‘ಬರ’ಗಾಲಕೋಟೆಯೊಳಗಿನ ಕಣ್ಣೀ(ನೀ)ರು ಕಥೆ

1005

ರಾಮಾಯಣ ಕಾಲದಿಂದ ಗುರುತಿಸಿಕೊಂಡಿರುವ ಊರು ಬಾಗಲಕೋಟೆ. ಸಾಕಷ್ಟು ಐತಿಹಾಸಿಕ ಹಿನ್ನೆಲೆ ಇರುವ ಜಿಲ್ಲೆ ಮುಳುಗಡೆಯಿಂದ ಸ್ಥಳಾಂತರಗೊಂಡು, ಏಷ್ಯಾದಲ್ಲಿಯೇ ಅತೀ ದೊಡ್ಡ ನಗರದ ಮೂಲ ಅಸ್ತಿತ್ವವೇ ಮುಕ್ಕಾಗಿದೆ. ಮೂರು ನದಿಗಳಿಂದ ಕೂಡಿರುವ ಜಿಲ್ಲೆಯಲ್ಲಿರುವ ನೀರಿನ ಸಮಸ್ಯೆ ಬಗ್ಗೆ ಪತ್ರಕರ್ತ ಪರುಶುರಾಮ್ ಪೇಟ್ಕರ್ ಬರೆದ ಲೇಖನದಲ್ಲಿ ಅನಾವರಣಗೊಂಡಿದೆ…

ವಿಜಯಪುರ ಜಿಲ್ಲೆಯಿಂದ 1997ರಲ್ಲಿ ಪ್ರತ್ಯೇಕಗೊಂಡ ಬಾಗಲಕೋಟೆ ಸ್ವತಂತ್ರ ಜಿಲ್ಲೆಯಾಯ್ತು. ಪುರಾಣ ಪ್ರಸಿದ್ಧ ನಗರ, ಗದಗ, ಬೆಳಗಾವಿ, ವಿಜಯಪುರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡಿದೆ. ಇಂಥಾ ಜಿಲ್ಲೆಯಲ್ಲಿ ಮೂರು ನದಿಗಳು ಹರಿಯುತ್ತವೆ. ಆದ್ರೆ, ಏನು ಪ್ರಯೋಜನ, ಹನಿ ನೀರಿಗೂ ಇಲ್ಲಿನ ಜನ ಹೈರಾಣಾಗ್ತಿದ್ದಾರೆ.

ಮುಳುಗಡೆ ನಗರಿ ಎಂದು ಕರೆಸಿಕೊಳ್ಳುವ ಬಾಗಲಕೋಟೆ ಅನೇಕ ಸಮಸ್ಯೆಗಳನ್ನ ಎದುರಿಸುತ್ತಿದೆ. ಅದರಲ್ಲಿ ಕುಡಿಯುವ ನೀರಿನ ಸಮಸ್ಯೆ, ಬರ ನಿರ್ವಹಣೆ, ರೈತರು ಬೆಳೆದ ಬೆಳೆಗೆ ಸಿಗದ ಬೆಲೆ.. ಇಷ್ಟೆಲ್ಲ ಸಮಸ್ಯೆಗಳು ತಾಂಡವಾಡ್ತಿದ್ರೂ ರಾಜ್ಯ ಮತ್ತು ಕೇಂದ್ರದ ಜನಪ್ರತಿನಿಧಿಗಳು ಮಾತ್ರ ಕಂಡು ಕುರುಡರಾಗಿದ್ದಾರೆ. ಹೀಗಾಗಿ ಬರ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಜನಪ್ರತಿನಿಧಿಗಳ ಭಾಷಣದಲ್ಲಿ ಮಾತ್ರವಿದೆ. ಕಾರಣ ಸರಕಾರಗಳಿಂದ ಬರುವ ಅಂದಾಜು 13 ರಿಂದ 15 ಕೋಟಿ ಅನುದಾನ ಎಲ್ಲಿ ಕಡಿತವಾಗುತ್ತದೆ ಎಂಬ ಭಾವನೆ ಅವರದ್ದಾಗಿದೆ. ರಾಜಕೀಯ ಲೆಕ್ಕಾಚಾರದಲ್ಲೇ ಜನಪ್ರತಿನಿಧಿಗಳು ಜಿಲ್ಲಾಭಿವೃದ್ಧಿಯ ಲೆಕ್ಕ ಹಾಕುವಂತೆ ಕಾಣುತ್ತಿದೆ.!

ಬತ್ತಿದ ಕೃಷ್ಣೆಯ ಒಡಲು

ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣ, ಘಟಪ್ರಭಾ, ಮಲಪ್ರಭಾ ಮೂರು ನದಿಗಳು ಹರಿಯುತ್ತವೆ. ಜೊತೆಗೆ ಮುಳುಗಡೆಗೆ ಕಾರಣವಾದ ಆಲಮಟ್ಟಿ ಹಿನ್ನೀರು ಆರು ತಿಂಗಳ ಕಾಲ ಇರುತ್ತದೆ. ಆದರೆ ಜಿಲ್ಲೆಯ ನೀರಿನ ಸಮಸ್ಯೆಗೆ ಇರುವ ನೀರನ್ನ ಸದ್ಬಳಕೆ ಮಾಡಿಕೊಳ್ಳುವಲ್ಲಿ ಜನಪ್ರತಿನಿಧಿಗಳು ಜಾಣ ಮೌನ ತಾಳಿದ್ದಾರೆ. ಇದರ ಪರಿಣಾಮ ಬೇಸಿಗೆ ಶುರುವಾದ್ರೆ ಸಾಕು ಜಿಲ್ಲೆಯ ಜನಕ್ಕೆ ಕುಡಿಯಲು ನೀರು ಸಿಗುವುದಿಲ್ಲ. ಆ ಕಡೆ ಸರಿಯಾಗಿ ಮಳೆಯಿಲ್ಲದ ಕಾರಣ ರೈತರು, ಮೂಕಪ್ರಾಣಿಗಳು, ಪಕ್ಷಿಸಂಕುಲ ನರಳಾಡ್ತವೆ. ಅತ್ತ ಮುಧೋಳ ಮತ್ತು ಜಮಖಂಡಿ ಭಾಗದಲ್ಲಿ ಹಿನ್ನೀರು ಬಳಕೆಯಿಂದ ಅಲ್ಪ ಸ್ವಲ್ಪ ಹಸಿರು ಕಾಣಬಹುದು. ಆದ್ರೂ ಮುಧೋಳದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದೆ ಇದೆ.

ಜಿಲ್ಲೆಯಲ್ಲಿರುವ ಕೆರೆಗಳು:

ಇನ್ನು ಕೆರೆಗಳತ್ತ ಗಮನ ಹರಿಸಿದ್ರೆ, ಸಣ್ಣ ನೀರಾವರಿ ಇಲಾಖೆಗೆ(ಎಂಐ) ಒಳಪಡುವ ಒಟ್ಟು ಕೆರೆಗಳು 64 ಇವೆ. ಜಿಲ್ಲಾ ಪಂಚಾಯಿತಿಗೆ(ಆರ್‌ಡಿಪಿಆರ್) ಒಳಪಡುವ ಕೆರೆಗಳು 172 ಇವೆ. ಒಟ್ಟು ಜಿಲ್ಲೆಯಲ್ಲಿ 236 ಕೆರೆಗಳಿವೆ. ದೌರ್ಭಾಗ್ಯವೆಂದರೆ ಬಹುತೇಕ ಕೆರೆಗಳಲ್ಲಿ ಹೂಳು ತುಂಬಿದೆ. ಹೀಗಾಗಿ ಗ್ರಾಮೀಣ ಪ್ರದೇಶದ ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ಜಿಲ್ಲೆಯಲ್ಲಿ ಬರೋಬ್ಬರಿ 209 ಜನವಸತಿಗಳಲ್ಲಿ ಕುಡಿಯುವ ನೀರಿನ ತೊಂದರೆ ಇದೆ. ಹೆಚ್ಚಾಗಿ ಬಾದಾಮಿ, ಹುನಗುಂದ ತಾಲೂಕಿನಲ್ಲಿ ನೀರಿನ ಸಮಸ್ಯೆ ಕಂಡು ಬರುತ್ತದೆ. ಜಿಲ್ಲೆಯ 25 ಗ್ರಾಮಗಳಲ್ಲಿ 47 ಟ್ಯಾಂಕರಗಳ ಮೂಲಕ ಹಾಗೂ 33 ಗ್ರಾಮಗಳಿಗೆ 42 ಖಾಸಗಿ ಬೋರ್ ವೆಲ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಮೂರು ನದಿ, ಇಷ್ಟೊಂದು ಕೆರೆಗಳನ್ನ ಹೊಂದಿದ ಜಿಲ್ಲೆ ಕುಡಿಯುವ ನೀರಿಗೂ ಗತಿಯಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಆಲಮಟ್ಟಿ ಜಲಾಶಯ

ಜಿಲ್ಲೆಯಲ್ಲಿನ ರೈತರು:

ಬಾಗಲಕೋಟೆ ಜಿಲ್ಲೆಯಲ್ಲಿ ಅತೀ ಸಣ್ಣ ರೈತರು  69,742 ( ಶೇ.30.62) ರಷ್ಟಿದ್ದು. ಅವರು 40,350.7 (ಶೇ.8.28) ರಷ್ಟು ಹೆಕ್ಟರ್‌ಪ್ರದೇಶದಲ್ಲಿ ತಮ್ಮ ಕೃಷಿ ಚಟುವಟಿಕೆ ಮಾಡುತ್ತಾರೆ. ಸಣ್ಣ ರೈತರು ಒಟ್ಟು 75,345 (ಶೇ.33.12) ರಷ್ಟಿದ್ದು, 10,93,74.06 (ಶೇ. 22.46) ಹೆಕ್ಟರ್ ಭೂಮಿಯನ್ನ ಕೃಷಿಗೆ ಬಳಸುತ್ತಾರೆ. ಇತರೆ ರೈತರು ಅಂತ ಬಂದಾಗ 82,644 (ಶೇ.36.26) ರಷ್ಟಿದ್ದು 33,72,91.38 (ಶೇ.69.26) ಹೆಕ್ಟರ್‌ನಷ್ಟು ಭೂಮಿಯನ್ನ ಕೃಷಿಗಾಗಿ ಬಳಕೆ ಮಾಡುತ್ತಿದ್ದಾರೆ. ಒಟ್ಟು ಸೇರಿ ಜಿಲ್ಲೆಯಲ್ಲಿ 2,27,731 ಜನ ರೈತರಿದ್ದಾರೆ. ಒಟ್ಟು 5,87,116 ಹೆಕ್ಟರ್‌ನಷ್ಟು ಭೂಮಿ ಕೃಷಿಗೆ ಮೀಸಲಾಗಿದೆ. ಇನ್ನು ಸಾಗುವಳಿ ಕ್ಷೇತ್ರ 4,68,838 ಹೆಕ್ಟರ್, ನೀರಾವರಿ 2,45,616 ಹೆಕ್ಟರ್ ನಷ್ಟಿದೆ.

ಇಷ್ಟೊಂದು ಪ್ರಮಾಣದಲ್ಲಿ ಕೃಷಿ ಚಟುವಟಿಕೆ ಇರುವ ಜಿಲ್ಲೆಯಲ್ಲಿ ಬರಗಾಲ ಅನ್ನೋದು ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿದೆ. ಬತ್ತುತ್ತಿರುವ ನದಿಗಳು, ಹೂಳು ತುಂಬಿಕೊಂಡಿರುವ ಕೆರೆಗಳು, ಸಂಪೂರ್ಣವಾಗಿ ಕುಸಿದಿರುವ ಅಂತರ್ಜಲ, ಮಳೆನೀರು ಸಂಗ್ರಹಣೆ ಘಟಕ ಇಲ್ಲದಿರುವುದು, ಅಭಿವೃದ್ಧಿ ಹೆಸರಿನಲ್ಲಿ ನೀರಿನ ಮೂಲಗಳಿಗೆ ಹೊಡೆತ ಬಿಳ್ತಿರುವ ಕಾರಣಗಳಿಂದ ಬಾಗಲಕೋಟೆ ಅನ್ನೋದು ಬರಗಾಲಕೋಟೆಯಾಗಿದೆ.

 ಜಿಲ್ಲೆಯ ಸಂಕ್ಷಿಪ್ತ ಪರಿಚಯ:

ಜಿಲ್ಲೆಯ ಒಟ್ಟು ಭೌಗೋಳಿಕ ಕ್ಷೇತ್ರ 6,575 ಚ.ಕಿ.ಮೀ ಇದೆ. 11 ತಾಲೂಕುಗಳಿವೆ. ಈ ಹಿಂದೆ 7 ಇದ್ದು, ಹೊಸದಾಗಿ 4 ಸೇರಿಸಿ 11 ಆಗಿವೆ. 602 ಹಳ್ಳಿಗಳಿವೆ. ಹೋಬಳಿಗಳ ಸಂಖ್ಯೆ 18 ಇದೆ. ಒಟ್ಟು ಜನಸಂಖ್ಯೆ 18,89,752 (2011 ಜನಗಣತಿ ಪ್ರಕಾರ). ಜಿಲ್ಲೆಯ ಸಾಕ್ಷರತಾ ಪ್ರಮಾಣ ಒಟ್ಟು ಶೇ.68.82 ರಷ್ಟಿದೆ. ಅದರಲ್ಲಿ ಪುರುಷರು ಶೇ.79.23ರಷ್ಟಿದ್ದರೇ, ಶೇ.58.40ರಷ್ಟು ಮಹಿಳೆಯರು ಶಿಕ್ಷಣವಂತರಿದ್ದಾರೆ. ಬಾಗಲಕೋಟೆ ಮತ್ತು ಜಮಖಂಡಿಯಲ್ಲಿ ಕಂದಾಯ ಉಪ ವಿಭಾಗಗಳಿವೆ.

ಸಾಂದರ್ಭಿಕ ಚಿತ್ರ

ಇಷ್ಟೆಲ್ಲ ಸಮಸ್ಯೆಗಳಿಂದ ಬಳಲುತ್ತಿರುವ ಜಿಲ್ಲೆಗೆ ಸರಿಯಾಗಿ ನೀರು ಸಿಗುವಂತೆ ಮಾಡಬೇಕಿದೆ. ನದಿಗಳ ಬತ್ತುವಿಕೆಗೆ ವೈಜ್ಞಾನಿಕ ಕಾರಣ ಹುಡುಕುವುದು, ಕೆರೆಗಳ ಪುನರುಜ್ಜೀವನ, ಅಂತರ್ಜಲ ಹೆಚ್ಚಲು ಇಂಗುಗುಂಡಿ ವ್ಯವಸ್ಥೆ, ಆಲಮಟ್ಟಿ ಹನ್ನೀರನ್ನ ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಜಿಲ್ಲೆಯ ಜಲದಾಹ ತಣಿಸಬೇಕಿದೆ. ಇಲ್ಲದೇ ಹೋದ್ರೆ ಮುಳುಗಡೆ ನಾಡಿನ ಜನರ ಬದುಕು ಸಂಪೂರ್ಣ ಹಿನ್ನೀರಿನಲ್ಲಿ ಮುಳುಗಿ ಹೋಗಲಿದೆ. ಹೀಗಾಗಬಾರದು ಅಂದ್ರೆ, ಜನಪ್ರತಿನಿಧಿಗಳು, ಅಧಿಕಾರಿಗಳು ಮೊದ್ಲು ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನ ಕೈಗೊಳ್ಳಬೇಕು. ಆಗ ಬಾಗಲಕೋಟೆ ಮತ್ತೆ ತನ್ನ ಹಳೆ ಸೌಂದರ್ಯದಿಂದ ಕಂಗೊಳಿಸುತ್ತೆ. ಜನರ ಬದುಕು ಹಸನಾಗುತ್ತೆ.

ಪರುಶುರಾಮ್ ಪೇಟ್ಕರ್, ಪತ್ರಕರ್ತರು



Leave a Reply

Your email address will not be published. Required fields are marked *

error: Content is protected !!