ಅಧ್ಯಕ್ಷ ಸ್ಥಾನಗಳು ಮಾರಾಟಕ್ಕಿವೆ: ಡಾ.ಚನ್ನಪ್ಪ ಕಟ್ಟಿ

391

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿಗಳ ಬಗ್ಗೆ ಸಂಶಯ ಮೂಡುತ್ತಿದೆ. ಇದರಲ್ಲಿ ಕೊಡುಕೊಳ್ಳುವಿಕೆಯ ವ್ಯವಹಾರ ನಡೆದಿದೆ. ಅಧ್ಯಕ್ಷ ಸ್ಥಾನಗಳಿಗೆ 2 ಲಕ್ಷ, 4 ಲಕ್ಷ ರೂಪಾಯಿ ಕೊಡಬೇಕು ಅಂತಾ ಕೇಳುವ ಸ್ಥಿತಿಗೆ ಬಂದಿದೆ ಅಂತಾ ಹಿರಿಯ ಕಥೆಗಾರ ಡಾ.ಚನ್ನಪ್ಪ ಕಟ್ಟಿ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ವಿದ್ಯಾಚೇತನ ಪ್ರಕಾಶನ ಹಾಗೂ ಮಕ್ಕಳ ಕಲ್ಯಾಣ ಪ್ರತಿಷ್ಠಾನ ಸಹಯೋಗದಲ್ಲಿ ನಡೆದ ರಾಜ್ಯ ಮಟ್ಟದ ವಿದ್ಯಾಚೇತನ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿ ಈ ರೀತಿ ಹೇಳಿದರು. ಸಂಘಟನೆಗಳ ಹೆಸರಿನಲ್ಲಿ ಈ ವರ್ಷ ನೀನು ನನಗೆ ಪ್ರಶಸ್ತಿ ಕೊಡು. ಮುಂದಿನ ವರ್ಷ ನಾನು ನಿನಗೆ ಪ್ರಶಸ್ತಿ ಕೊಡುತ್ತೇನೆ ಎನ್ನುವ ಮಟ್ಟಕ್ಕೆ ಬಂದಿದೆ. ಪ್ರಶಸ್ತಿಗಾಗಿ ಕೃತಿಗಳನ್ನು ಬರೆಯುವ ಮಾದರಿ ಬೆಳಸಿಕೊಳ್ಳಬಾರದು. ಸಹೃದಯ ಓದುಗನಿಗೆ ತಲುಪಿಸುವ ಕೆಲಸವಾಗಬೇಕು. ಬೆಳಗಾವಿಯ ಬಸವರಾಜ ಗಾರ್ಗಿ ಅವರ ಹಾಸ್ಟೇಲ್ ಮಕ್ಕಳ ಕಥೆ, ಸಿಂದಗಿಯ ಎಸ್.ಎಸ್.ಸಾತಿಹಾಳ ಅವರ ಹಾಡು ಕೋಗಿಲೆ ಹಾಡು ಕೃತಿಗಳು ಪ್ರಶಸ್ತಿಗೆ ಅರ್ಹವಾಗಿವೆ ಅಂತಾ ಹೇಳಿದರು.

ಪ್ರಶಸ್ತಿ ಆಯ್ಕೆ ಸಮಿತಿಯ ಮೂವರಲ್ಲಿ ಒಬ್ಬರಾದ ಮುಳವಾಡದ ಮಕ್ಕಳ ಸಾಹಿತಿ ಪ.ಗು ಸಿದ್ದಾಪುರ ಮಾತನಾಡಿ, ಪ್ರೌಢಸಾಹಿತ್ಯದಲ್ಲಿ ಇರುವ ಎಲ್ಲ ಪ್ರಕಾರಗಳು ಮಕ್ಕಳ ಸಾಹಿತ್ಯದಲ್ಲಿದೆ. ಇದೊಂದು ಪರಿಪೂರ್ಣ ಸಾಹಿತ್ಯ. ಸಾಹಿತ್ಯವನ್ನು ಸಂಖ್ಯೆಯಿಂದ ಅಳೆಯದೆ ಸತ್ವದಿಂದ ಅಳೆಯಬೇಕು. ಇಂತಹ ಸತ್ವ ಇರುವುದಕ್ಕೆ ಹಾಸ್ಟೇಲ್ ಮಕ್ಕಳ ಕಥೆ, ಹಾಡು ಕೋಗಿಲೆ ಹಾಡು ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಫಲಕ, ಶಾಲು, ಫಲಪುಷ್ಪ ಹಾಗೂ 5 ಸಾವಿರ ರೂಪಾಯಿ ನಗದು ನೀಡಿ ಗೌರವಿಸಲಾಯಿತು. ಇದೆ ವೇಳೆ ಜಯಶ್ರೀ ಕುಲ್ಕರ್ಣಿ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ವಿಜಯಪುರದ ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷರಾದ ಪ್ರೊ.ಎ.ಆರ್ ಹೆಗ್ಗನದೊಡ್ಡಿ ಅಧ್ಯಕ್ಷೀಯ ನುಡಿಗಳನ್ನಾಡಿದ್ದರು. ನಿವೃತ್ತ ಚಿತ್ರಕಲಾ ಶಿಕ್ಷಕ ಡಾ.ಜಿ.ಎಸ್ ಭೂಸಗೊಂಡ, ನಿವೃತ್ತ ಶಿಕ್ಷಕ ಎಂ.ಎಂ ಹೂಗಾರ ಉಪಸ್ಥಿತರಿದ್ದರು. ವಿದ್ಯಾಚೇತನ ಪ್ರಕಾಶನದ ಅಧ್ಯಕ್ಷ, ಹಿರಿಯ ಮಕ್ಕಳ ಸಾಹಿತಿ ಹ.ಮ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ರಾಚು ಕೊಪ್ಪ ಸ್ವಾಗತಿಸಿದರು. ಶಿಕ್ಷಕ ಶಿವಶರಣ ಗುಗ್ಗರಿ ನಿರೂಪಿಸಿದರು.

ಈ ವೇಳೆ ಹಿರಿಯ ಜಾನಪದ ವಿದ್ವಾಂಸ ಡಾ.ಎಂ.ಎಂ ಪಡಶೆಟ್ಟಿ, ಶಿವಣ್ಣ ಗವಸಾನಿ, ರಮೇಶ ಪೂಜಾರ, ವಿಜಯಕುಮಾರ, ರಾಜಶೇಖರ, ಡಾ.ಅನಿಲ, ಅರವಿಂದ ಸೇರಿ ಅನೇಕರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!