ, ಆರಂಭದಲ್ಲಿಯೇ ಪಕ್ಷದಲ್ಲಿ ಆಂತರಿಕ ಕಲಹ ಶುರುವಾಯಿತು. ತಾಲೂಕು ಅಧ್ಯಕ್ಷರಾದಿಯಾಗಿ ಅನೇಕರು ಪಕ್ಷ ತೊರೆದರು. ಅದಕ್ಕೆ ಕಾರಣ, ವಿಶಾಲಾಕ್ಷಿ ಅವರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ಹೊರ ನಡೆದರು.

ಇನ್ನು ವಿಶಾಲಾಕ್ಷಿ ಅವರಿಗೆ ಕ್ಷೇತ್ರದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ರಾಜಕೀಯದ ಯಾವ ಹಿನ್ನೆಲೆ ಸಹ ಇಲ್ಲ. ಇಲ್ಲಿನ ಮತದಾರರ ನಾಡಿಮಿಡಿತ ತಿಳಿದಿಲ್ಲ. ನೆಲಕಚ್ಚಿರುವ ಜೆಡಿಎಸ್ ಪಕ್ಷವನ್ನು ಅವರಿಂದ ಗೆಲುವಿನ ದಡ ಸೇರಿಸುವುದು ಕಷ್ಟಸಾಧ್ಯ ಎಂದು ಹೇಳಲಾಗುತ್ತಿರುವ ಹೊತ್ತಿನಲ್ಲಿ ಒಳಒಪ್ಪಂದದ ಆರೋಪ ಕೇಳಿ ಬಂದಿದೆ. ಪ್ರಚಾರದ ಸಂದರ್ಭದಲ್ಲಿ ಗ್ರಾಮವೊಂದರಲ್ಲಿ ಈ ಕುರಿತು ಮಾತನಾಡಿರುವ ಅವರು, ಮಾಜಿ ಸೈನಿಕನ ಪತ್ನಿ ನಾನು. ಡೀಲ್ ಆಗುವ ಪ್ರಶ್ನೆಯೇ ಇಲ್ಲ. ನನಗೆ ಹಣದ ಅವಶ್ಯಕತೆ ಇಲ್ಲ. ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಸಧ್ಯ ಡೀಲ್ ಅನ್ನೋ ಹೊಗೆ ಆಡುತ್ತಿದೆ. ಅದು ಬೆಂಕಿ ಇಲ್ಲದೆ ಆಡುತ್ತಿದೆಯಾ ಇಲ್ಲವಾ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!